ಸಾರಾಂಶ
ಕಾಡಾನೆಯೊಂದು ಜನವಸತಿ ಪ್ರದೇಶದ ಮೂಲಕ ಹಾದು ಸಾಗಿದ್ದು ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ. ಆಹಾರ ಅರಸಿ ಬಂದ ಕಾಡಾನೆ ಬಡಾವಣೆಯಲ್ಲಿ ಸಂಚಾರ ನಡೆಸಿದೆ.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸುಂಟಿಕೊಪ್ಪ ಎಮ್ಮೆಗುಂಡಿ ರಸ್ತೆಯ ಮೂಲಕ ಆಗಮಿಸಿದ್ದ ಕಾಡಾನೆಯೊಂದು ಜನವಸತಿ ಪ್ರದೇಶದ ಮೂಲಕ ಹಾದು ಶಾಂತಗೀರಿ ತೋಟಕ್ಕಾಗಿ ಸಾಗಿದ್ದು ಬಡಾವಣೆ ನಿವಾಸಿಗಳಲ್ಲಿ ಭೀತಿಯನ್ನು, ಆತಂಕವನ್ನು ಸೃಷ್ಟಿಸಿದೆ. ಆಹಾರ ಅರಸಿ ಬಂದ ಕಾಡಾನೆ ಎಮ್ಮೆಗುಂಡಿ ರಸ್ತೆಯ ಪಟ್ಟಣದ ಕೂಗು ಅಳತೆಯಲ್ಲಿ, ರಾತ್ರಿಯ ವೇಳೆ ಸುಂಟಿಕೊಪ್ಪದ ಶಿವರಾಂ ರೈ ಬಡಾವಣೆಯಲ್ಲಿ ಸಂಚಾರ ನಡೆಸಿದೆ. ಈ ಭಾಗದಲ್ಲಿ ವಾಸದ ಮನೆಗಳಿದ್ದು, ಅದೃಷ್ಟವಶಾತ್ ಈ ಸಂದರ್ಭ ಜನತೆಯ ಓಡಾಟ ಇಲ್ಲದ್ದರಿಂದ ಯಾವುದೇ ಅನಾಹುತಗಳು ಸಂಭವಿಸಿಲ್ಲ. ವಾಹನ ಸವಾರರೋರ್ವರು ವಾಹನವನ್ನು ಚಲಾಯಿಸಿಕೊಂಡು ಹೋಗುವ ಸಂದರ್ಭ ವಿಡಿಯೋ ಚಿತ್ರೀಕರಿಸಿಕೊಂಡಿದ್ದರು. ನಂತರ ಬಡಾವಣೆಯ ವಾಸದ ಮುಂಭಾಗದಲ್ಲಿಯೇ ಹಾದು ಸಾಗಿದ ಕಾಡಾನೆಯು ಹೆದ್ದಾರಿ ಸಮೀಪದ ವಿಜಯ ಪ್ಲಾಂಟೇಶನ್ ಮುಂಭಾಗದ ಶಾಂತಗೀರಿ ತೋಟದೊಳಗೆ ನುಸುಳಿ ಕಣ್ಮರೆಯಾಗಿದೆ.