ನಿಜಗಲ್ ಬೆಟ್ಟದಲ್ಲಿ ಅದ್ಧೂರಿ ಹನುಮ ಜಯಂತಿ

| Published : Dec 14 2024, 12:46 AM IST

ಸಾರಾಂಶ

ದಾಬಸ್‍ಪೇಟೆ: ಹಿಂದೂ, ಮುಸ್ಲಿಮರ ಧಾರ್ಮಿಕ ಭಾವೈಕ್ಯತೆಯ ತಾಣವಾದ ಸೋಂಪುರ ಹೋಬಳಿಯ ನಿಜಗಲ್ ಸಿದ್ದರಬೆಟ್ಟದಲ್ಲಿ ಶುಕ್ರವಾರ ವಿಜೃಂಭಣೆಯ ಹನುಮ ಜಯಂತಿಯಲ್ಲಿ ಸಾವಿರಕ್ಕೂ ಅಧಿಕ ಹನುಮ ಮಾಲಾಧಾರಿಗಳು ಜಡಿ ಮಳೆಯನ್ನು ಲೆಕ್ಕಿಸದೇ ನೆಲಮಂಗಲದಿಂದ 30 ಕಿ.ಮೀ ಪಾದಾಯಾತ್ರೆ ಮಾಡಿ ಬೆಟ್ಟ ಹತ್ತಿ ಹನುಮ ಹಾಗೂ ಕ್ಷೇತ್ರದ ಆರಾಧ್ಯದೈವ ಸಿದ್ದಪ್ಪ ದೇವರ ದರ್ಶನ ಪಡೆದು ಪುನೀತರಾದರು.

ವಿವಿಧ ಸ್ಥಳಗಳಿಂದ ಆಗಮಿಸಿದ್ದ ಹನುಮ ಮಾಲಾಧಾರಿಗಳು ಪಟ್ಟಣದ ಶಿವಗಂಗೆ ವೃತ್ತ ಹಾಗೂ ಉದ್ದಾನೇಶ್ವರ ವೃತ್ತದಲ್ಲಿ ಸೇರಿ ಆಗಲಕುಪ್ಪೆ ಮಾರ್ಗವಾಗಿ ಹನುಮ ದೇವರಿಗೆ ಜೈಕಾರ ಹಾಕುತ್ತ ಬೆಟ್ಟಕ್ಕೆ ಪಾದಯಾತ್ರೆ ಮಾಡಿದರು. ದಾರಿಯುದ್ದಕ್ಕೂ ಮಹಿಳೆಯರು ಪೂರ್ಣಕುಂಭ ಸ್ವಾಗತ ಮಾಡಿದರು. ಭಜನೆ, ಹಾಡು, ಕುಣಿತದ ಮೆರವಣಿಗೆಯಲ್ಲಿ ಮಂಗಳವಾದ್ಯ, ಡೊಳ್ಳು ಕುಣಿತ, ವೀರಭದ್ರ ನೃತ್ಯ, ನಂದಿ ಧ್ವಜ, ತಮಟೆ ವಾದ್ಯಗಳು ಮೆರಗು ನೀಡಿದವು.

ಸಂಜೆ 5 ಗಂಟೆಗೆ ಬೆಟ್ಟದ ಮೇಲಿನ ಹನುಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಭಕ್ತರೆಲ್ಲರೂ ಒಮ್ಮಗೆ ಬಜರಂಗಿಗೆ ಹಾಕಿದ ಜೈಕಾರ ಮುಗಿಲು ಮುಟ್ಟಿತು. ಬೆಟ್ಟದ ಮೇಲಿರುವ ಎಲ್ಲಾ ದೇವಾಲಯಗಳನ್ನು ಹೂವಿನಿಂದ ಅಲಂಕರಿಸಲಾಗಿತ್ತು.

ವಿದ್ಯುತ್ ದೀಪದ ಅಲಂಕಾರ: ಹನುಮ ಜಯಂತಿ ಅಂಗವಾಗಿ 3562 ಅಡಿ ಎತ್ತರವಿರುವ ಬೆಟ್ಟವನ್ನು ಮತ್ತು ಬೆಟ್ಟಕ್ಕೆ ಸಾಗುವ ರಸ್ತೆಯುದ್ದಕ್ಕೂ ಅತ್ಯಾಧುನಿಕ ವಿದ್ಯುತ್ ಲೇಸರ್ ಕಿರಣಗಳು ಮತ್ತು ಬಣ್ಣ ಬಣ್ಣದ ವಿದ್ಯುತ್ ದೀಪಗಳ ಬೆಳಕಿನಿಂದ ಸಿಂಗರಿಸಲಾಗಿತ್ತು. ಪಟ್ಟಣದ ಜ್ಞಾನ ಸಂಗಮ ಪಿಯು ಕಾಲೇಜಿನ ವಿದ್ಯಾರ್ಥಿಗಳು, ಭಕ್ತರಿಗೆ ಊಟ, ತಿಂಡಿ, ಹೆಸರು ಬೇಳೆ, ನೀರು ಮಜ್ಜಿಗೆ ಮತ್ತು ಪಾನಕ ವಿತರಿಸಿದರು.

ಪೋಟೋ 4 * 5 : ದಾಬಸ್‍ಪೇಟೆ ಪಟ್ಟಣದಲ್ಲಿ ನಡೆದ ಹನುಮ ಜಯಂತಿಯಲ್ಲಿ ಭಾಗವಹಿಸಿರುವ ಭಕ್ತರು.