ಆಂಗ್ಲ ಭಾಷೆಗೆ ವ್ಯಾಕರಣವೇ ಜೀವಾಳ

| Published : Aug 20 2024, 01:02 AM IST

ಸಾರಾಂಶ

ನಾವು ತೊಡುವ ಉಡುಗೆ ಸಂಸ್ಕಾರವನ್ನು ನೀಡುವುದಿಲ್ಲ. ಜ್ಞಾನದಿಂದ ಮಾತ್ರ ಎಲ್ಲವೂ ಸಾಧ್ಯ. ಯಾವ ವಿಷಯವಾದರೂ ನಾಚಿಕೆ ಸ್ವಭಾವವನ್ನು ಬಿಟ್ಟು ಧೈರ್ಯದಿಂದ ಮುನ್ನುಗ್ಗಬೇಕು. ಸೃಜನಾತ್ಮಕ ವಿಷಯಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು. ನಕಾರಾತ್ಮಕ ಧೋರಣೆಯಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ. ಸಕಾರಾತ್ಮಕತೆ ನಮ್ಮ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಹಾಸನ ಹೇಮಾವತಿ ಜಲಾನಯನ ಪ್ರದೇಶದ ವಿಶೇಷ ಭೂಸ್ವಾಧೀನಾಧಿಕಾರಿ ಡಾ. ಮಂಜುನಾಥ್ ವಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಹಾಸನ

ಹಾಡಿನಲ್ಲಿ ಸಾಹಿತ್ಯ ಎಷ್ಟು ಮುಖ್ಯವೋ, ಹಾಗೆಯೇ ಆಂಗ್ಲ ಭಾಷೆಗೆ ಮುಖ್ಯವಾಗಿ ಬೇಕಾಗುವುದು ವ್ಯಾಕರಣ ಎಂದು ಹಾಸನ ಹೇಮಾವತಿ ಜಲಾನಯನ ಪ್ರದೇಶದ ವಿಶೇಷ ಭೂಸ್ವಾಧೀನಾಧಿಕಾರಿ ಡಾ. ಮಂಜುನಾಥ್ ವಿ ಅಭಿಪ್ರಾಯಪಟ್ಟರು.

ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಮತ್ತು ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು- ಸ್ವಾಯತ್ತ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ರೂಸಾ ಫಂಡೆಡ್ ಬ್ರಿಡ್ಜ್ ಕೋರ್ಸ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ನಾವು ತೊಡುವ ಉಡುಗೆ ಸಂಸ್ಕಾರವನ್ನು ನೀಡುವುದಿಲ್ಲ. ಜ್ಞಾನದಿಂದ ಮಾತ್ರ ಎಲ್ಲವೂ ಸಾಧ್ಯ. ಯಾವ ವಿಷಯವಾದರೂ ನಾಚಿಕೆ ಸ್ವಭಾವವನ್ನು ಬಿಟ್ಟು ಧೈರ್ಯದಿಂದ ಮುನ್ನುಗ್ಗಬೇಕು. ಸೃಜನಾತ್ಮಕ ವಿಷಯಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು. ನಕಾರಾತ್ಮಕ ಧೋರಣೆಯಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ. ಸಕಾರಾತ್ಮಕತೆ ನಮ್ಮ ಎತ್ತರಕ್ಕೆ ಕೊಂಡೊಯ್ಯುತ್ತದೆ. ದೇಶದ ರಕ್ಷಣೆಗೆ ೨೭ ವರ್ಷ ದುಡಿದ ಹೆಮ್ಮೆ ನನಗಿದೆ ಎಂದು ಹೇಳುವ ಮೂಲಕ ತಮ್ಮ ಜೀವನದಲ್ಲಿ ಅನುಭವಿಸಿದ ಕಷ್ಟ-ಕಾರ್ಪಣ್ಯಗಳನ್ನು ನೆನೆದರು. ವಿವಿಧ ದೇಶಗಳನ್ನು ಸುತ್ತಿ, ಭಾಷೆಯನ್ನು ಕಲಿತರೆ ಉನ್ನತ ಮಟ್ಟಕ್ಕೆ ಏರಬಹುದು. ಇಂದು ನೇವಿ ಮತ್ತು ಎಚ್‌ಎಲ್‌ಗಳಲ್ಲಿ ೧೨ ವಿಭಾಗಗಳಲ್ಲಿ ಉದ್ಯೋಗಾವಕಾಶಗಳಿವೆ ಅದನ್ನು ಯುವಜನತೆ ಮನಗಾಣಬೇಕು ಹಾಗೂ ಬಳಸಿಕೊಳ್ಳಬೇಕು. ಅದಕ್ಕೆ ಬೇಕಾಗಿರುವುದು ಸತತ ಪರಿಶ್ರಮ ಎಂದರು ಹೇಳಿದರು. ಲಾಂಗ್ವೇಜ್ ಮತ್ತು ಲಿಟ್ರೇಚರ್ ನಡುವಿನ ವ್ಯತ್ಯಾಸವನ್ನು ತಿಳಿಸುವುದರ ಮೂಲಕ ಎಲ್ಲರ ಗಮನ ಸೆಳೆದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಎಂ.ಬಿ. ಇರ್ಷಾದ್ ಮಾತನಾಡಿ, ನಮ್ಮನ್ನು ನಾವು ಹಾಗೂ ಪ್ರಪಂಚವನ್ನು ಅರ್ಥಮಾಡಿಕೊಳ್ಳಲು ಭಾಷೆ ಕೊಂಡಿಯಾಗಿರುತ್ತದೆ. ಸ್ಪರ್ಧಾತ್ಮ ಪರೀಕ್ಷೆಯನ್ನು ಎದುರಿಸಲು ಆಂಗ್ಲ ಭಾಷೆಯ ಅಗತ್ಯವನ್ನು ತಿಳಿಸಿದರಲ್ಲದೇ ಇಂದು ಉದ್ಯೋಗಕ್ಕಾಗಿ ನಾವು ಪದವಿಯನ್ನು ಓದುತ್ತಿದ್ದೇವೆ. ಜೀವನ ನಡೆಸಲು ಬೇಕಾಗುವ ಕೌಶಲ್ಯವನ್ನು ಮೊದಲು ಕಲಿಯಬೇಕು ಎಂದು ಹೇಳುವ ಮೂಲಕ ಬ್ರಿಡ್ಜ್ ಕೋರ್ಸ್‌ನ ಪ್ರಮುಖ ಅಂಶಗಳನ್ನು ವಿವರಿಸಿದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಶೈಕ್ಷಣಿಕ ಡೀನ್ ರಾಜು ಡಿ.