ಖಾಸಗೀಕರಣ ವಿರೋಧಿಸಿ ಗ್ರಾಮೀಣ ಬ್ಯಾಂಕ್ ನೌಕರರ ಮುಷ್ಕರ

| Published : Feb 24 2024, 02:30 AM IST

ಸಾರಾಂಶ

ಗ್ರಾಮೀಣ ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ಜಿಲ್ಲೆಯ ಗ್ರಾಮೀಣ ಬ್ಯಾಂಕ್ ನೌಕರರು ಚಿಕ್ಕಮಗಳೂರಿನ ಕೆಜಿಬಿ ವಲಯ ಕಛೇರಿಯ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ, ಎಲ್ಲ ದಿನಗೂಲಿ ಹೊರ ಗುತ್ತಿಗೆ ನೌಕರರನ್ನು ಒಂದು ಬಾರಿ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಖಾಯಂ ಗೊಳಿಸಬೇಕು ಎಂದೂ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಗ್ರಾಮೀಣ ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ಜಿಲ್ಲೆಯ ಗ್ರಾಮೀಣ ಬ್ಯಾಂಕ್ ನೌಕರರು ನಗರದ ಕೆಜಿಬಿ ವಲಯ ಕಛೇರಿಯ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.ಗ್ರಾಮೀಣ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡಬಾರದು. ಎಲ್ಲ ದಿನಗೂಲಿ ಹೊರ ಗುತ್ತಿಗೆ ನೌಕರರನ್ನು ಒಂದು ಬಾರಿ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಖಾಯಂ ಗೊಳಿಸಬೇಕು. ಎಲ್ಲಾ ತರಹದ ವಿಮಾ ಸರಕುಗಳ ಮಾರಾಟ ರದ್ದಾಗಬೇಕು. ಪ್ರೇರಕ ಬ್ಯಾಂಕ್‌ಗಳಲ್ಲಿನ ಸಿಬ್ಬಂದಿ ಸೇವಾ ನಿಯಮಗಳು, ಭರ್ತಿ ಪ್ರಕ್ರಿಯೆಗಳು, ಪಿಂಚಣಿ ನಿಯಮಗಳು, ಅನುಕಂಪ ಆಧಾರಿತ ನೇಮಕಾತಿ, ವೇತನ ಶ್ರೇಣಿ ಮತ್ತಿತರ ಸೌಲಭ್ಯಗಳು ಸೇರಿದಂತೆ ಇತರೆ ಸೌಲಭ್ಯಗಳನ್ನು ಗ್ರಾಮೀಣ ಬ್ಯಾಂಕ್ ಉದ್ಯೋಗಿಗಳಿಗೂ ಯಥಾವತ್ತಾಗಿ ವಿಸ್ತರಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರೇರಕ ಬ್ಯಾಂಕುಗಳ ಆಡಳಿತದಿಂದ ಮುಕ್ತಿ ಪಡೆದು ರಾಷ್ಟ್ರೀಯ ಗ್ರಾಮೀಣ ಬ್ಯಾಂಕ್ ಸ್ಥಾಪಿಸಿ ಅದರ ಅಡಿಯಲ್ಲಿ ರಾಜ್ಯಮಟ್ಟದ ಗ್ರಾಮೀಣ ಬ್ಯಾಂಕ್‌ನ್ನು ರಚಿಸಬೇಕು. ಒಂದು ಸಾರಿ ವಿಶೇಷ ನೇರನೇಮಕಾತಿ ಪ್ರಕ್ರಿಯೆ ನಡೆಸುವುದರ ಮೂಲಕ ಖಾಲಿ ಇರುವ 30 ಸಾವಿರ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಬೇಕು. ಬಡ್ತಿ ನಿಯಾಮವಳಿಗಳನ್ನು ಶೀಘ್ರವೇ ಪುನರ್‌ ವಿಮರ್ಶಿಸಬೇಕೆಂಬುದು ಪ್ರಮುಖ ಬೇಡಿಕೆ ಎಂದು ಪ್ರತಿಭಟನಾಕಾರರು ಹೇಳಿದರು.ಒರಿಸ್ಸಾದ ಭುವನೇಶ್ವರದಲ್ಲಿ ನಡೆದ ಎಐಆರ್‌ಆರ್‌ಬಿ ಇಎ ಜನರಲ್ ಕೌನ್ಸಿಲ್ ಸಭೆಯಲ್ಲಿ ಗ್ರಾಮೀಣ ಬ್ಯಾಂಕ್‌ಗಳ ಪ್ರಸ್ತುತ ಪರಿಸ್ಥಿತಿ ಅವಲೋಕಿಸಿ ಕೇಂದ್ರ ಸರ್ಕಾರಕ್ಕೆ ಒತ್ತಾ ಯಿಸಲು ವಿವಿಧ ಹಂತದ ಹೋರಾಟಗಳ ಕುರಿತಂತೆ ದೇಶಾದ್ಯಂತ ಎಲ್ಲ ಗ್ರಾಮೀಣ ಬ್ಯಾಂಕ್‌ಗಳಿಗೆ ಈ ಹಿಂದೆಯೇ ನೋಟೀಸ್ ಕಳುಹಿಸಿದ್ದರೂ ಅವರು ಗಮನಹರಿಸದ ಹಿನ್ನೆಲೆಯಲ್ಲಿ ಇಂದಿನ ಮುಷ್ಕರ ನಡೆದಿದೆ ಎಂದರು. ಪ್ರತಿಭಟನೆಯಲ್ಲಿ ಗ್ರಾಮೀಣ ಬ್ಯಾಂಕ್‌ ನೌಕರರ ಸಂಘದ ಜಿಲ್ಲಾಧ್ಯಕ್ಷ ಹರ್ಷಎಸ್.ರಾವ್, ಕಾರ್‍ಯಕಾರಿ ಸದಸ್ಯರಾದ ಗುರುಮೂರ್ತಿಭಟ್ ಮತ್ತು ಕೆ.ಎನ್.ಅಲೋಕ್, ರಾಜ್ಯ ಕಾರ್‍ಯಕಾರಿ ಸದಸ್ಯ ಅಶೋಕ, ನಿವೃತ್ತ ಅಧಿಕಾರಿಗಳಾದ ಕೃಷ್ಣಮೂರ್ತಿ, ಉಮಾಪತಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.