ಐತಿಹಾಸಿಕ ಹಿನ್ನೆಲೆಯುಳ್ಳ ತಾಳಿಕೋಟೆ ನಗರದಲ್ಲಿ ಮೇವಾಡದ ಮಹಾನ್ ದೊರೆ, ವೀರ ಶಿರೋಮಣಿ ಮಹಾರಾಣಾ ಪ್ರತಾಪಸಿಂಹ ಭವ್ಯ ಕಂಚಿನ ಪುತ್ಥಳಿ ಅನಾವರಣಗೊಳ್ಳುತ್ತಿರುವುದು ಇಡೀ ನಗರದ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಹೇಳಿದರು.
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಐತಿಹಾಸಿಕ ಹಿನ್ನೆಲೆಯುಳ್ಳ ತಾಳಿಕೋಟೆ ನಗರದಲ್ಲಿ ಮೇವಾಡದ ಮಹಾನ್ ದೊರೆ, ವೀರ ಶಿರೋಮಣಿ ಮಹಾರಾಣಾ ಪ್ರತಾಪಸಿಂಹ ಭವ್ಯ ಕಂಚಿನ ಪುತ್ಥಳಿ ಅನಾವರಣಗೊಳ್ಳುತ್ತಿರುವುದು ಇಡೀ ನಗರದ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಹೇಳಿದರು.ಮಹಾರಾಣಾಪ್ರತಾಪಸಿಂಹ್ ಮೂರ್ತಿ ಅನಾವರಣ ಕಾರ್ಯಕ್ರಮ ನ.೧೫ ರಂದು ನಡೆಯಲಿರುವ ನಿಮಿತ್ತ ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಣಾ ಪ್ರತಾಪಸಿಂಹ ಅವರು ತಮ್ಮ ಜೀವನದಲ್ಲಿ ಸರ್ವಸ್ವವನ್ನೇ ಕಳೆದುಕೊಂಡರೂ ಸ್ವಾಭಿಮಾನವನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ ಎಂಬ ದೃಢಸಂಕಲ್ಪದೊಂದಿಗೆ ಹೋರಾಡಿದ ಮಹಾನ್ ವೀರರು. ರಾಷ್ಟ್ರದ ರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು, ಯಾವುದೇ ಸಂದರ್ಭದಲ್ಲಿಯೂ ಶತ್ರುಗಳ ಮುಂದೆ ತಲೆಬಾಗದೆ ವೀರೋಚಿತ ಹೋರಾಟ ನಡೆಸಿದ ಅವರ ಜೀವನಾದರ್ಶಗಳು ಇಂದಿನ ಯುವಪೀಳಿಗೆಗೆ ಸ್ಫೂರ್ತಿದಾಯಕವಾಗಿವೆ ಎಂದರು. ಮಹಾನ್ ಚೇತನದ ಕಂಚಿನ ಪುತ್ಥಳಿಯನ್ನು ತಾಳಿಕೋಟೆ ನಗರದಲ್ಲಿ ಪ್ರತಿಷ್ಠಾಪಿಸಬೇಕು ಎಂಬುವುದು ಇಲ್ಲಿನ ರಜಪೂತ ಸಮಾಜದ ಬಂಧುಗಳ ಬಹುದಿನಗಳ ಕನಸಾಗಿತ್ತು. ಈ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ರಜಪೂತ ಸಮಾಜದ ಕೆಲವೇ ಕೆಲವು ಪ್ರಮುಖರು ಹಾಗೂ ಬಂಧುಗಳು ಒಗ್ಗೂಡಿ, ಯಾವುದೇ ಸರ್ಕಾರದ ಅನುದಾನ ಅಥವಾ ಹೊರಗಿನ ಜನರ ನೆರವನ್ನು ಅವಲಂಬಿಸದೇ ಸಮಾಜದ ಸ್ವಂತ ಸಂಪನ್ಮೂಲ ಹಾಗೂ ಸಹಕಾರದಿಂದ ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ಭವ್ಯ ಕಂಚಿನ ಪುತ್ಥಳಿಯನ್ನು ನಿರ್ಮಿಸಿರುವುದು ವಿಶೇಷವಾಗಿದೆ. ಸಮಾಜದ ಒಗ್ಗಟ್ಟು, ಅಭಿಮಾನ ಹಾಗೂ ಮಹಾನ್ ವ್ಯಕ್ತಿಯ ಮೇಲಿನ ಗೌರವಕ್ಕೆ ಈ ಕಾರ್ಯ ಸಾಕ್ಷಿಯಾಗಿದೆ ಎಂದರು.