ಬೀದರ್ ನಗರದ ಜಗನ್ನಾಥ ದೇವಸ್ಥಾನ (ಶ್ರೀ ಕೃಷ್ಣ ಚೈತನ್ಯ ಟ್ರಸ್ಟ್) ವತಿಯಿಂದ ಜುಲೈ 19 ರಂದು ಶ್ರೀ ಜಗನ್ನಾಥ ರಥಯಾತ್ರಾ ಮಹೋತ್ಸವದ ಕರಪತ್ರ ಬಿಡುಗಡೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಬೀದರ್
ನಗರದ ಜಗನ್ನಾಥ ದೇವಸ್ಥಾನ (ಶ್ರೀ ಕೃಷ್ಣ ಚೈತನ್ಯ ಟ್ರಸ್ಟ್) ವತಿಯಿಂದ ಜುಲೈ 19 ರಂದು ‘ಶ್ರೀ ಜಗನ್ನಾಥ ರಥಯಾತ್ರಾ ಮಹೋತ್ಸವ’ವನ್ನು ಅತ್ಯಂತ ಭಕ್ತಿ ಹಾಗೂ ಸಡಗರದಿಂದ ಆಯೋಜಿಸಲಾಗಿದೆ ಎಂದು ಶ್ರೀ ಕೃಷ್ಣ ಚೈತನ್ಯ ಟ್ರಸ್ಟ್ ನ ಕಾರ್ಯಕಾರಿ ಸಮಿತಿ ಸದಸ್ಯರಾದ ರಾಮಕೃಷ್ಣ ಸಾಳೆ ತಿಳಿಸಿದರು.ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ರಥಯಾತ್ರೆಯು ಜುಲೈ 19ರ ಭಾನುವಾರ ಬೆಳಿಗ್ಗೆ 11.30 ಗಂಟೆಗೆ ನಗರದ ರಾಂಪುರೆ ಕಾಲೋನಿಯಲ್ಲಿರುವ ಶ್ರೀ ಲಕ್ಷ್ಮಿ ಸತ್ಯನಾರಾಯಣ ದೇವಸ್ಥಾನದಿಂದ ವಿಜೃಂಭಣೆಯಿಂದ ಪ್ರಾರಂಭವಾಗಲಿದೆ. ‘ಜಗತ್ ಕೆ ನಾಥ್ ಶ್ರೀ ಜಗನ್ನಾಥ್’ ಎಂಬ ಘೋಷಣೆಯೊಂದಿಗೆ ಜರುಗುವ ಈ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ರಥಯಾತ್ರೆ ಪ್ರಾರಂಭವಾಗು ವುದಕ್ಕೂ ಮುನ್ನ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿ ಪೂಜೆ, ಅರ್ಚನೆ, ಪ್ರಾರ್ಥನೆ, ಗೋಪೂಜೆ, ಮಹಾಪ್ರಸಾದ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಈ ಭವ್ಯ ರಥಯಾತ್ರೆಯು ನಗರದ ಪ್ರಮುಖ ವೃತ್ತಗಳಾದ: ಬೊಮ್ಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತ, ಭಗತ್ ಸಿಂಗ್ ವೃತ್ತ, ಡಾ.ಅಂಬೇಡ್ಕರ್ ವೃತ್ತ, ಜಾನವಾಡ ರಸ್ತೆ ಮಾರ್ಗವಾಗಿ ಸಾಗಿ, ಅಂತಿಮವಾಗಿ ಚಿಕ್‌ಪೇಟ್-ಹೈದ್ರಾಬಾದ್ ರಿಂಗ್ ರೋಡ್‌ನ ಮಾಮನ್‌ಕೇರಿಯಲ್ಲಿರುವ (ಜ್ಞಾನ ಸುಧಾ ಶಾಲೆ ಹತ್ತಿರ) ''''ಶ್ರೀ ಜಗನ್ನಾಥ ದೇವಸ್ಥಾನ'''' (ನೀಲಾಚಲ್ ಧಾಮ್) ತಲುಪಲಿದೆ.
