ಮೂರು ವರ್ಷಗಳಿಗೊಮ್ಮೆ ನಡೆಯುವ ರಾಜ್ಯದ ಅತಿದೊಡ್ಡ ಜಾತ್ರೆಗಳಲ್ಲೊಂದಾದ ಶ್ರೀ ಗ್ರಾಮದೇವಿ ಜಾತ್ರಾ ಮಹೋತ್ಸವವನ್ನು ಫೆ.11ರಿಂದ 19ರವರೆಗೆ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದ್ದು, ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ.

ಕನ್ನಡಪ್ರಭ ವಾರ್ತೆ ಯಲ್ಲಾಪುರ

ಮೂರು ವರ್ಷಗಳಿಗೊಮ್ಮೆ ನಡೆಯುವ ರಾಜ್ಯದ ಅತಿದೊಡ್ಡ ಜಾತ್ರೆಗಳಲ್ಲೊಂದಾದ ಶ್ರೀ ಗ್ರಾಮದೇವಿ ಜಾತ್ರಾ ಮಹೋತ್ಸವವನ್ನು ಫೆ.11ರಿಂದ 19ರವರೆಗೆ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದ್ದು, ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ದೇವಸ್ಥಾನದ ಅಧ್ಯಕ್ಷ ರಾಜೇಂದ್ರಪ್ರಸಾದ ಭಟ್ಟ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಾತ್ರಾ ಪೂರ್ವ ವಿಧಿ ವಿಧಾನಗಳು ಪೂರ್ಣಗೊಂಡ ನಂತರ ಫೆ.11 ರ ಮಧ್ಯಾಹ್ನ 3.30ಕ್ಕೆ ಗ್ರಾಮದೇವಿಯವರ ಮೆರವಣಿಗೆ ಆರಂಭಗೊಂಡು, ದೇವಿ ಮೈದಾನದ ಜಾತ್ರಾ ಗದ್ದುಗೆಯಲ್ಲಿ ಗ್ರಾಮದೇವಿಯರು ವಿರಾಜಮಾನವಾಗಲಿದ್ದಾರೆ.‌ ಫೆ.12ರಿಂದ ಭಕ್ತರು ಉಡಿ, ಹಣ್ಣುಕಾಯಿ ಮುಂತಾದ ಸೇವೆಗಳನ್ನು ಸಲ್ಲಿಸಲು ಅವಕಾಶವಿದೆ ಎಂದರು.

ಸಾಗರದ ಸಾಗರಿಕಾ ಇವೆಂಟ್ಸ್ ನವರು ₹25 ಲಕ್ಷ ವೆಚ್ಚದಲ್ಲಿ ಜಾತ್ರಾ ಮಂಟಪವನ್ನು ಆಕರ್ಷಕವಾಗಿ ನಿರ್ಮಿಸಿದ್ದಾರೆ. ರಥಬೀದಿಯಲ್ಲಿ ವಿಶೇಷ ದೀಪಾಲಂಕಾರ ಮಾಡಲಾಗಿದೆ. ಬಸ್‌ಸ್ಟ್ಯಾಂಡ್ ರಸ್ತೆ ಮತ್ತು ಹುಬ್ಬಳ್ಳಿ ರಸ್ತೆಗಳ ಮೇಲೆ ಭವ್ಯ ಸ್ವಾಗತ ಗೋಪುರ ನಿರ್ಮಾಣವಾಗಿದೆ. ಜಾತ್ರಾ ಮಂಟಪದಲ್ಲಿ 18 ಸಿಸಿಕ್ಯಾಮೆರಾ ಅಳವಡಿಸಲಾಗಿದೆ ಎಂದರು.

ಶ್ರೀ ಸತ್ಯಸಾಯಿ ಭಕ್ತವೃಂದದಿಂದ ನಿತ್ಯ ಪಾನಕ ಸೇವೆ ನಡೆಯಲಿದೆ. ಪ್ರತಿನಿತ್ಯ 20,000ಕ್ಕಿಂತ ಹೆಚ್ಚು ಭಕ್ತಾದಿಗಳು ಆಮ್ಮನವರ ದರ್ಶನಕ್ಕೆ ಬರಲಿದ್ದಾರೆ. ಅವರಿಗೆ ಸಮರ್ಪಕ ಸರತಿ ಸಾಲಿನ ವ್ಯವಸ್ಥೆ ಮಾಡಲಾಗಿದೆ. ಸರತಿ ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ಅವಶ್ಯವಿದ್ದಷ್ಟು ಫ್ಯಾನ್ ಮತ್ತು ಕೂಲರ್‌ಗಳ ಅಳವಡಿಸಲಾಗಿದ್ದು, ಪ್ರಥಮ ಚಿಕಿತ್ಸೆ ಸೌಲಭ್ಯ, ಅಗ್ನಿಶಾಮಕ ಮತ್ತು ಆ್ಯಂಬುಲೆನ್ಸ್‌ಗಳ ವ್ಯವಸ್ಥೆ, ಜನರೇಟರ್‌ಗಳ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.‌ ಮಹಾಪೂಜಾ ಸೇವೆ, ರೇಷ್ಮೆ ಉಡಿ ಸೇವೆ ಜೊತೆಗೆ ಶೀಘ್ರ ದರ್ಶನದ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ ಎಂದು ವಿವರಿಸಿದರು.

50 ಅರ್ಚಕರು, ಶೆಳದೇವ ಸಮಿತಿಯ 25 ಸದಸ್ಯರು, 50 ಸ್ವಯಂ ಸೇವಕರು, 20 ಶಸ್ತ್ರಧಾರಿ ಪೊಲೀಸರು ಜಾತ್ರಾ ಮಂಟಪದಲ್ಲಿ ಭಕ್ತಾದಿಗಳ ಆನುಕೂಲಕ್ಕೆ ಲಭ್ಯವಿರುತ್ತಾರೆ. 400 ಪೊಲೀಸರನ್ನು ಜಾತ್ರೆಯ ಸುರಕ್ಷತಾ ವ್ಯವಸ್ಥೆಗೆ ಇಲಾಖೆ ನೇಮಿಸಿದೆ ಎಂದ ಅವರು, ಜಾತ್ರಾ ಮಂಟಪಕ್ಕೆ ಬಂದು ಅಮ್ಮನವರ ಸೇವೆ ಮಾಡುವ ಭಕ್ತಾದಿಗಳು ಆಡಳಿತ ಕಮಿಟಿಯವರ ಸೇವಾ ಕೌಂಟರ್‌ಗಳಲ್ಲಿಯೇ ಉಡಿ ಸಾಮಗ್ರಿ ಪಡೆಯಬೇಕೆಂದು ವಿನಂತಿಸಿದರು.‌

ಆಯಗಾರ ಸಮಿತಿಯ ಮುಖ್ಯಸ್ಥ ಮನೋಹರ ಹೆಗಡೆ, ಅರ್ಚಕ ಪರಶುರಾಮ ಆಚಾರಿ, ಮಂಟಪ ಉಸ್ತುವಾರಿಗಳಾದ ಬಾಲಕೃಷ್ಣ ನಾಯಕ, ರವಿ ಶಾನಭಾಗ, ದೇವಸ್ಥಾನದ ವ್ಯವಸ್ಥಾಪಕ ಗೋಪಾಲಕೃಷ್ಣ ಕೊಂಬೆ ಉಪಸ್ಥಿತರಿದ್ದರು.