ಅಧ್ಯಕ್ಷರು, ಪಿಡಿಓ ವಿರುದ್ಧ ಪ್ರತಿಭಟಿಸಿದ ಗ್ರಾಪಂ ಉಪಾಧ್ಯಕ್ಷ, ಸದಸ್ಯರು

| Published : Oct 31 2025, 01:30 AM IST

ಅಧ್ಯಕ್ಷರು, ಪಿಡಿಓ ವಿರುದ್ಧ ಪ್ರತಿಭಟಿಸಿದ ಗ್ರಾಪಂ ಉಪಾಧ್ಯಕ್ಷ, ಸದಸ್ಯರು
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ಜೆಜೆಎಂನ ಕಾಮಗಾರಿ ಕಳಪೆಯಾಗಿದೆ. ವಿಶೇಷ ಚೇತನರ ಶ್ರೇಯೋಭಿವೃದ್ಧಿಗಾಗಿ ಇಡಲಾಗಿರುವ ಹಣ ಲೋಪವಾಗಿದೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಿಂಗಳಾದರೂ ಕಚೇರಿಗೆ ಬಾರದ ಪಿಡಿಓ, ತಮ್ಮ ವ್ಯಾಪ್ತಿಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ ಚರ್ಚಿಸಿ ಬಗೆಹರಿಸಲು ಮುಂದಾಗದ ಅಧ್ಯಕ್ಷರ ವಿರುದ್ಧ ಹಾಲಿ ಉಪಾಧ್ಯಕ್ಷರು ಮತ್ತು ಕೆಲವು ಸದಸ್ಯರು ಹಾಗೂ ಗ್ರಾಮಸ್ಥರು ಪಂಚಾಯಿತಿ ಬಳಿಯೇ ಪ್ರತಿಭಟಿಸಿದ ಘಟನೆ ತಾಲೂಕಿನ ತಾಳಕೆರೆಯಲ್ಲಿ ನಡೆದಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ಜೆಜೆಎಂನ ಕಾಮಗಾರಿ ಕಳಪೆಯಾಗಿದೆ. ವಿಶೇಷ ಚೇತನರ ಶ್ರೇಯೋಭಿವೃದ್ಧಿಗಾಗಿ ಇಡಲಾಗಿರುವ ಹಣ ಲೋಪವಾಗಿದೆ. ಎಸ್‌ಟಿ, ಎಸ್‌ಟಿ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಹಣ ದುರುಪಯೋಗವಾಗಿದೆ. ಹುದು ಬದು ನಿರ್ಮಾಣದಲ್ಲಿ ಸುಳ್ಳು ದಾಖಲೆ ಸೃಷ್ಠಿಸಿ ವಂಚಿಸಲಾಗಿದೆ. 15ನೇ ಹಣಕಾಸು ಯೋಜನೆಯಲ್ಲಿ ಲಕ್ಷಾಂತರ ರುಪಾಯಿ ಅವ್ಯವಹಾರವಾಗಿದೆ. ಕೊಳವೆ ಬಾವಿಗಳಿಗೆ ಹೊಸ ಮೋಟಾರ್ ಮತ್ತು ಸ್ಟಾರ್ಟರ್‌ ಗಳನ್ನು ಅಳವಡಿಸಲಾಗಿದೆ ಎಂದು ಸುಳ್ಳು ದಾಖಲೆ ಸೃಷ್ಠಿಸಲಾಗಿದೆ. ಕಳಪೆ ಗುಣಮಟ್ಟದ ಬೀದಿ ದೀಪಗಳನ್ನು ತಂದು ಗ್ರಾಮ ಪಂಚಾಯಿತಿಯ ಬೊಕ್ಕಸಕ್ಕೆ ನಷ್ಠ ಉಂಟು ಮಾಡಲಾಗಿದೆ ಎಂದು ಆರೋಪಿಸಿರುವ ಉಪಾಧ್ಯಕ್ಷ ಸಿದ್ದಲಿಂಗ ಮೂರ್ತಿ ಈ ಕುರಿತು ಮಾಹಿತಿ ನೀಡಿ ಎಂದು ಪಿಡಿಓ ಯೋಗೀಶ್ ರನ್ನು ಕೇಳಿದರೆ, ಅಧ್ಯಕ್ಷರು ಮತ್ತು ಅವರ ಮಗನನ್ನು ಕೇಳಿ ಕೊಡುತ್ತೇನೆ ಎಂದು ಹೇಳುತ್ತಾರೆ. ಇಲ್ಲಿಯ ಅಧ್ಯಕ್ಷೆಯಾಗಿರುವ ಸರೋಜಮ್ಮನರ ಆಡಳಿತದ ಬದಲಿಗೆ ಅವರ ಮಗನ ಆಡಳಿತವೇ ಆಗಿದೆ ಎಂದು ದೂರಿದರು. 