ದೀಪಾವಳಿ ಅಮಾವಾಸ್ಯೆ ನಿಮಿತ್ತ ಪಟ್ಟಣದಲ್ಲಿ ಭಾನುವಾರ ಸಂಜೆ ಹಾಗೂ ಸೋಮವಾರ ಬೆಳಗ್ಗೆ ಎರಡು ದಿನಗಳ ಕಾಲ ಮಹಾಲಕ್ಷ್ಮಿ ಪೂಜೆ ಅತ್ಯಂತ ಸಡಗರ-ಸಂಭ್ರಮ ಮತ್ತು ಶ್ರದ್ಧಾಭಕ್ತಿಗಳಿಂದ ಜರುಗಿತು.
ಕನ್ನಡಪ್ರಭ ವಾರ್ತೆ ಮುಂಡರಗಿ
ದೀಪಾವಳಿ ಅಮಾವಾಸ್ಯೆ ನಿಮಿತ್ತ ಪಟ್ಟಣದಲ್ಲಿ ಭಾನುವಾರ ಸಂಜೆ ಹಾಗೂ ಸೋಮವಾರ ಬೆಳಗ್ಗೆ ಎರಡು ದಿನಗಳ ಕಾಲ ಮಹಾಲಕ್ಷ್ಮಿ ಪೂಜೆ ಅತ್ಯಂತ ಸಡಗರ-ಸಂಭ್ರಮ ಮತ್ತು ಶ್ರದ್ಧಾಭಕ್ತಿಗಳಿಂದ ಜರುಗಿತು.ಭಾನುವಾರ ಸಂಜೆಯಿಂದಲೇ ಪಟ್ಟಣದ ಮುಖ್ಯ ಬಜಾರ್, ಗಾಂಧಿ ವೃತ್ತ ಹಾಗೂ ಪ್ರಮುಖ ರಸ್ತೆಗಳಲ್ಲಿನ ವ್ಯಾಪಾರ ಮಳಿಗೆಗಳನ್ನು ವಿದ್ಯುತ್ ದೀಪಗಳು, ತಳಿರು-ತೋರಣ ಮತ್ತು ಹೂವಿನ ಮಾಲೆಗಳಿಂದ ಶೃಂಗರಿಸಲಾಗಿತ್ತು. ಕಿರಾಣಿ, ಬಟ್ಟೆ, ಚಿನ್ನಾಭರಣ, ಆಟೋಮೊಬೈಲ್ಸ್ ಸೇರಿದಂತೆ ವಿವಿಧ ವ್ಯಾಪಾರಸ್ಥರು ತಮ್ಮ ಅಂಗಡಿಗಳಲ್ಲಿ ಸಂಪತ್ತಿನ ಅಧಿದೇವತೆ ಮಹಾಲಕ್ಷ್ಮಿ, ಗಣೇಶ ಹಾಗೂ ನೂತನ ಲೆಕ್ಕದ ಪುಸ್ತಕಗಳನ್ನು (ಖಾತಾ ಪುಸ್ತಕ) ಇಟ್ಟು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ, ವ್ಯಾಪಾರ-ವ್ಯವಹಾರದಲ್ಲಿ ಅಭಿವೃದ್ಧಿಯಾಗಲೆಂದು ಪ್ರಾರ್ಥಿಸಿದರು.
ಸೋಮವಾರ ಮುಂಜಾನೆಯೂ ಪೂಜಾ ಕೈಂಕರ್ಯಗಳು ಮುಂದುವರಿದಿದ್ದು, ಮನೆ-ಮನೆಗಳಲ್ಲಿ ಮುಂಜಾನೆಯಿಂದಲೇ ಮಹಿಳೆಯರು ಮನೆ ಮುಂಭಾಗ ಆಕರ್ಷಕ ರಂಗೋಲಿಗಳನ್ನು ಬಿಡಿಸಿ, ತಳಿರು ತೋರಣ ಕಟ್ಟಿ ಲಕ್ಷ್ಮಿಯನ್ನು ಬರಮಾಡಿಕೊಂಡರು. ಲಕ್ಷ್ಮಿಯ ವಿಗ್ರಹ ಹಾಗೂ ಭಾವಚಿತ್ರಗಳಿಗೆ ವಿಶೇಷ ಹೂವಿನ ಅಲಂಕಾರ ಮಾಡಿ, ಬಗೆಬಗೆಯ ಸಿಹಿ ತಿನಿಸುಗಳು, ಹಣ್ಣು-ಹಂಪಲುಗಳ ನೈವೇದ್ಯ ಅರ್ಪಿಸಿ ಮಂಗಳಾರತಿ ಬೆಳಗಿದರು.ಪೂಜೆಯ ಬಳಿಕ ಗ್ರಾಹಕರಿಗೆ, ಸಾರ್ವಜನಿಕರಿಗೆ ಸಿಹಿ, ಪ್ರಸಾದ ವಿತರಿಸಲಾಯಿತು. ಸಂಜೆಯಾಗುತ್ತಿದ್ದಂತೆ ಪಟಾಕಿಗಳ ಸದ್ದು, ಮನೆಗಳ ಮುಂದೆ ಬೆಳಗಿದ ಹಣತೆಗಳ ಸಾಲು ಹಾಗೂ ಆಕಾಶಬುಟ್ಟಿಗಳ ಚಿತ್ತಾರ ಪಟ್ಟಣದ ಹಬ್ಬದ ಕಳೆಯನ್ನು ಇಮ್ಮಡಿಗೊಳಿಸಿತು. ಎರಡು ದಿನಗಳ ಕಾಲ ನಡೆದ ಪೂಜಾ ಕಾರ್ಯಕ್ರಮಗಳಿಂದಾಗಿ ಮುಂಡರಗಿ ಪಟ್ಟಣಾದ್ಯಂತ ದೀಪಾವಳಿಯ ಹಬ್ಬದ ವಾತಾವರಣ ಮನೆಮಾಡಿತ್ತು.