ಸಾರಾಂಶ
ವಿಜೃಂಭಣೆಯಿಂದ ಜರುಗಿದ ದೀಪಾವಳಿ 5 ದಿನದ ಉತ್ಸವ । ಮಾದಪ್ಪಗೆ ನಮಿಸಿದ ಲಕ್ಷಾಂತರ ಭಕ್ತರು । ವಿವಿಧೆಡೆಯಿಂದ ಭಕ್ತರ ದಂಡು
ಕನ್ನಡಪ್ರಭ ವಾರ್ತೆ ಹನೂರುಮಲೆ ಮಹದೇಶ್ವರ ಬೆಟ್ಟದಲ್ಲಿ ಬೆಳಕಿನ ಹಬ್ಬ ದೀಪಾವಳಿ ಮಹಾ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಕಳೆದ ಐದು ದಿನಗಳಿಂದ ನಡೆಯುತ್ತಿರುವ ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ಹಲವು ವಿಶೇಷತೆಗಳೊಂದಿಗೆ ಮಂಗಳವಾರ ಮಹಾ ರಥೋತ್ಸವ 7.50 ರಿಂದ 9ರವರೆಗೆ ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ವಿಜೃಂಭಣೆಯಿಂದ ದೀಪಾವಳಿ ಮಹಾ ರಥೋತ್ಸವ ಸಂಭ್ರಮದಿಂದ ನಡೆಯಿತು.ಇದೇ ವೇಳೆಯಲ್ಲಿ ಶಾಸಕ ಎಂ.ಆರ್. ಮಂಜುನಾಥ್, ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಎಇ ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ಕೊಳ್ಳೇಗಾಲ ಉಪ ವಿಭಾಗ ಡಿವೈಎಸ್ಪಿ ಧರ್ಮೇಂದರ್ ಹಾಜರಿದ್ದರು.
ರಥೋತ್ಸವ ವಿಶೇಷ:ದೀಪಾವಳಿ ಮಹಾರಥೋತ್ಸವಕ್ಕೂ ಮುನ್ನ ಬೆಳಿಗ್ಗೆ 7 ಗಂಟೆಗೆ ಕೆಂಪು ಅನ್ನ ತಯಾರಿಸಿ (ಬಲಿ ಅನ್ನ) ಮಲೆ ಮಹದೇಶ್ವರ ಉತ್ಸವಮೂರ್ತಿಗೆ ಪೂಜೆ ಸಲ್ಲಿಸಿ ನಂತರ ಬೇಡರ ಸ್ವಾಮಿಗಳ ನೇತೃತ್ವದಲ್ಲಿ ರಥಕ್ಕೆ ಪೂಜೆ ಸಲ್ಲಿಸಿ ರಥದ ಚಕ್ರಗಳಿಗೆ ಬಲಿ ಅನ್ನ ಇಟ್ಟು ನಂತರ ಮಹಾ ಮಂಗಳಾರತಿ ಪೂಜೆ ಸಲ್ಲಿಸಿ ಬೆಲ್ಲದ ಆರತಿ ನಂತರ ಬೂದಕುಂಬಳಕಾಯಿ ಒಡೆದು, ಬಳಿಕ ಸ್ವಾಮೀಜಿಗಳು ತೆಂಗಿನಕಾಯಿ ಒಡೆಯುವ ಮೂಲಕ ಮಹಾರಥೋತ್ಸವಕ್ಕೆ ಬೇಡಗಂಪಣ ಸಮುದಾಯದ ಹೆಣ್ಣುಮಕ್ಕಳಿಂದ ಬೆಲ್ಲದ ಆರತಿ ಬೆಳಗಿನ ನಂತರ ಚಾಲನೆ ನೀಡಲಾಯಿತು.
ಬಿಳಿ ಆನೆ ಉತ್ಸವ:ಮಹಾ ರಥೋತ್ಸವ ನಂತರ ಪಾರ್ವತಿ ಪರಮೇಶ್ವರರ ಉತ್ಸವ ಮೂರ್ತಿಯನ್ನು ಬಿಳಿ ಆನೆಯ ಮೇಲೆ ಪ್ರತಿಷ್ಠಾಪಿಸಿ ದೇವಾಲಯದ ಸುತ್ತಲೂ ವಾದ್ಯಗಳೊಂದಿಗೆ ಪ್ರದಕ್ಷಣೆ ಹಾಕಿ ಉತ್ಸವ ಮೂರ್ತಿಯನ್ನು ಪೂಜೆ ಸಲ್ಲಿಸಿ ಮಹಾ ಮಂಗಳಾರತಿಯೊಂದಿಗೆ ಪೂಜೆಯ ನಂತರ ಬಿಳಿ ಆನೆ ಉತ್ಸವ ನಡೆಯಿತು.