15ನೇ ಹಣಕಾಸು ಯೋಜನೆಯಡಿ ಅಂಗನವಾಡಿ ಕಟ್ಟಡದ ದುರಸ್ಥಿ, ಗ್ರಂಥಾಲಯದ ದುರಸ್ಥಿ, ವಿವಿಧ ಪರಿಕರಗಳ ಖರೀದಿ ಎಂದು ನಮೂದಿಸಿ ಲಕ್ಷಾಂತರ ರು.ಗಳನ್ನು ಖರ್ಚು ಮಾಡಲಾಗಿದೆ. ಅವುಗಳ ವಿವರ ಕೊಡಿ ಎಂದರೆ ನೀಡುತ್ತಿಲ್ಲ. ಲಕ್ಷಾಂತರ ರು. ಖರ್ಚು ಮಾಡಿ ಕಸ ಸಂಸ್ಕರಣ ಘಟಕವನ್ನು ನಿರ್ಮಿಸಲಾಗಿದೆ. ಕಸ ವಿಲೇವಾರಿಗೆಂದು ವಾಹನವನ್ನೂ ಸಹ ತರಲಾಗಿದೆ. ಆದರೆ ಇದುವರೆಗೂ ಪಂಚಾಯಿತಿ ಕಾಪೌಂಡಿನಿಂದ ವಾಹನವನ್ನು ತೆಗೆದೇ ಇಲ್ಲ. ಆದರೂ ಸಹ ಅವರ ವಿಮೆ, ದುರಸ್ಥಿಗೆಂದು ಜನರ ತೆರಿಗೆ ಹಣವನ್ನು ವಿನಿಯೋಗಿಸಲಾಗಿದೆ. ಅರಣ್ಯ ಯೋಜನೆಯಡಿ ಗಿಡ ನೆಡಲಾಗಿದೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಹಣ ಲಪಟಾಯಿಸಲಾಗಿದೆ ಎಂದು ಅವರು ಆರೋಪಿಸಿದರು. ಕ್ರಮವಿಲ್ಲ:

ತಾಳಕೆರೆ ಗ್ರಾಮ ಪಂಚಾಯಿತಿಯಲ್ಲಿ ಆಗಿರುವ ಅವ್ಯವಹಾರದ ಕುರಿತು ಒಂಬಡ್ಸ್‌ಮ್ಯಾನ್‌ಗೆ ದೂರು ಸಲ್ಲಿಸಿದರೂ ಸಹ ಇದುವರೆಗೂ ಜಿಲ್ಲಾ ಪಂಚಾಯಿತಿಯ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಂಪ್ಯೂಟರ್ ಆಪರೇಟರ್ ಪ್ರತಿ ದಿನ ಸಕಾಲಕ್ಕೆ ಕೆಲಸಕ್ಕೆ ಬರುವುದಿಲ್ಲ. ಬೇಕಾಬಿಟ್ಟಿಯಾಗಿ ಕರ್ತವ್ಯಕ್ಕೆ ಹಾಜರಾಗುತ್ತಾರೆ. ಇವರನ್ನು ನಿಯಂತ್ರಿಸುವವರೇ ಇಲ್ಲವಾಗಿದ್ದಾರೆಂದು ಸಿದ್ದಲಿಂಗಮೂರ್ತಿ ಆರೋಪಿಸಿದ್ದಾರೆ.ದೂರು ದಾಖಲು:

ಅವ್ಯವಸ್ಥೆ ಕುರಿತು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ದೂರಿದರೆ ನಮ್ಮ ವಿರುದ್ಧ ಕರ್ತವ್ಯಕ್ಕೆ ಅಡ್ಡಿ, ಜಾತಿ ನಿಂದನೆ ಸೇರಿದಂತೆ ವಿವಿಧ ರೀತಿಯ ದೂರುಗಳನ್ನು ಪೊಲೀಸ್ ಠಾಣೆಗೆ ನೀಡಿ ನಮ್ಮನ್ನು ನಿಯಂತ್ರಿಸುತ್ತಿದ್ದಾರೆ. ತಮ್ಮ ಗ್ರಾಮ ಪಂಚಾಯಿತಿಯಲ್ಲಿ ಆಗುತ್ತಿರುವ ಅಧ್ವಾನಗಳ ಬಗ್ಗೆ ಪಿಡಿಓ ರವರೊಂದಿಗೆ ಚರ್ಚಿಸಿದ್ದನ್ನೇ ದೊಡ್ಡ ವಿಷಯವನ್ನಾಗಿ ಮಾಡಿ ಸ್ವತಃ ತಮ್ಮ ವಿರುದ್ಧ ಪೊಲೀರಿಗೆ ದೂರು ನೀಡಿ ತೊಂದರೆ ನೀಡಲಾಯಿತು. ಅಂತಿಮವಾಗಿ ತಾವು ಈಗ ಜಾಮೀನಿನ ಮೇಲೆ ಬರಬೇಕಾಯಿತು ಎಂದು ಉಪಾಧ್ಯಕ್ಷ ಸಿದ್ದಲಿಂಗಮೂರ್ತಿ ಬೇಸರ ವ್ಯಕ್ತಪಡಿಸಿದರು. ಇಲ್ಲಿಯ ಕಂಪ್ಯೂಟರ್ ಆಪರೇಟರ್ ಅವರು ಕೇಂದ್ರ ಸ್ಥಾನದಲ್ಲಿಲ್ಲ. ಇವರೂ ಸಹ ಸಾಕಷ್ಟು ಅವ್ಯವಹಾರಕ್ಕೆ ಕಾರಣೀಭೂತರಾಗಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿ ಅಧಿಕಾರಿಗಳಿಗೆ ದೂರು ಸಲ್ಲಿಸಿದರೆ ವಿವಿಧ ರೀತಿಯ ಕಾನೂನುಗಳನ್ನು ದುರ್ಬಳಕೆ ಮಾಡಿಕೊಂಡು ನಮ್ಮ ವಿರುದ್ಧವೇ ದೂರು ದಾಖಲಿಸುತ್ತಾರೆ ಎಂದು ಸದಸ್ಯರಾದ ವಿನೋದ್, ಶಂಕರ್ ನಾಗ್ ಹೇಳಿದರು.ಈ ಅಕ್ರಮಗಖ ಬಗ್ಗೆ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ಸಲ್ಲಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಸಿಟ್ಟಿಗೆದ್ದ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಸಿದ್ದಲಿಂಗಮೂರ್ತಿ, ಸದಸ್ಯರಾದ ವಿನೋದ್, ಶಂಕರ್ ನಾಗ್, ಗ್ರಾಮಸ್ಥರಾದ ಶರತ್, ಜಿತೇಂದ್ರ, ಯೋಗಾನಂದ್, ಪಾಲಾಕ್ಷ, ಶಶಿಧರ್, ಮಂಜುನಾಥ್, ಹಿರೇಡೊಂಕಿಹಳ್ಳಿ ಸುಂದರ್ ಸೇರಿದಂತೆ ಹಲವಾರು ಮಂದಿ ಕಚೇರಿ ಮುಂಭಾಗವೇ ಪ್ರತಿಭಟನೆಗೆ ಮುಂದಾದರು. ವಿಷಯ ತಿಳಿದ ತಾಲೂಕು ಕಾರ್ಯನಿರ್ವಹಣಾಧಿಕಾರಿ ಶಿವಾನಂದಯ್ಯ ದೂರವಾಣಿ ಕರೆ ಮಾಡಿ ಖುದ್ದಾಗಿ ತಾವೇ ತಾಳಕೆರೆ ಗ್ರಾಮ ಪಂಚಾಯಿತಿಗೆ ಬಂದು ಸದಸ್ಯರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಮೇರೆಗೆ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. 30 ಟಿವಿಕೆ 1 – ತುರುವೇಕೆರೆ ತಾಲೂಕು ತಾಳಕೆರೆ ಗ್ರಾಮ ಪಂಚಾಯಿತಿ ಮುಂಭಾಗವೇ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರು, ಸದಸ್ಯರು ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.