ಕಾಸರಕೋಡ ಗ್ರಾಪಂ ತುರ್ತುಸಭೆ ನೋಟಿಸ್‌ ಹಂಚಿದ ಪೊಲೀಸರು!

| Published : Feb 16 2025, 01:46 AM IST

ಸಾರಾಂಶ

ಹೊನ್ನಾವರ ತಾಲೂಕಿನ ಕಾಸರಕೋಡಿನ ಟೊಂಕಾ ಸಮೀಪದ ಹಿರೇಮಠ ಚರ್ಚ್ ಆವರಣದಲ್ಲಿ ಗುರುವಾರ ಮಧ್ಯಾಹ್ನ ನಡೆದ ಗ್ರಾಪಂ ತುರ್ತುಸಭೆಯ ನೋಟಿಸ್‌ನ್ನು ಪೊಲೀಸರು ಹಂಚಿದ್ದು, ಈಗ ಚರ್ಚೆಗೆ ಗ್ರಾಸವಾಗಿದೆ. ಪೊಲೀಸರ ಈ ಕ್ರಮ ಜನರಿಗೆ ಅಚ್ಚರಿ ಮೂಡಿಸುವ ಜತೆಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಹೊನ್ನಾವರ: ತಾಲೂಕಿನ ಕಾಸರಕೋಡಿನ ಟೊಂಕಾ ಸಮೀಪದ ಹಿರೇಮಠ ಚರ್ಚ್ ಆವರಣದಲ್ಲಿ ಗುರುವಾರ ಮಧ್ಯಾಹ್ನ ನಡೆದ ಗ್ರಾಪಂ ತುರ್ತುಸಭೆಯ ನೋಟಿಸ್‌ನ್ನು ಪೊಲೀಸರು ಹಂಚಿದ್ದು, ಈಗ ಚರ್ಚೆಗೆ ಗ್ರಾಸವಾಗಿದೆ.

ಸಾಮಾನ್ಯವಾಗಿ ಗ್ರಾಪಂ ಸಭೆಯ ನೋಟಿಸನ್ನು ಗ್ರಾಪಂ ಸಿಬ್ಬಂದಿ ಹಂಚುತ್ತಾರೆ. ವಿಶೇಷ ಸಂದರ್ಭಗಳಲ್ಲಿ ತುರ್ತುಸಭೆ ಕರೆಯಲಾಗುತ್ತದೆ. ಆದರೆ ಈ ಬಾರಿ ಪೊಲೀಸರು ಮನೆ ಮನೆಗೆ ತೆರಳಿ ನೋಟಿಸ್‌ ತಲುಪಿಸಿದ್ದಾರೆ.

ಈ ಸಭೆಯಲ್ಲಿ ಕಾಸರಕೋಡ ಬಂದರು ವಿಷಯದ ಬಗ್ಗೆ ಚರ್ಚೆಯಾಗಬೇಕಿತ್ತು. ಈ ಹಿನ್ನೆಲೆಯಲ್ಲಿ ಫೆ. 13ರಂದು ಮಧ್ಯಾಹ್ನ 3 ಗಂಟೆಗೆ ತುರ್ತು ಸಭೆ ಕರೆಯಲಾಗಿತ್ತು. ಬೆಳಗ್ಗೆ 11 ಗಂಟೆಯ ಹೊತ್ತಿಗೆ ಪೊಲೀಸರೇ ನೋಟಿಸ್ ಹಂಚಿದ್ದಾರೆ.

ಆದರೆ ಪೊಲೀಸರ ಈ ಕ್ರಮ ಜನರಿಗೆ ಅಚ್ಚರಿ ಮೂಡಿಸುವ ಜತೆಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ತುರ್ತು ಸಭೆ ಕರೆಯುವ ಅಗತ್ಯತೆ ಏನಿತ್ತು? ಈ ಸಭೆಯನ್ನು ನಡೆಸುವುದು ಕೇವಲ ಸಾರ್ವಜನಿಕರ ಕಣ್ಣುಕಟ್ಟುವ ಭಾಗವಾಗಿತ್ತಾ? ಪೊಲೀಸರು ಯಾರದೋ ಒತ್ತಡಕ್ಕೆ ಒಳಗಾದಂತಿದೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.

ಹಿಂದೆ ಈ ಭಾಗದ ಜನರು ಸಭೆ ಕರೆಯಿರಿ ಎಂದಾಗ ಅಧಿಕಾರಿಗಳು ಸ್ಪಂದಿಸಿರಲಿಲ್ಲ. ಅಲ್ಲದೆ ಹಿಂದೆ ನಡೆದ ಗ್ರಾಮಸಭೆಗೆ ಈ ಅಧಿಕಾರಿಗಳೂ ಹಾಜರಾಗಿರಲಿಲ್ಲ. ಇದೀಗ ಗ್ರಾಮಸ್ಥರಿಗೆ ನೆಪಮಾತ್ರಕ್ಕೆ ಮಾಹಿತಿ ನೀಡಿ ಸಭೆ ನಡೆಸುವ ಅಧಿಕಾರಿಗಳು ಯಾರ ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ಜನರು ಪ್ರಶ್ನಿಸಿದ್ದಾರೆ. ಅಲ್ಲದೆ ಪೊಲೀಸ್‌ ಇಲಾಖೆ ಮೂಲಕ ಖಾಸಗಿ ಕಂಪನಿಯರವರು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ.