ಗುರು ಬ್ರಹ್ಮೋತ್ಸವ:ಮಲೆ ಮಹದೇಶ್ವರ ಉತ್ಸವ ಮೂರ್ತಿಗೆ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಟ್ರ್ಯಾಕ್ಟರ್‌ನಲ್ಲಿ ಇರುವ ಪಲ್ಲಕ್ಕಿಯಲ್ಲಿ ಇಟ್ಟು ಗುರು ಬ್ರಹ್ಮೋತ್ಸವ ಉತ್ಸವಮೂರ್ತಿಯನ್ನು ವಾದ್ಯಗಳ ಹಾಗೂ ವೀರಗಾಸೆ ಕತ್ತಿ ವರಸೆ ನವಿಲೂರು ವಾದ್ಯ ಮೇಳಗಳ ಜತೆ ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಲಾಯಿತು.
ಉತ್ಸವಮೂರ್ತಿಗೆ ಧೂಪದ ಅಭಿಷೇಕ ಬಿಲ್ವಾರ್ಚನೆ, ಅಭಿಷೇಕ ಮಹಾಮಂಗಳಾರತಿ ನಂತರ ವಿಶೇಷ ಪೂಜೆ ಸಲ್ಲಿಸುವ ಈ ಸನ್ನಿವೇಶವನ್ನು ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಮಾದಪ್ಪನ ಭಕ್ತರು ಕಣ್ತುಂಬಿಕೊಂಡರು.ಮೆರಗು ತಂದ ದೀಪಾಲಂಕಾರ:
ಮಲೆ ಮಹದೇಶ್ವರ ಬೆಟ್ಟದಲ್ಲಿ ಕಳೆದ ಐದು ದಿನಗಳಿಂದ ದೀಪಾವಳಿ ಜಾತ್ರೆ ಮಹೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಜಾತ್ರೆಯಲ್ಲಿ ಆಕರ್ಷಕ ವಿವಿಧ ಬಣ್ಣಗಳಿಂದ ಕೂಡಿರುವ ವಿದ್ಯುತ್ ದೀಪಾಲಂಕಾರ ಉತ್ಸವಕ್ಕೆ ಮೆರುಗು ತಂದಿತ್ತು.ರಥೋತ್ಸವ ಭಕ್ತರ ದಂಡು:
ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಬೆಳಕಿನ ಹಬ್ಬ ದೀಪಾವಳಿ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ನಡೆದ ದೀಪಾವಳಿ ಮಹಾ ರಥೋತ್ಸವಕ್ಕೆ ರಾಜ್ಯದ ನಾನಾ ಭಾಗಗಳಿಂದ ಹಾಗೂ ವಿವಿಧ ಜಿಲ್ಲೆಯ ತಾಲೂಕುಗಳಿಂದ ಮತ್ತು ತಮಿಳುನಾಡಿನಿಂದಲೂ ಲಕ್ಷಾಂತರ ಭಕ್ತರು ಮಹಾ ರಥೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ವಿಜೃಂಭಣೆಯಿಂದ ನಡೆಯಿತು.ದಾಸೋಹ ವ್ಯವಸ್ಥೆ:
ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಮಾದಪ್ಪನ ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಶೇಷ ದಾಸೋಹ ವ್ಯವಸ್ಥೆ ಕಲ್ಪಿಸಿದೆ.ವರ್ಷಕ್ಕೆ ಮೂರು ಬಾರಿ ರಥೋತ್ಸವ:
ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾರಥೋತ್ಸವವು ವರ್ಷದಲ್ಲಿ ಮೂರು ಬಾರಿ ನಡೆಯುತ್ತದೆ. ದೀಪಾವಳಿ, ಶಿವರಾತ್ರಿ ಮತ್ತು ಯುಗಾದಿ ಸಂದರ್ಭದಲ್ಲಿ ವಿಶೇಷ ಮಹಾ ರಥೋತ್ಸವ ನಡೆಯುತ್ತದೆ.ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕಳೆದ ಐದು ದಿನಗಳಿಂದ ನಡೆದ ದೀಪಾವಳಿ ಜಾತ್ರಾ ಮಹೋತ್ಸವದಲ್ಲಿ ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಭೇಟಿ ನೀಡಿ ಮಾದಪ್ಪನ ದರ್ಶನ ಪಡೆದಿದ್ದಾರೆ. ಈ ಜಾತ್ರೆಯಲ್ಲಿ ಐದು ಲಕ್ಷ ಲಾಡು ಪ್ರಸಾದ ತಯಾರಿಸಿ ನೀಡಲಾಗಿದೆ. ಶ್ರೀ ಕ್ಷೇತ್ರದಲ್ಲಿ ಉತ್ತಮ ರೀತಿಯಲ್ಲಿ ಜಾತ್ರೆ ನಡೆದಿದೆ.
ಎಇ ರಘು, ಕಾರ್ಯದರ್ಶಿ, ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಮಲೆ ಮಹದೇಶ್ವರ ಬೆಟ್ಟ.