ಅ.4ರಿಂದ ರಾಜ್ಯದಲ್ಲಿ ಗ್ರಾಪಂ ಸೇವೆ ಸ್ಥಗಿತ

| Published : Sep 26 2024, 09:51 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಎಲ್ಲ ವೃಂದ ಸಂಘಗಳು ಹಾಗೂ ಗ್ರಾಮ ಪಂಚಾಯತಿಯ ಸದಸ್ಯರ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಕ್ಟೋಬರ್ 4ರಿಂದ ರಾಜ್ಯಾದ್ಯಂತ ಗ್ರಾಮ ಪಂಚಾಯತಿ ಕಚೇರಿಗಳನ್ನು ಬಂದ್ ಮಾಡಿ ಅನಿರ್ದಿಷ್ಟ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಸಿ.ಜಿ.ಪಾರೆ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಎಲ್ಲ ವೃಂದ ಸಂಘಗಳು ಹಾಗೂ ಗ್ರಾಮ ಪಂಚಾಯತಿಯ ಸದಸ್ಯರ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಕ್ಟೋಬರ್ 4ರಿಂದ ರಾಜ್ಯಾದ್ಯಂತ ಗ್ರಾಮ ಪಂಚಾಯತಿ ಕಚೇರಿಗಳನ್ನು ಬಂದ್ ಮಾಡಿ ಅನಿರ್ದಿಷ್ಟ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಸಿ.ಜಿ.ಪಾರೆ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಹಲವು ವರ್ಷಗಳಿಂದ ಎಲ್ಲ ಸರ್ಕಾರಗಳಿಗೂ ಮನವಿ ಮಾಡಿ, ಹೋರಾಟ ನಡೆಸಲಾಗುತ್ತಿದೆ. ಆದರೂ, ಸರ್ಕಾರಗಳ ಸ್ಪಂದನೆ ಇಲ್ಲದ ಕಾರಣ ರಾಜ್ಯಾದ್ಯಂತ ಸಮೂಹ ಸಂಸ್ಥೆಗಳ ಒಕ್ಕೂಟದಿಂದ ಹೋರಾಟ ಹಮ್ಮಿಕೊಳ್ಳಲಾಗಿದೆ. ಗ್ರಾಮ‌ ಪಂಚಾಯತಿ ನೌಕರರು ಹಾಗೂ ಸದಸ್ಯರ ಬೇಡಿಕೆಗಳನ್ನು ಇಡೇರಿಸಬೇಕು ಎಂದು ಹೋರಾಟ ಮಾಡುತ್ತಲೇ ಇದ್ದೇವೆ. ಇದುವರೆಗೂ ಪಿಡಿಒ ಹುದ್ದೆಗಳಿಗೆ ಜ್ಯೇಷ್ಠತಾ ಪಟ್ಟಿ ಸಿದ್ದಗೊಳಿಸಿ ಬಡ್ತಿ ಕೊಟ್ಟಿಲ್ಲ. ಅಧಿಕಾರಿಗಳನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಹೋರಾಟ ಮಾಡುತ್ತಿದ್ದೇವೆ. ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ಮೇಲ್ದರ್ಜೆಗೆ ಏರಿಸಬೇಕಿದೆ ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟದ ಜಿಲ್ಲಾಧ್ಯಕ್ಷ ಎಂ.ಎಚ್.ಪಠಾಣ ಮಾತನಾಡಿ, ನಮ್ಮ ಬೇಡಿಕೆಗಳ ಇಡೇರಿಕೆಗಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅ. 4ರಂದು ಧರಣಿ ನಡೆಯಲಿದೆ. ರಾಜ್ಯಾದ್ಯಂತ ಪಂಚಾಯತಿ ಸೇವೆಗಳನ್ನು ಸ್ಥಗಿತಗೊಳಿಸಿ, ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ನಾವು ಎರಡು ಬಾರಿ ಹೋರಾಟ ಮಾಡಿದ್ದೇವೆ‌. ಆದರೂ ಸಹ ಯಾವುದೇ ಸರ್ಕಾರಗಳು ನಮ್ಮ ಬೇಡಿಕೆಗಳಿಗೆ ಸ್ಪಂದಿಸಿಲ್ಲ. ಈಗಿನ ಕಾಂಗ್ರೆಸ್ ಸರ್ಕಾರಕ್ಕೂ ಮನವಿಗಳನ್ನು ಕೊಟ್ಟರೂ ಸ್ಪಂದಿಸುತ್ತಿಲ್ಲ. ಗ್ರಾಮ ಪಂಚಾಯತಿಗಳ ಅಧಿಕಾರಿಗಳು ಹಾಗೂ ಸದಸ್ಯರು ಸೇರಿ ಪಂಚಾಯತಿ ಉಳಿವಿಗಾಗಿ ಹೋರಾಟ ಮಾಡುತ್ತಿದ್ದೇವೆ.

ಒಕ್ಕೂಟದಿಂದ ಒಟ್ಟು 29 ಬೇಡಿಕೆಗಳಿದ್ದು, ಅದರಲ್ಲಿ 10 ಬೇಡಿಕೆಗಳನ್ನಾದರೂ ಇಡೇರಿಸಲೇಬೇಕಿದೆ. ಮೂರು ತಿಂಗಳಿಗೊಮ್ಮೆ ನಡೆಸಲಾಗುವ ಕೆಡಿಪಿ ಸಭೆಗೆ ಮೇಲಾಧಿಕಾರಿಗಳು ಬರಬೇಕು. ಶಿಷ್ಟಾಚಾರದಲ್ಲಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರಿಗೆ ಶಿಷ್ಟಾಚಾರ ತಂದು ಕಾರ್ಯಕ್ರಮಗಳಿಗೆ ಆಹ್ವಾನಿಸಬೇಕು. ಕೇರಳ ಮಾದರಿಯಲ್ಲಿ ಸದಸ್ಯರಿಗೆ ಗೌರವ ಧನ ಕೊಡಬೇಕು. ಇತ್ಯಾದಿ ಬೇಡಿಕೆಗಳನ್ನು ಸರ್ಕಾರ ಇಡೇರಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರದೀಪ ಪಾಟೀಲ್, ವೈ.ಎಂ.ಜಗಲರ, ರೇಖಾ ಪವಾರ, ಬಿ.ಜಿ.ಗಲಗಲಿ, ಬಸವರಾಜ ಬಬಲಾದ ಸೇರಿದಂತೆ ಹಲವರು ಇದ್ದರು.

------------

ಬಾಕ್ಸ್‌

ಈ ಹೋರಾಟ ಯಾಕೆ..?

ಏಳು ವರ್ಷಕ್ಕೂ ಅಧಿಕ ಸಮಯ ಒಂದೇ ಸ್ಥಳದಲ್ಲಿ ಕೆಲಸ ಮಾಡಿರುವವರನ್ನು ಬೇರೆಡೆ ವರ್ಗಾಯಿಸುವ ಹುನ್ನಾರ ನಡೆಯುತ್ತಿದೆ. ಪಂಚಾಯತಿ ಕಾರ್ಯದರ್ಶಿಗಳು ಪಿಡಿಒ ಹುದ್ದೆಗೆ ಬಡ್ತಿಗಾಗಿ ಬೇಡಿಕೆಯಿಟ್ಟಿದ್ದರೂ ಅವರಿಗೆ ಬಡ್ತಿ ಸಿಗುತ್ತಿಲ್ಲ. ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳನ್ನು ನೇಮಕ ಮಾಡಬೇಕು. ಸೆ.30ರೊಳಗಾಗಿ ಈ ಎಲ್ಲ ಬೇಡಿಕೆಗಳನ್ನು ಇಡೇರಿಸುವ ಭರವಸೆಯನ್ನು ಸರ್ಕಾರ ಲಿಖಿತ ರೂಪದಲ್ಲಿ ನೀಡಬೇಕು. ಇಲ್ಲದಿದ್ದರೆ ಗ್ರಾಮ ಪಂಚಾಯತಿ ಕಚೇರಿಗಳನ್ನು ಬಂದ್ ಮಾಡಿ ರಾಜ್ಯಮಟ್ಟದಲ್ಲಿ ಅನಿರ್ದಿಷ್ಟಾವಧಿ ಹೋರಾಟಕ್ಕೆ ಅಣಿಯಾಗುವುದಾಗಿ ಪದಾಧಿಕಾರಿಗಳು ಎಚ್ಚರಿಕೆಯನ್ನು ನೀಡಿದ್ದಾರೆ.----------

ಕೋಟ್‌....

ಇದುವರೆಗೂ ಪಿಡಿಒ ಹುದ್ದೆಗಳಿಗೆ ಜ್ಯೇಷ್ಠತಾ ಪಟ್ಟಿ ಸಿದ್ದಗೊಳಿಸಿ ಬಡ್ತಿ ಕೊಟ್ಟಿಲ್ಲ. ಅಧಿಕಾರಿಗಳನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಹೋರಾಟ ಮಾಡುತ್ತಿದ್ದೇವೆ. ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ಮೇಲ್ದರ್ಜೆಗೆ ಏರಿಸಬೇಕಿದೆ.

- ಸಿ.ಜಿ.ಪಾರೆ, ರಾಜ್ಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