ನಾಳೆಯಿಂದ ಗ್ರಾಮದೇವಿಯರ ಅದ್ಧೂರಿ ಜಾತ್ರೆ

| Published : May 30 2024, 12:47 AM IST

ಸಾರಾಂಶ

ಜಾತ್ರೆಗೆ ಬೇರೆ ಗ್ರಾಮಗಳಿಂದ ಬರುವ ಭಕ್ತರು ಬಸ್‌ನಿಂದ ಇಳಿದ ತಕ್ಷಣ ಬರಿಗಾಲಿನಲ್ಲೆ ತಮ್ಮ ಸಂಬಂಧಿಕರ ಮನೆಗಳಿಗೆ ಹೋಗಬೇಕು

ರೋಣ: ತಾಲೂಕಿನ ಯಾವಗಲ್ ಗ್ರಾಮದೇವಿಯರ ಜಾತ್ರೆ ಮೇ 31ರಿಂದ ಐದು ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿದೆ.

ನೂರು ವರ್ಷಗಳಿಂದ ಸ್ಥಗಿತವಾಗಿದ್ದ ಜಾತ್ರೆಯೂ ಕಳೆದ ಐದು ವರ್ಷಗಳ ಹಿಂದಿನಿಂದ ಮತ್ತೆ ಆರಂಭವಾಗಿದ್ದು, ಜಾತ್ರೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ.ಜಾತ್ರೆ ನಡೆಯುವ 5 ದಿನಗಳಲ್ಲಿ ಗ್ರಾಮದಲ್ಲಿ ಯಾವುದೇ ವಾಹನ ಸಂಚರಿಸುವಂತಿಲ್ಲ. ಮನೆಯಲ್ಲಿ ಯಾರು ಅಡುಗೆ ಮಾಡುವುದಿಲ್ಲ. ಜಾತ್ರಾ ಕಮೀಟಿಯಿಂದ 5 ದಿನಗಳ ಕಾಲ ಊಟದ ವ್ಯವಸ್ಥೆ ಮಾಡಲಾಗಿದ್ದು, ಗ್ರಾಮಸ್ಥರೆಲ್ಲರೂ ಸೇರಿ ಒಂದೇ ಕುಟುಂಬದವರಂತೆ ಊಟ ಮಾಡುವುದು ಇಲ್ಲಿ ವಿಶೇಷ. ಜಾತ್ರೆಗೆ ಬೇರೆ ಗ್ರಾಮಗಳಿಂದ ಬರುವ ಭಕ್ತರು ಬಸ್‌ನಿಂದ ಇಳಿದ ತಕ್ಷಣ ಬರಿಗಾಲಿನಲ್ಲೆ ತಮ್ಮ ಸಂಬಂಧಿಕರ ಮನೆಗಳಿಗೆ ಹೋಗಬೇಕು. ಅಷ್ಟೇ ಅಲ್ಲದೇ ವೈಯಕ್ತಿಕ ಕೆಲಸ ಕಾರ್ಯಗಳಿಗಾಗಿ ಈ ಗ್ರಾಮಕ್ಕೆ ಬರುವರು ಅಲ್ಲಿ ವಾಸ್ತವ್ಯ ಹೂಡದೇ ಕಡ್ಡಾಯವಾಗಿ ಸ್ವಗ್ರಾಮಕ್ಕೆ ಮರಳಬೇಕೆನ್ನುವುದು ಇಲ್ಲಿಯ ಸಂಪ್ರದಾಯವಾಗಿದೆ.

ಗ್ರಾಮಸ್ಥರಿಂದ ಸಂಗ್ರಹಿಸಿದ ದೇಣಿಗೆಯಲ್ಲಿ ಗ್ರಾಮ ದೇವತೆಯರಿಗೆ ತಲಾ ಒಂದು ತೊಲೆಯ ಟೀಕಿ( ಒಂದು ಬಗೆಯ ಕಂಠಾಭರಣ) ಮಾಡಿಸುತ್ತಿದ್ದೇವೆ. ಹಿಂದಿನ ಜಾತ್ರೆ ವೇಳೆ ತವರ ಮನೆ ಮಹಿಳೆಯರಿಂದ ಸಂಗ್ರಹಿಸಿದ ದೇಣಿಗೆಯಲ್ಲಿ ದೇವಸ್ಥಾನದ ಮುಂದೆ ತಗಡು ಹಾಕಿಸಿ ನೆರಳಿನ ವ್ಯವಸ್ಥೆ ಮಾಡಲಾಗಿದೆ ಎಂದು ಗ್ರಾಪಂ ಅಧ್ಯಕ್ಷೆ ಲಲಿತಾ ರೋಣದ ತಿಳಿಸಿದ್ದಾರೆ.

ಗ್ರಾಮದೇವಿಯರ ಮೂರ್ತಿಗಳು ಭಿನ್ನವಾಗಿದ್ದವು. ಹೀಗಾಗಿ ಅವುಗಳನ್ನು ದುರಸ್ತಿ ಮಾಡಿಸಿ ಹಾಗೇ ಪ್ರತಿಷ್ಠಾಪನೆ ಮಾಡುವುದು ಸರಿಯಲ್ಲ ಎಂದು ಜಾತ್ರೆ ಆರಂಭಿಸಿದ್ದೇವೆ ಎಂದು ದೇಗುಲ ಸಮಿತಿ ಮುಖಂಡ ಅಂದಪ್ಪ ಸವದತ್ತಿ ಹೇಳಿದರು.5 ದಿನ ಅದ್ಧೂರಿ ಆಚರಣೆ: ಮೇ 31ರಂದು ಗ್ರಾಮದೇವತೆಯರ ಮೂರ್ತಿಗಳ ಪುರ ಪ್ರವೇಶ ಮತ್ತು ಚೌತ ಮನೆಯಲ್ಲಿ ಕೂಡಿಸುವುದು. ಜೂ.1 ರಂದು ಚೌತ ಮನೆಯಿಂದ ದೇಗುಲಕ್ಕೆ ದೇವಿಯ ಮೂರ್ತಿಗಳ ಆಗಮನ. ಜೂ. 2ರಂದು ಹೊನ್ನಾಟ ಮತ್ತು ವಿವಿಧ ಹೋಮಗಳು, ಜೂ. 3ರಂದು ಇಡೀ ದಿನ ಪೂಜೆ, ಹೋಮಗಳು ನಡೆಯಲಿವೆ.

ಉತ್ಸವದ ಕೊನೆ ದಿನವಾದ ಜೂ.4 ರಂದು ಬ್ರಾಹ್ಮಿ ಮೂರ್ಹತದಲ್ಲಿ ದೇವಿಯರು ಗರ್ಭಗುಡಿಯ ಪೀಠದಲ್ಲಿ ಆಸೀನರಾಗಲಿದ್ದಾರೆ. ಅಂದು ಬೆಳಿಗ್ಗೆ 10 ಕ್ಕೆ ಧರ್ಮಸಭೆ, ಸಂಜೆ 5 ಕ್ಕೆ ಗ್ರಾಮದ ಹೆಣ್ಣು ಮಕ್ಕಳಿಗೆ ಉಡಿ ತುಂಬುವ ಕಾರ್ಯಕ್ರಮ ಬಳಿಕ 7 ಕ್ಕೆ ಜಾನಪದ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.