ರಥಯಾತ್ರೆ ಸಂದರ್ಭದಲ್ಲಿ ಸಹಸ್ರಾರು ಶ್ರದ್ಧಾಳುಗಳು ರಥಯಾತ್ರೆಗೆ ಪುಷ್ಪಾರ್ಚನೆ ಮಾಡುವರು. ಮಹಾಪ್ರಸಾದ, ಜಲಪಾನ ಇತ್ಯಾದಿಗಳ ವ್ಯವಸ್ಥೆ ಮಾಡುವರು. ಬೆಳಿಗ್ಗೆ 11:30 ಗಂಟೆಗೆ ಪ್ರಾರಂಭವಾಗಿ ಸಾಯಂಕಾಲ 7ರ ವರೆಗೆ ಈ ರಥಯಾತ್ರೆ ಮೆರವಣಿಗೆ ಜರುಗುವುದು. ಜಗನ್ನಾಥ ಮಂದಿರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ರಾಮನವಮಿ ಮಹೋತ್ಸವ, ನರಸಿಂಹ ಸ್ವಾಮಿ ಮಹೋತ್ಸವ, ರಥಯಾತ್ರಾ ಮಹೋತ್ಸವ, ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವ, ರಾಧಾ ಅಷ್ಟಮಿ ಮಹೋತ್ಸವ, ಗೋವರ್ಧನ ಪೂಜಾ ಮಹೋತ್ಸವ, ದಾಮೋದರ ಪೂಜಾ ಮಹೋತ್ಸವ, ಗೌರ ಪೂರ್ಣಿಮಾ ಮಹೋತ್ಸವ, ಗೋವು ಪೂಜಾ ಮಹೋತ್ಸವ ಹೀಗೆ ಒಂಬತ್ತು ಮಹೋತ್ಸವಗಳು ಜರುಗಲಿವೆ. ಹಾಗೆಯೇ ಮಹಾಶಿವರಾತ್ರಿ ಮಹೋತ್ಸವ ಸಹ ಈ ಸಂದರ್ಭದಲ್ಲಿ ಜರುಗುವುದು. ಈ ಭವ್ಯ ರಥಯಾತ್ರೆಯಲ್ಲಿ ನೆರೆಯ ತೆಲಂಗಾಣ, ಮಹಾರಾಷ್ಟ್ರ, ಆಂಧ್ರ ಪ್ರದೇಶದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ರಥಯಾತ್ರೆಯ ಶೋಭೆ ಹೆಚ್ಚಿಸುವರು ಎಂದುಸಾಳೆ ತಿಳಿಸಿದರು.ರೋಟರಿ ಕ್ಲಬ್ ನ್ಯು ಸೆಂಚೂರಿಯ ವಿರಶೆಟ್ಟಿ ಮಣಿಗೆ ಮಾತನಾಡಿ, ಪ್ರತಿ ಭಾನುವಾರ ಸುಮಾರು 600 ಜನರಿಗೆ ''''''''ಅನ್ನದಾನ ಸೇವೆ'''''''' ಹಮ್ಮಿಕೊಳ್ಳಲಾಗುತ್ತಿದೆ. ಇದಲ್ಲದೆ, ಪ್ರತಿ ಭಾನುವಾರ ಸಂಜೆ 7 ಗಂಟೆಗೆ ದೇವಸ್ಥಾನದ ಆವರಣದಲ್ಲಿ ''''''''ಭಗವದ್ಗೀತಾ ಮತ್ತು ಭಾಗವತ ಸತ್ಸಂಗ'''''''' ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದರು.
ಮಂದಿರದ ಪ್ರಮುಖರಲ್ಲೊಬ್ಬರಾದ ರಾಜಕುಮಾರ ಅಳ್ಳೆ ಮಾತನಾಡಿ, ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಈ ಸತ್ಕಾರ್ಯಕ್ಕೆ, ‘ಶ್ರೀ ಜಗನ್ನಾಥ ನಿತ್ಯ ಸೇವೆ’ಯ ಮೂಲಕ ಆರ್ಥಿಕ ನೆರವು ನೀಡಲು ಇಚ್ಛಿಸುವ ದಾನಿಗಳು ‘ಶ್ರೀ ಕೃಷ್ಣ ಚೈತನ್ಯ ಟ್ರಸ್ಟ್’ಗೆ ತಮ್ಮ ಕೈಲಾದ ದೇಣಿಗೆ ನೀಡಿ ಸಹಕರಿಸಬಹುದು. ಹೆಚ್ಚಿನ ಮಾಹಿತಿಗಾಗಿ: 9341111690, 9901703583, 9448349440, 9448771617 ಸಂಪರ್ಕಿಸಬಹುದಾಗಿದೆ ಎಂದರು.ಉದ್ಯಮಿ ಸೋಮಶೇಖರ ಪಾಟೀಲ್ ಗಾದಗಿ, ಬಿಜೆಪಿ ಹಿರಿಯ ಮುಖಂಡ ಈಶ್ವರಸಿಂಗ್ ಠಾಕೂರ್, ಟ್ರಸ್ಟ ಪ್ರಮುಖರಾದ ಶಿವರಾಮ ಜೋಶಿ, ಅಭಿಷೇಕ ಆನಂದೆ ಹಾಗೂ ಇತರರು ಇದ್ದರು.
--ಚಿತ್ರ 15ಬಿಡಿಆರ್57:
ಬೀದರ್ ನಗರದ ಜಗನ್ನಾಥ ದೇವಸ್ಥಾನ (ಶ್ರೀ ಕೃಷ್ಣ ಚೈತನ್ಯ ಟ್ರಸ್ಟ್) ವತಿಯಿಂದ ಜುಲೈ 19 ರಂದು ಶ್ರೀ ಜಗನ್ನಾಥ ರಥಯಾತ್ರಾ ಮಹೋತ್ಸವದ ಕರಪತ್ರ ಬಿಡುಗಡೆ ಮಾಡಲಾಯಿತು.