ಖಾಸಗಿ ಕಂಪನಿಗೆ ಇಸಿ ಕ್ಲಿಯರೆನ್ಸ್‌ ಪಡೆಯಲು ತರಾತುರಿಯಲ್ಲಿ ಟೊಂಕಾ ವ್ಯಾಪ್ತಿಯ ಜನರ ಸಭೆಯನ್ನು ಕರೆದು, ಅವರ ಮೇಲೆ ಪ್ರಭಾವ ಬೀರುವ ಉದ್ದೇಶ ಈ ಸಭೆಯ ಹಿಂದೆ ಇತ್ತೇ ಎಂದು ಜನರು ಪ್ರಶ್ನಿಸಿದ್ದಾರೆ. ಅಲ್ಲದೆ ಜನ ಯಾವುದಕ್ಕೂ ಒಪ್ಪದಿದ್ದರೆ ಪಟ್ಟಾ ನೀಡುತ್ತೇವೆ ಅನ್ನುವ ಆಮಿಷ ಒಡ್ಡಲು ಸಿದ್ಧತೆ ನಡೆಸಲಾಗಿತ್ತು ಎಂದು ಹೇಳಲಾಗಿದೆ.

ಈ ಸಭೆಯಲ್ಲಿ ಯಾವೊಬ್ಬ ಜನಪ್ರತಿನಿಧಿಗಳಾಗಲಿ, ಸಾರ್ವಜನಿಕರಾಗಲಿ ಭಾಗವಹಿಸಿರಲಿಲ್ಲ. ಕೇವಲ ಸಭೆ ಕರೆದ ಅಧಿಕಾರಿಗಳು ಹಾಜರಿದ್ದರು.ಸಭೆಗೆ ಬಾರದ ಗ್ರಾಪಂ ಸದಸ್ಯರು: ಈ ಸಭೆಯ ಕುರಿತು ಜನಪ್ರತಿನಿಧಿಗಳಿಗೆ ಗೊತ್ತಿರಲಿಲ್ಲ. ರಾತ್ರಿ ೮ ಗಂಟೆಯ ಸುಮಾರಿಗೆ ನೋಟಿಸ್‌ಗೆ ಅಧ್ಯಕ್ಷರ ಸಹಿ ಹಾಕಿಕೊಂಡು ಬರಲಾಗಿದೆ. ನಾವು ಒಟ್ಟು ೨೭ ಸದಸ್ಯರಿದ್ದೇವೆ. ಆದರೆ ನಮಗೆ ಯಾವುದೇ ಸೂಚನೆ ನೀಡಿರಲಿಲ್ಲ. ಏಕಾಏಕಿ ಸಿದ್ಧಪಡಿಸಲಾದ ಗ್ರಾಮಸಭೆಯ ನೋಟಿಸನ್ನು ಪೊಲೀಸರ ಮುಖಾಂತರ ಹಂಚಲಾಗಿದೆ. ಪಿಡಿಒ ಕೇಳಿದರೆ ನಮಗೆ ಜಿಲ್ಲಾಧಿಕಾರಿ, ಪೊಲೀಸ್‌ ವರಿಷ್ಠಾಧಿಕಾರಿಗಳಿಂದ ಸೂಚನೆ ಬಂದಿದೆ. ಹೀಗಾಗಿ ಸಭೆಯನ್ನು ನಡೆಬೇಕಾಗಿದೆ ಎಂದು ಹೇಳಿದ್ದಾರೆ. ವಾಣಿಜ್ಯ ಬಂದರು ಯೋಜನೆ ಬಗ್ಗೆ ಮಾತನಾಡುವುದಾದರೆ ನೋಟಿಸ್ ಜಾರಿ ಮಾಡಬೇಕಿತ್ತು. ಆದರೆ ಅದ್ಯಾವುದು ಇರಲಿಲ್ಲ. ಹೀಗಾಗಿ ನಾವು ಎಲ್ಲ ೨೭ ಸದಸ್ಯರು ಈ ಸಭೆ ಬಹಿಷ್ಕರಿಸಿದ್ದೇವೆ ಎಂದು ಗ್ರಾಪಂ ಸದಸ್ಯರು ಹೇಳಿದ್ದಾರೆ.

ತಂತ್ರಗಾರಿಕೆ ಇದು: ನಮ್ಮ ದಾರಿ ತಪ್ಪಿಸುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಅವರ ಕೆಲಸ ಮಾಡಿಕೊಳ್ಳಲು ಈ ರೀತಿ ಪೋಲೀಸರನ್ನು ಬಳಕೆ ಮಾಡಿಕೊಂಡಿದ್ದಾರೆ. ಇದು ಒಂದು ಹುನ್ನಾರ. ಈ ಗ್ರಾಮಸಭೆಯ ನೊಟೀಸ್ ಎಲ್ಲರಿಗೂ ತಲುಪಿಲ್ಲ. ನಮ್ಮ ಮೀನುಗಾರರ ಒಗ್ಗಟ್ಟನ್ನು ಮುರಿಯಲು ಈ ರೀತಿಯ ತಂತ್ರ ಮಾಡಿದ್ದಾರೆ. ನಮ್ಮಲ್ಲಿ ಒಡಕನ್ನು ಮೂಡಿಸಿ ಅವರ ಕೆಲಸವನ್ನು ಮಾಡಿಕೊಳ್ಳುವ ತಂತ್ರಗಾರಿಕೆ ಇದಾಗಿದೆ ಎಂದು ಕರಾವಳಿ ಮೀನುಗಾರರ ಕಾರ್ಮಿಕ ಸಂಘ ಅಧ್ಯಕ್ಷ ರಾಜೇಶ್ ತಾಂಡೇಲ್ ಹೇಳಿದರು.