ಇಂದು ಪಿಇಎಸ್ ತಾಂತ್ರಿಕ ಕಾಲೇಜಿನಲ್ಲಿ ಪದವಿ ಪ್ರದಾನ

| Published : Sep 28 2024, 01:20 AM IST

ಸಾರಾಂಶ

ರಾಜ್ಯದ ೧೦ ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳ ಪೈಕಿ ಪಿಇಎಸ್ ಇಂಜಿನಿಯರಿಂಗ್ ಕಾಲೇಜು ಸಹ ಒಂದಾಗಿದ್ದು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸ್ವಾಯತ್ತತೆ ಪಡೆದು, ನಂತರ ಎನ್‌ಬಿಎ, (ಯುಜಿ ಮತ್ತು ಪಿಜಿ, ಯುಜಿಸಿ, ನ್ಯಾಕ್) ವತಿಯಿಂದ ಮಾನ್ಯತೆ ಪಡೆದಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ೧೫ನೇ ವರ್ಷದ ಪದವಿ ಪ್ರದಾನ ಸಮಾರಂಭ ಸೆ. ೨೮ರಂದು ಬೆಳಗ್ಗೆ ೧೧ ಗಂಟೆಗೆ ಕಾಲೇಜಿನ ಡಾ. ಎಚ್.ಡಿ. ಚೌಡಯ್ಯ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಎಚ್.ಎಂ.ನಂಜುಂಡಸ್ವಾಮಿ ತಿಳಿಸಿದರು.

ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸುತ್ತೂರು ಶ್ರೀಕ್ಷೇತ್ರದ ಪೀಠಾಧ್ಯಕ್ಷ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ನಡೆಯುವ ಸಮಾರಂಭದ ಅಧ್ಯಕ್ಷತೆಯನ್ನು ಪಿಇಟಿ ಅಧ್ಯಕ್ಷ ಕೆ.ಎಸ್. ವಿಜಯ್ ಆನಂದ್ ವಹಿಸುವರು. ಪಿಇಟಿ ಕಾರ್ಯದರ್ಶಿ ಎಸ್.ಎಲ್. ಶಿವಪ್ರಸಾದ್ ಪದವಿ ಪ್ರಮಾಣಪತ್ರ ಪ್ರದಾನ ಮಾಡುವರು ಎಂದರು.

ಪ್ರಸಕ್ತ ಸಾಲಿನಲ್ಲಿ ಸ್ನಾತಕ ಪದವಿಯಲ್ಲಿ ೭೫೮ ಮಂದಿ ವಿದ್ಯಾರ್ಥಿಗಳಿದ್ದು, ಈ ಪೈಕಿ ೬೮೭ ಮಂದಿ ಪದವಿ ಪಡೆದಿದ್ದಾರೆ. ಸ್ನಾತಕೋತ್ತರ ವಿಭಾಗದಲ್ಲಿ ೧೨೪ ಮಂದಿ ವಿದ್ಯಾರ್ಥಿಗಳ ಪೈಕಿ ೧೧೨ ಮಂದಿ ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರ ಪಡೆಯಲಿದ್ದಾರೆ. ೧೧ ವಿಭಾಗಗಳಿದಿದ್ದು, ಪ್ರತಿ ವಿಭಾಗದಿಂದಲೂ ತಲಾ ಒಬ್ಬರು ಚಿನ್ನದ ಪದಕ ಪಡೆದಿದ್ದಾರೆ. ೧೧೦ ಮಂದಿ ರ್‍ಯಾಂಕ್ ಗಳಿಸಿದ್ದಾರೆ ಎಂದು ಹೇಳಿದರು.

ರಾಜ್ಯದ ೧೦ ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳ ಪೈಕಿ ಪಿಇಎಸ್ ಇಂಜಿನಿಯರಿಂಗ್ ಕಾಲೇಜು ಸಹ ಒಂದಾಗಿದ್ದು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸ್ವಾಯತ್ತತೆ ಪಡೆದು, ನಂತರ ಎನ್‌ಬಿಎ, (ಯುಜಿ ಮತ್ತು ಪಿಜಿ, ಯುಜಿಸಿ, ನ್ಯಾಕ್) ವತಿಯಿಂದ ಮಾನ್ಯತೆ ಪಡೆದಿದೆ ಎಂದು ವಿವರಿಸಿದರು.

ತಾಂತ್ರಿಕ ಮತ್ತು ಆಡಳಿತ ಅಧ್ಯಯನ ವಿಷಯಗಳಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ತರಬೇತಿಯ ಜೊತೆಗೆ ಔದ್ಯೋಗಿಕ ಹಾಗೂ ಉದ್ಯಮಶೀಲತೆಯ ತರಬೇತಿಯನ್ನೂ ನೀಡುವ ಮೂಲಕ ಜಾಗತಿಕ ಶಿಕ್ಷಣ ಕ್ಷೇತ್ರಕ್ಕೆ ಅತ್ಯುತ್ತಮ ವ್ಯಕ್ತಿಗಳನ್ನು ಕೊಡುಗೆಯಾಗಿ ನೀಡುತ್ತಿದ್ದು, ರಾಜ್ಯದ ಉತ್ತಮ ತಾಂತ್ರಿಕ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು ಹೇಳಿದರು.

ಕಾಲೇಜಿನ ಪರೀಕ್ಷಾ ನಿಯಂತ್ರಕ ಕೆ.ಜಿ. ಮಹೇಂದ್ರಬಾಬು, ಉಪ ಪ್ರಾಂಶುಪಾಲ ಡಾ. ವಿನಯ್, ಅಕಾಡೆಮಿಕ್ ಡೀನ್ ಡಾ. ಬಿ. ದಿನೇಶ್ ಪ್ರಭು, ಡಾ. ಗಿರೀಶ್ ಬಾಬು, ಡಾ. ದಿವಾಕರ್ ಗೋಷ್ಠಿಯಲ್ಲಿದ್ದರು.