ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ನಿವೇಶನ ರಹಿತರಿಗೆ ೫ ಲಕ್ಷ ಮನೆ ವಿತರಿಸುವ ಕುರಿತಂತೆ ಸಚಿವ ಸಂಪುಟದಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ.
ಹಗರಿಬೊಮ್ಮನಹಳ್ಳಿ: ಅರ್ಹ ಬಡವರಿಗೆ ನಿವೇಶನ ಒದಗಿಸುವಲ್ಲಿ ಸರ್ಕಾರ ರಾಜ್ಯಾದ್ಯಂತ ೫ ಲಕ್ಷ ನಿವೇಶನ ಒದಗಿಸುವ ಪರಿಣಾಮಕಾರಿ ನಿರ್ಣಯ ಕೈಗೊಂಡಿದ್ದರೂ ಸಂಬಂಧಿಸಿದ ಗ್ರಾಪಂ ಆಡಳಿತಾಧಿಕಾರಿಗಳು ಹಾಗೂ ಕಾರ್ಯದರ್ಶಿಗಳು ಅರ್ಹ ಫಲಾನುಭವಿಗಳಿಂದ ಅರ್ಜಿ ಸ್ವೀಕರಿಸದೇ ನಿವೇಶನ ರಹಿತರಿಗೆ ಅನ್ಯಾಯವೆಸಗುತ್ತಿದ್ದಾರೆ ಎಂದು ಗ್ರಾಮೀಣ ಕೂಲಿ ಕಾರ್ಮಿಕರ (ಗ್ರಾಕೂಸ್) ಜಿಲ್ಲಾ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತಂತೆ ಗ್ರಾಕೂಸ್ ಸಂಘಟನೆಯ ಜಿಲ್ಲಾ ಸಂಚಾಲಕಿ ಮರಬ್ಬಿಹಾಳ್ ಅಕ್ಕಮಹಾದೇವಿ ಮಂಗಳವಾರ ಕನ್ನಡಪ್ರಭದೊಂದಿಗೆ ಮಾತನಾಡಿ, ವಸತಿ ರಹಿತರಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ನಮ್ಮ ಸಂಘಟನೆಯ ನೇತೃತ್ವದಲ್ಲಿ ಕಳೆದ ೮ ವರ್ಷದಿಂದ ನಿರಂತರವಾಗಿ ಹೋರಾಟ ಮಾಡಲಾಗಿದೆ. ಆದರೆ ಬಡವರಿಗೆ ಸೂರು ಇನ್ನೂ ಮರೀಚಿಕೆಯಾಗಿದೆ ಎಂದು ಖೇದ ವ್ಯಕ್ತಪಡಿಸಿದರು.ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ನಿವೇಶನ ರಹಿತರಿಗೆ ೫ ಲಕ್ಷ ಮನೆ ವಿತರಿಸುವ ಕುರಿತಂತೆ ಸಚಿವ ಸಂಪುಟದಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ. ಕಂದಾಯ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಸಮೀಕ್ಷೆ ನಡೆಸಿ ತಾಲೂಕಿನ ನಾನಾ ಗ್ರಾಮಗಳಲ್ಲಿ ಸರ್ಕಾರಿ ಜಮೀನು ಗುರುತಿಸಿ ಪಹಣಿ ಕಾಯ್ದಿರಿಸುವ ಕಾರ್ಯ ನಡೆಸಿದ್ದಾರೆ ಎಂದರು.
ಆದರೆ ಯಾವುದೇ ಗ್ರಾಪಂನಲ್ಲಿ ಸಂಬಂಧಿಸಿದ ಅಧಿಕಾರಿಗಳು ನಿವೇಶನ ರಹಿತರಿಗೆ ಅರ್ಜಿ ಸಲ್ಲಿಸುವ ಕುರಿತಂತೆ ಮಾಹಿತಿ ನೀಡುತ್ತಿಲ್ಲ. ೨೦೧೭ರ ಆನ್ ಲೈನ್ ಸಮೀಕ್ಷೆಯಲ್ಲಿ ಸಾಕಷ್ಟು ಬಡವರನ್ನು ಯೋಜನೆಗೆ ಸೇರ್ಪಡೆಗೊಳಿಸಿಲ್ಲ ಎಂದು ನಮ್ಮ ಸಂಘಟನೆ ಕಳೆದ ೮ ವರ್ಷದಿಂದ ಹೋರಾಟ ನಡೆಸಿದರೂ ಅರ್ಹರನ್ನು ಯೋಜನೆಯಿಂದ ಹೊರಗಿಡುವ ಸಂಚು ನಡೆದ ಪರಿಣಾಮವಾಗಿ ಸಾಕಷ್ಟು ಬಡವರು ಅರ್ಜಿ ಸಲ್ಲಿಸದೇ ವಸತಿ ಹೀನರಾಗಿಯೇ ಉಳಿದಿದ್ದಾರೆ ಎಂದು ಆರೋಪಿಸಿದರು.ಫಲಾನುಭವಿಗಳು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸದ ಹೊರತು ನಿವೇಶನ ಒದಗಿಸಲಾಗುವುದಿಲ್ಲ ಎಂಬ ಸರ್ಕಾರದ ಸ್ಪಷ್ಟ ಆದೇಶದ ಹಿನ್ನೆಲೆ ಕೂಡಲೇ ಜಿಪಂ ಅಧಿಕಾರಿಗಳು ಮಧ್ಯ ಪ್ರವೇಶಿಸಿ ವಸತಿಹೀನರಿಗೆ ಅರ್ಜಿ ಸಲ್ಲಿಸಲು ಸಾಕಷ್ಟು ಕಾಲಾವಕಾಶ ಒದಗಿಸಬೇಕು. ನಿವೇಶನ ರಹಿತರನ್ನು ಗುರುತಿಸಿ ಅರ್ಜಿ ಸಲ್ಲಿಸುವಂತೆ ಸಂಬಂಧಿಸಿದ ಗ್ರಾಪಂ ಆಡಳಿತಾಧಿಕಾರಿಗಳಿಗೆ ಸ್ಪಷ್ಟ ಆದೇಶ ನೀಡಬೇಕು ಎಂದು ಆಗ್ರಹಿಸಿದರು.