ಪದವೀಧರ ಮತಕ್ಷೇತ್ರ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಪ್ರತಾಪರೆಡ್ಡಿ

| Published : Feb 02 2024, 01:03 AM IST

ಪದವೀಧರ ಮತಕ್ಷೇತ್ರ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಪ್ರತಾಪರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಕುಟುಂಬದ ಒಡೆತನದಲ್ಲಿ ಸಾಮಾಜಿಕ ಕಾರ್ಯಗಳಿಗಾಗಿ ಹಲವಾರು ವರ್ಷಗಳ ಹಿಂದೆ ಟ್ರಸ್ಟ್ ಸ್ಥಾಪನೆ ಮಾಡಿ ಅದರ ಮೂಲಕ ಜನಪರ ಕಾರ್ಯ ಮಾಡಿಕೊಂಡು ಬರುವ ಮೂಲಕ ಎಲ್ಲಾ ವರ್ಗದ ಜನರ ಪ್ರೀತಿ ವಿಶ್ವಾಸ ಉಳಿಸಿಕೊಂಡಿದ್ದೇವೆ ಎಂದು ಬಳ್ಳಾರಿ ನಾರಾ ಪ್ರತಾಪರಡ್ಡಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಮುಂಬರುವ ಈಶಾನ್ಯ ಪಧವಿದರರ ಮತಕ್ಷೇತ್ರದಿಂದ ನಾನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಎಂದು ಖಚಿತ ಎಂದು ಬಳ್ಳಾರಿ ನಾರಾ ಪ್ರತಾಪರಡ್ಡಿ ಹೇಳಿದರು.

ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸಮ್ಮುಖದಲ್ಲಿ, ಯಾದಗಿರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಈ ಭಾಗದಲ್ಲಿ ಜೆಡಿಎಸ್ ಪಕ್ಷ ಅಷ್ಟೇನು ಸದೃಢವಾಗಿರಲಿಲ್ಲ, ಆದರೂ ನಾನು ಪರಿಶ್ರಮದಿಂದ ಎಲ್ಲರನ್ನು ಸಂಪರ್ಕ ಮಾಡಿ, ಯೋಜನೆಗಳನ್ನು ಅವರಿಗೆ ವಿವರಿಸಿದ ನಂತರ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸಿದರು ಎಂದು ತಿಳಿಸಿದರು.

ಚುನಾವಣೆಯಲ್ಲಿ ಗೆಲುವಿನ ಹತ್ತಿರಕ್ಕೆ ಬಂದಿದ್ದ ನಾನು ಮತದಾರರು ಚಲಾಯಿಸಿದ 10ಸಾವಿರ ಮತಗಳು ಕುಲಗೆಟ್ಟವು, ಅದರಲ್ಲಿ ನನಗೆ 3600 ಮತಗಳು ಬಂದಿದ್ದವು, ಅವು ಮತದಾರರು ಮಾಡಿದ ಸಣ್ಣ ಯಡವಟ್ಟಿನಿಂದ ನಾನು ಪರಾಜಯಗೊಳ್ಳಬೇಕಾಯಿತು, ನನ್ನ ವಿರುದ್ಧ ಸೋಲಬೇಕಾದವರು ಗೆಲುವು ಸಾಧಿಸಿದ್ದಾರೆ ಎಂದು ಹೇಳಿದರು.

ನಾನು ಚುನಾವಣೆಯಲ್ಲಿ ಸೋತ ದಿನದಿಂದಲೂ ಕೂಡ ಮತಕ್ಷೇತ್ರದ 7 ಜಿಲ್ಲೆಗಳ ಮತದಾರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಆದರೆ ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಬಳ್ಳಾರಿ ವಿಧಾನಸಭಾ ಕ್ಷೇತ್ರದಿಂದ ನನ್ನ ಸಹೋದರರನ ಪುತ್ರ ನಾರಾ ಭರತರೆಡ್ಡಿ ಕಾಂಗ್ರೆಸ್ ಪಕ್ಷದ ಟಿಕೇಟ್ ಪಡೆದು ಕಣಕ್ಕಿಳಿದರು, ಆ ಸಮಯದಲ್ಲಿ ಕಾಂಗ್ರೆಸ್ ಹೈ ಕಮಾಂಡ್ ಹಿರಿಯ ನಾಯಕರು ನನ್ನ ಜೊತೆಯಲ್ಲಿ ಮಾತನಾಡಿ, ದಯವಿಟ್ಟು ನೀವೂ ಈ ಚುನಾವಣೆಯಲ್ಲಿ ಭರತರೆಡ್ಡಿ ಅವರನ್ನು ಬೆಂಬಲಿಸಿ, ಗೆಲ್ಲಿಸಿ, ಮುಂಬರುವ ಈಶಾನ್ಯ ಪದವಿಧರ ಮತಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಅವಕಾಶ ನೀಡುತ್ತೇವೆ ಎಂದು ಭರವಸೆ ನೀಡಿದ್ದರು.

ಅದರಂತೆ, ನಾನೂ ನನ್ನ ತಂಡದೊಂದಿಗೆ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡು ಪುತ್ರನನ್ನು 38 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿಕೊಂಡು ಬಂದೆವು, ಈಗಾಗಲೇ ಕಾಂಗ್ರೆಸ್ ಪಕ್ಷದ 16ಕ್ಕೂ ಹೆಚ್ಚು ಶಾಸಕರು ಕಾಂಗ್ರೆಸ್ ಹೈಕಮಾಂಡ್‌ಗೆ ಈಶಾನ್ಯ ಪದವಿಧರ ಮತಕ್ಷೇತ್ರದಿಂದ ನನಗೆ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ಮನವಿ ಮಾಡಿದ್ದರೂ ಕೂಡ, ಹೈಕಮಾಂಡ್ ಹಾಲಿ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ಹುಮನಾಬಾದ್ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ ಎಂದರು.

ನಾನು ಕಳೆದ 40 ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿ ಪ್ರಾಮಾಣಿಕತೆ, ಬದ್ಧತೆ, ಉಳಿಸಿಕೊಂಡು ಸೇವಾ ಮನೋಭಾವದಿಂದ ಬಂದಿದ್ದೇನೆ. ನಮ್ಮ ಕುಟುಂಬದ ಒಡೆತನದಲ್ಲಿ ಸಾಮಾಜಿಕ ಕಾರ್ಯಗಳಿಗಾಗಿ ಹಲವಾರು ವರ್ಷಗಳ ಹಿಂದೆ ಟ್ರಸ್ಟ್ ಸ್ಥಾಪನೆ ಮಾಡಿ ಅದರ ಮೂಲಕ ಜನಪರ ಕಾರ್ಯ ಮಾಡಿಕೊಂಡು ಬರುವ ಮೂಲಕ ಎಲ್ಲಾ ವರ್ಗದ ಜನರ ಪ್ರೀತಿ ವಿಶ್ವಾಸ ಉಳಿಸಿಕೊಂಡಿದ್ದೇವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶಿವನಗೌಡ ಗುಳಬಾಳ, ಚಂದ್ರಶೇಖರ ಇತರರು ಉಪಸ್ಥಿತರಿದ್ದರು.