ಎಸ್., ಕಾಲೇಜು ಒಂದು ವಿಶ್ವವಿದ್ಯಾನಿಲಯದ ರೀತಿ ಕಾರ್ಯಚಟುವಟಿಕೆಗಳನ್ನು ಮಾಡುತ್ತಿದೆ. ಆಂತರಿಕ ಶಕ್ತಿ ಬಳಕೆ ಮಾಡಿಕೊಳ್ಳುವ ಶಕ್ತಿಯಾಗಿ ಬದಲಾಯಿಸಲು ಈ ರೀತಿಯ ಸೇತುಬಂಧ ಕೋರ್ಸ್‌ಗಳು ಅನುಕೂಲವಾಗಲಿದೆ. ರೂಸಾದಿಂದ ಈ ಕಾರ್ಯಕ್ರಮಗಳಿಗೆ ೫ ಕೋಟಿ ರೂಪಾಯಿಗಳನ್ನು ಕಾಲೇಜಿಗೆ ನೀಡಲಾಗಿದೆ. ಕಾರವಾರ, ಬಳ್ಳಾ, ಮಂಡ್ಯ ಸೇರಿದಂತೆ ಹಾಸನದ ನಮ್ಮ ಕಾಲೇಜಿಗೆ ಈ ರೀತಿಯ ರೂಸಾ ಅನುದಾನವನ್ನು ನೀಡಲಾಗಿದೆ. ಕಾಲೇಜಿಗೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಾಗಿರುವುದರಿಂದ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರಲ್ಲದೇ ವಿವೇಕಾನಂದರ ವಾಣಿಯನ್ನು ಸ್ಮರಿಸಿದರು. ರೂಸಾ ಕೋ-ಆರ್ಡಿನೇಟರ್ ಡಾ. ದಿನೇಶ್ ಕೆ.ಎಸ್. ಅವರು ಮಾತನಾಡಿ, ಪ್ರಸ್ತುತ ಆಯೋಜಿಸಿರುವ ಬ್ರಿಡ್ಜ್ ಕೋರ್ಸ್‌ಗಳ ಸದುಪಯೋಗವನ್ನು ಪ್ರತಿಯೊಂದು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ಹಾಸನ ಹೇಮಾವತಿ ಜಲಾನಯನ ಪ್ರದೇಶ ವಿಶೇಷ ಭೂಸ್ವಾಧೀನಾಧಿಕಾರಿ ಡಾ. ಮಂಜುನಾಥ್ ವಿ ಅವರನ್ನು ಕಾಲೇಜಿನ ಪರವಾಗಿ ಸನ್ಮಾನಿಸಲಾಯಿತು. ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಆದಿಚುಂಚನಗಿರಿ ಒಕ್ಕಲಿಗರ ಮಹಿಳಾ ಸಂಘದಿಂದ ಪ್ರೋತ್ಸಾಹಧನ ನೀಡಲು ಬಂದಿದ್ದ ಕಲಾ ಮತ್ತು ಪಲ್ಲವಿ ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಪರೀಕ್ಷಾ ನಿಯಂತ್ರಕ ಡಾ. ಮುರುಳೀಧರ್ ಕೆ.ಡಿ., ಪತ್ರಾಂಕಿತ ವ್ಯವಸ್ಥಾಪಕ ಕೆ.ಟಿ. ಸತ್ಯಮೂರ್ತಿ, ಸಂಪನ್ಮೂಲ ವ್ಯಕ್ತಿಗಳಾಗಿ ಹಾಸನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಇಂಗ್ಲೀಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ತಿಮ್ಮೇಶ್ ಎಲ್, ಮತ್ತೋರ್ವ ಸಂಪನ್ಮೂಲ ವ್ಯಕ್ತಿಯಾಗಿ ಉದಯಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯ ಪ್ರಾಧ್ಯಾಪಕ ಬಿ.ಆರ್. ರಮೇಶ್ ಭಾಗವಹಿಸಿದ್ದರು. ಕೋರ್ಸ್ ಕೋ-ಆರ್ಡಿನೇಟರ್ಸ್‌ಗಳಾದ ಆಂಗ್ಲ ವಿಭಾಗದ ಮುಖ್ಯಸ್ಥರಾದ ರಮೇಶ್ ಕೆ.ಎನ್., ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶಿವರಾಜ್‌ಕುಮಾರ್ ಜೆ ಸೇರಿದಂತೆ ಎಲ್ಲಾ ವಿಭಾಗದ ಪ್ರಾಧ್ಯಾಪಕರು ಹಾಜರಿದ್ದರು. ರೂಸಾ ಕೋಆರ್ಡಿನೇಟರ್ ಸಹಾಯಕ ಪ್ರಾಧ್ಯಾಪಕರಾದ ಡಾ. ದಿನೇಶ್ ಕೆ.ಎಸ್. ಎಲ್ಲರನ್ನು ಸ್ವಾಗತಿಸಿದರು. ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ರತ್ನ ವೈ.ಡಿ. ಕಾರ್ಯಕ್ರಮ ನಿರೂಪಿಸಿದರು. ಆಂಗ್ಲ ವಿಭಾಗದ ಮುಖ್ಯಸ್ಥರಾದ ಕೆ.ಎನ್.ರಮೇಶ್ ವಂದಿಸಿದರು.