ಸಾರಾಂಶ
ಜಯಪುರ ಗ್ರಾಮ ಪಂಚಾಯ್ತಿ ಗ್ರಾಮಸಭೆ
ಕನ್ನಡಪ್ರಭ ವಾರ್ತೆ, ಕೊಪ್ಪಜಯಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದು, ಪಂಚಾಯ್ತಿಯ ಸೀಮಿತ ಅನುದಾನ ಬಳಸಿಕೊಂಡು ರಸ್ತೆ, ಕುಡಿಯುವ ನೀರು ಚರಂಡಿ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದೇವೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಕರುಣಾಕರ ಹೇಳಿದರು. ಜಯಪುರ ಗ್ರಾಪಂ ಸಭೆಯಲ್ಲಿ ಮಾತನಾಡಿ, ಗ್ರಾಮ ಪಂಚಾಯತ್ ನಿಂದ ಹತ್ತಾರು ಅಭಿವೃದ್ಧಿ ಕೆಲಸಗಳನ್ನು ಸದಸ್ಯರ ಸಹಕಾರ ಪಡೆದು ಮಾಡಲಾಗಿದೆ. ಸುಮಾರು ₹೯ ಲಕ್ಷ ಅನುದಾನದಲ್ಲಿ ವಿನಾಯಕ ನಗರದ ರಸ್ತೆ ಕಾಂಕ್ರೀಟಿಕರಣ ಮಾಡಿದ್ದೇವೆ. ಹಲವು ವರ್ಷಗಳಿಂದ ಶಾಸಕರು ಸೇರಿದಂತೆ ಹಲವರಿಗೆ ಮನವಿ ಮಾಡಿದ್ದರು. ಈ ರಸ್ತೆ ನಿರ್ಮಾಣಕ್ಕೆ ಯಾರು ಮನಸ್ಸು ಮಾಡಿರಲಿಲ್ಲ. ಗ್ರಾಪಂ ವ್ಯಾಪ್ತಿಯಲ್ಲಿ ೧೦ ಎಕರೆ ನಿವೇಶನಕ್ಕಾಗಿ ಮಂಜೂರಾಗಿದ್ದು ಎಲ್ಲಾ ಅರ್ಹ ಅರ್ಜಿದಾರ ನಿವೇಶನ ರಹಿತರಿಗೆ ನಿವೇಶನ ನೀಡಲಿದ್ದೇವೆ ಎಂದರು.
ಪಿಡಿಓ ಶಿವಕುಮಾರ್ ಮಾತನಾಡಿ ೨೦೨೨-೨೩ ರಲ್ಲಿ ಇದ್ದ ₹೧೩.೫ ಲಕ್ಷ ರು.ಗಳ ಆದಾಯದ ಬೇಡಿಕೆಯನ್ನು ೨೦೨೪-೨೫ ಸಾಲಿಗೆ ಸುಮಾರು ₹೫೦ ಲಕ್ಷ ರು. ಗಳಿಗೆ ಏರಿಕೆ ಮಾಡಿದ್ದೂ, ಸರ್ಕಾರಿ ನಿಯಮದಂತೆ ತೆರಿಗೆ ಪರಿಷ್ಕರಣೆ ಹಾಗೂ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆ ನಡೆಸಿದ ಪರಿಣಾಮ ಗ್ರಾಪಂ ಆದಾಯ ಏರಿದೆ. ಇದರಿಂದ ಈ ವರ್ಷ ಗ್ರಾಪಂ ಸ್ವಂತ ಹಣಕಾಸಿನ ಮೂಲಕ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಗಲಿದೆ. ಎಸ್ ಸಿ, ಎಸ್ ಟಿ ಸುಮುದಾಯದ ಅಭಿವೃದ್ಧಿಗೆ ಸಾಕಷ್ಟು ಹಣ ಮೀಸಲಿರಿಸಿದ್ದು, ಶಿಕ್ಷಣ, ವೈದ್ಯಕೀಯ ನೆರವು, ಹಳೆಮನೆ ರಿಪೇರಿಗೆ ₹೧೫ ಲಕ್ಷ ಹಣ ಮೀಸಲು ಇರಿಸಿದ್ದೇವೆ. ಆಗಸ್ಟ್ ೧೫ರಂದು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ೧೦ ಮತ್ತು ೧೨ನೇ ತರಗತಿಯಲ್ಲಿ ಶೇ. ೯೦ ಕಿಂತ ಜಾಸ್ತಿ ಅಂಕ ಪಡೆದ ಎಲ್ಲಾ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜಾತಿ ಧರ್ಮದ ಮಾನದಂಡ ಪರಿಗಣಿಸದೆ ಪ್ರತಿಭಾ ಪುರಸ್ಕಾರ ಮಾಡುವ ತೀರ್ಮಾನ ಮಾಡಲಾಗಿದೆ ಎಂದರು.ಸದಸ್ಯ ಪ್ರವೀಣ್ ಕುಮಾರ್ ಮಾತನಾಡಿ, ಜಯಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ನಡೆದಿದ್ದು, ಜಲದುರ್ಗ ಭಾಗವೊಂದರಲ್ಲೇ ಸುಮಾರು ₹೨೫ ಲಕ್ಷಕ್ಕೂ ಹೆಚ್ಚು ಕೆಲಸವಾಗಿದೆ. ರಾಜಕೀಯ ದುರುದ್ದೇಶ ದಿಂದ ಕೆಲಸವಾಗಿಲ್ಲ ಎಂಬ ಕೆಲವರ ಆರೋಪ ಸರಿಯಲ್ಲ. ಕಾಮಗರಿಗಳ ನೈಜ ವರದಿ ಪಡೆದು ಮಾತಾಡಬೇಕು ಎಂದರು.
ಸಭೆಯಲ್ಲಿ ಸಾಮಾಜಿಕ ಕಾರ್ಯಕರ್ತ ಕೌಳಿ ರಾಮು ಮಾತನಾಡಿ, ಹೊಸ ಆಸ್ಪತ್ರೆ ಕಟ್ಟಡದ ಮುಖ್ಯ ದ್ವಾರದ ಸಮೀಪ ಶವಾಗಾರದ ಕೊಠಡಿ ಮಾಡಿರುವುದು ಅವೈಜ್ಞಾನಿಕ ಎಂದರು.ಸ್ಥಳವಕಾಶದ ಕೊರತೆಯಿಂದ ಅಲ್ಲಿ ಮಾಡಲಾಗಿದೆ ಎಂದು ವೈದ್ಯಧಿಕಾರಿ ಡಾ. ಸುಧೀಂದ್ರ ಪ್ರತಿಕ್ರಿಯಿಸಿದರು.
ಸಭೆಯಲ್ಲಿ ಪೊಲೀಸ್, ಸಮಾಜ ಕಲ್ಯಾಣ ಕೃಷಿ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಗ್ರಾ ಪಂ ಉಪಾಧ್ಯಕ್ಷೆ ಜಯಮುರುಗೇಶ್, ಸದಸ್ಯರಾದ ಪಣಿರಾಜ್, ಶ್ರೀನಿವಾಸ್ ,ಸಂಪತ್, ಪಳನಿ ನಳಿನಿ, ರಮ್ಯಾ ವೆಂಕಟೇಶ್, ಶಕುಂತಲಾ ಹಾಗೂ ಇತರ ಸದಸ್ಯರು ಗ್ರಾಮಸ್ತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))