ನ.೧೫ ರಂದು ತಾಳಿಕೋಟೆಯ ಮಹಾರಾಣಾ ಪ್ರತಾಪಸಿಂಹ ವೃತ್ತದಲ್ಲಿ ಈ ಭವ್ಯ ಕಂಚಿನ ಪುತ್ಥಳಿಯ ಲೋಕಾರ್ಪಣೆ ಸಮಾರಂಭ ನಡೆಯಲಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಾಜಿ ಕೇಂದ್ರ ಸಚಿವ ಹಾಗೂ ಲೋಕಸಭಾ ಸದಸ್ಯ ಅನುರಾಗ್ ಠಾಕೂರ್ ಪುತ್ಥಳಿಯನ್ನು ಅನಾವರಣಗೊಳಿಸಲಿದ್ದು, ಕಾರ್ಯಕ್ರಮದ ನೇತೃತ್ವವನ್ನು ಕರ್ನಾಟಕ ಸರ್ಕಾರದ ಸಚಿವ ಅಜಯ್ ಸಿಂಗ್ ವಹಿಸಲಿದ್ದು, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಜಿಲ್ಲೆಯ ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಶಿವಾನಂದ ಪಾಟೀಲ, ಸ್ಥಳೀಯ ಶಾಸಕ ಸಿ.ಎಸ್.ನಾಡಗೌಡ, ರಾಜ್ಯಸಭಾ ಸದಸ್ಯ ನಾರಾಯಣ ಬಾಂಡಗೆ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ ಎಲ್ಲ ಜನರು ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿ ನಗರದ ವೈಭವವತೆಯನ್ನು ಹೆಚ್ಚಿಸಬೇಕು ಎಂದರು.ಸರ್ವ ಸಮಾಜದ ಸಹಭಾಗಿತ್ವದಲ್ಲಿ ಕಾರ್ಯಕ್ರಮ: ಸುರೇಶ
ಮಹಾರಾಣಾ ಪ್ರತಾಪಸಿಂಹ ಅವರು ಕೇವಲ ಒಂದು ಸಮಾಜಕ್ಕೆ ಸೇರಿದ ವ್ಯಕ್ತಿಯಲ್ಲ. ದೇಶದ ಸ್ವಾಭಿಮಾನ, ಸ್ವಾತಂತ್ರ್ಯ, ರಾಷ್ಟ್ರಪ್ರೇಮ ಹಾಗೂ ದೇಶಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿದ ರಾಷ್ಟ್ರದ ಮಹಾನ್ ವೀರರಾಗಿದ್ದಾರೆ. ಹೀಗಾಗಿ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮವು ಯಾವುದೇ ಒಂದು ಸಮಾಜಕ್ಕೆ ಸೀಮಿತವಾಗದೆ, ಸರ್ವ ಸಮಾಜದ ಜನರ ಸಹಭಾಗಿತ್ವದಲ್ಲಿ ನಡೆಯುತ್ತಿರುವುದು ಈ ಸಮಾರಂಭದ ಮಹತ್ವವನ್ನು ಹೆಚ್ಚಿಸಿದೆ ಎಂದು ರಜಪೂತ ಸಮಾಜದ ಮುಖಂಡ ಸುರೇಶ ಹಜೇರಿ ಹೇಳಿದರು.ಈ ಐತಿಹಾಸಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತಾಳಿಕೋಟೆ ನಗರದ ಎಲ್ಲ ಸಮಾಜಗಳ ಮುಖಂಡರು, ಹಿರಿಯರು, ಯುವಕರು ಹಾಗೂ ಸಾರ್ವಜನಿಕರು ಕೈಜೋಡಿಸಿದ್ದು, ನಗರದಲ್ಲಿ ಕಳೆದ ೧೫ ದಿನಗಳಿಂದ ಸಿದ್ಧತೆಗಳು ಭರದಿಂದ ಸಾಗಿವೆ. ನಗರದ ಪ್ರಮುಖ ರಸ್ತೆ, ವೃತ್ತ ಹಾಗೂ ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ರಜಪೂತ ಸಮಾಜದ ಅಧ್ಯಕ್ಷ ಹರಿಸಿಂಗ್ ಮೂಲಿಮನಿ, ಉಪಾಧ್ಯಕ್ಷ ರಥನಸಿಂಗ್ ಕೊಕಟನೂರ, ಬಾಲಾಜಿಸಿಂಗ್ ಹಜೇರಿ, ಗೋವಿಂದಸಿಂಗ್ ಮೂಲಿಮನಿ, ರಘುಸಿಂಗ್ ಹಜೇರಿ, ಗೋವಿಂದಸಿಂಗ್ ಗೌಡಗೇರಿ, ಸಂಜೀವಕುಮಾರ ಹಜೇರಿ, ಪ್ರಲ್ಹಾದಸಿಂಗ್ ಹಜೇರಿ, ಪ್ರದೀಪ ವಿಜಾಪೂರ, ಕೇಸರಸಿಂಗ್ ಹಜೇರಿ, ಜೈಸಿಂಗ್ ಮೂಲಿಮನಿ, ಸುರೇಶ ಅಂಬರಸಿಂಗ್ ಹಜೇರಿ, ಬಾಬು ಹಜೇರಿ, ವಿಠ್ಠಲಸಿಂಗ್ ಅಮರಸಿಂಗ್ ಹಜೇರಿ, ವಿಠ್ಠಲಸಿಂಗ್ ಹಜೇರಿ(ಬೇಕಿನಾಳ), ಮಾನಸಿಂಗ್ ಕೊಕಟನೂರ, ಅರುಣ ದಡೇದ, ನರಸಿಂಗ್ ವಿಜಾಪೂರ, ಸಂತೋಷ ಹಜೇರಿ, ರಮೇಶ ಗೌಡಗೇರಿ, ಮೊದಲಾದವರು ಇದ್ದರು.ಅಘೋರಿ ತಂಡದ ವಿಶೇಷತೆ:ನ.೧೫ರಂದು ಬೆಳಗ್ಗೆ ರಜಪೂತ ಗಲ್ಲಿಯಿಂದ ಮಹಾರಾಣಾ ಪ್ರತಾಪಸಿಂಹ ಅವರ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ವಾದ್ಯಮೇಳಗಳೊಂದಿಗೆ ಆರಂಭವಾಗಲಿದೆ. ಬೆಳಗ್ಗೆ ೮ರಿಂದ ೧೧.೩೦ರವರೆಗೆ ಅಥವಾ ಮಧ್ಯಾಹ್ನ ೧೨ ಗಂಟೆಯವರೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಲಿದೆ. ಮುಂಬೈನ ಅಘೋರಿ ತಂಡದ ವಿಶೇಷ ಪ್ರದರ್ಶನ, ನಾಸಿಕ್ ಡೋಲ್, ವಿವಿಧ ವಾದ್ಯಮೇಳಗಳು ಹಾಗೂ ಕುದುರೆ ಕುಣಿತ ಮೆರವಣಿಗೆಯ ಪ್ರಮುಖ ಆಕರ್ಷಣೆಗಳಾಗಲಿವೆ.ರಿಮೋಟ್ ಕಂಟ್ರೋಲ್ ಮೂಲಕ ಅನಾವರಣ:
ಮಹಾರಾಣಾ ಪ್ರತಾಪಸಿಂಹ್ ಅವರ ಮೂರ್ತಿ ಅನಾವರಣವನ್ನು ಉತ್ತರ ಕರ್ನಾಟಕದಲ್ಲಿಯೇ ವಿಶೇಷತೆಯಾಗಿ ರಿಮೋಟ್ ಕಂಟ್ರೋಲ್ ಮೂಲಕ ಅನಾವರಣಗೊಳಿಸುವ ಸದ್ದತೆಯನ್ನು ಮಾಡಿಕೊಳ್ಳಲಾಗಿದೆ.ಕಾರ್ಯಕ್ರಮ ಸ್ಥಳ ಬದಲಾವಣೆ:ರಾಣಾಪ್ರತಾಪ ಮೂರ್ತಿ ಅನಾವರಣದ ನಂತರ ಕಾರ್ಯಕ್ರಮ ನಡೆಸಲು ಕನ್ನಡ ಶಾಲಾ ಮೈದಾನದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಕನ್ನಡ ಶಾಲಾ ಮೈದಾನ ಚಿಕ್ಕದಾಗಿ ಮತ್ತು ವಾಹನಗಳ ನಿಲುಗಡೆ ಒಳಗೊಂಡು ಟ್ರಾಫಿಕ್ ಸಮಸ್ಯೆ ಹೆಚ್ಚಾಗಿ ಕಂಡುಬರುವುದರಿಂದ ಸಮಾಜದ ಹಾಗೂ ಊರಿನ ಹಿರಿಯ ಮುಖಂಡರ ಸಲಹೆಯ ಮೇರೆಗೆ ಎಸ್.ಕೆ.ಕಾಲೇಜ್ ಮೈಧಾನದಲ್ಲಿ ಕಾರ್ಯಕ್ರಮದ ಸಿದ್ಧತೆ ಮಾಡಿಕೊಳ್ಳಲಾಗಿದೆ.