ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಫ್ರೀಡಂ ಪಾರ್ಕ್‌ನಲ್ಲಿ ಕಳೆದ ಐದು ದಿನದಿಂದ ನಡೆದ ಸ್ವದೇಶಿ ಮೇಳ ಭಾನುವಾರ ತೆರೆ ಕಂಡಿದ್ದು, ಆಯೋಜನಕರ ಮಾಹಿತಿ ಪ್ರಕಾರ 5 ದಿನದಲ್ಲಿ 3 ಲಕ್ಷಕ್ಕೂ ಹೆಚ್ಚು ಮಂದಿ ಮೇಳಕ್ಕೆ ಭೇಟಿ ನೀಡಿದ್ದಾರೆ. ಅಂದಾಜು 6 ಕೋಟಿ ರು. ಅಧಿಕ ವಹಿವಾಟು ನಡೆದಿದೆ. ಶಿವಮೊಗ್ಗ ಜನರಿಗೆ ದೇಶೀಯ ವಸ್ತುಗಳ ಪರಿಚಯ ಮತ್ತು ಸ್ವದೇಶಿ ಉತ್ಪಾದಕರಿಗೆ ಮಾರುಕಟ್ಟೆ ಒದಗಿಸುವ ದೃಷ್ಟಿಯಿಂದ ನಗರದ ಫ್ರೀಡಂ ಪಾರ್ಕ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ಸ್ವದೇಶಿ ಜಾಗರಣ ಮಂಚ್ ಆಯೋಜಿಸಿರುವ ಬೃಹತ್ ಸ್ವದೇಶಿ ಮೇಳಕ್ಕೆ ಲಕ್ಷಾಂತರ ಜನ ಭೇಟಿ ಕೊಟ್ಟಿದ್ದು ಐತಿಹಾಸಿಕ ದಾಖಲೆ.ಶಿವಮೊಗ್ಗ ನಗರದಲ್ಲಿ ಕೈ ಬರಹದ 6 ಮಹಾದ್ವಾರಗಳನ್ನು ನಿರ್ಮಾಣ ಮಾಡಲಾಗಿತ್ತು, ಯಾವುದೇ ಫ್ಲೆಕ್ಸ್‌ಗಳ ಅಬ್ಬರ, ಪ್ರಚಾರದಾಡಂಬರವಿಲ್ಲದಿದ್ದರೂ ಸ್ವದೇಶಿ ತನಕ್ಕೆ ಶಿವಮೊಗ್ಗ ನಗರದ ಜನತೆ ಮನ್ನಣೆ ಕೊಟ್ಟಿದ್ದು, ಇದು ಸ್ವದೇಶಿ ಪ್ರಜ್ಞೆಗೆ ಸಾಕ್ಷಿಯಾಗಿದೆ. ಸಾಗರೋಪಾದಿಯಲ್ಲಿ ಜನರು ಹರಿದು ಬರುತ್ತಿದ್ದರೂ ಕೂಡ ಮೇಳದ ಯಾವುದೇ ಭಾಗದಲ್ಲೂ ಧೂಳಿನ ವಾತಾವರಣವಿಲ್ಲದೇ, ಸ್ವಚ್ಛತೆಯಿಂದ ಕೂಡಿದ್ದು, ಪರಿಸರ ಸ್ನೇಹಿ ವಾತಾವರಣ ನಿರ್ಮಾಣವಾಗಿರುವುದು ಮೇಳ ವಿಶೇಷ.
ಮೇಳಕ್ಕೆ ಮಹಿಳೆಯರು, ಮಕ್ಕಳು, ಯುವಕರು, ವೃದ್ಧರು ಹೀಗೆ ಎಲ್ಲ ವಯೋಮಾನದ ಲಕ್ಷಾಂತರ ಜನರು ಭೇಟಿ ಭೇಟಿ ಕೊಟ್ಟಿದ್ದು, ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ನೋಡಿ ಆನಂದಿಸಿದರು. ಆಹಾರೋತ್ಪಾದನೆ, ಕೈಗಾರಿಕೆ, ಕೃಷಿ, ಸ್ವದೇಶಿ ಪರಂಪರೆ ಹಾಗೂ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ ಪರವಾಗಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ ಪರವಾಗಿ 18 ಮಳಿಗೆಗಳನ್ನು ಮಾರಾಟ, ವಿಸ್ತಾರ ಮತ್ತು ಕಾರ್ಯಾಗಾರ ಹೀಗೆ ಮೂರು ವಿಭಾಗಗಳಾಗಿ ಸ್ಥಾಪನೆ, ಬ್ಯಾಂಕ್ ಮಳಿಗೆಗಳಿಗೆ ಅವಕಾಶ ಹೀಗೆ ಒಟ್ಟು 280 ಮಳಿಗೆಗಳ ಸ್ಥಾಪನೆ ಮಾಡಲಾಗಿತ್ತು.ಪ್ರತಿ ದಿನವೂ ಖ್ಯಾ ತ ಕಲಾವಿದರಿಂದ ಹಾಡು, ಭರತನಾಟ್ಯ, ಯೋಗ, ಸಂಗೀತ, ಬಾನರಸುರಿ ವಾದನ, ಯಕ್ಷಗಾನ , ಡೊಳ್ಳು, ವೀರಗಾಸೆ ಹೀಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳಕ್ಕೆ ಮೆರಗು ತಂದುಕೊಟ್ಟಿತು.
ಮೇಳದಲ್ಲಿ ಮೇಲುಕೋಟೆ ಪುಳಿಯೋಗರೆ, ಮುಳುಬಾಗಿಲು ದೋಸೆ, ದಾವಣಗೆರೆ ಬೆಣ್ಣೆದೋಸೆ, ಸಾವಯವ ಕಬ್ಬಿನಹಾಲು, ಅಡಕೆ ಐಸ್ ಕ್ರೀಂ, ಬಂಗಾರಪೇಟೆ ಪಾನಿಪೂರಿ, ಹುಬ್ಬಳ್ಳಿಯ ಗಿರಮಿಟ್, ಸಿರಿಧಾನ್ಯಗಳ ರೊಟ್ಟಿ , ಅಕ್ಕಿ ರೊಟ್ಟಿ ಎಣಗಾಯಿ ಪಲ್ಯ, (ನವಣೆ, ಸಜ್ಜೆ, ರಾಗಿ, ಜೋಳ ,ಅಕ್ಕಿ ರೊಟ್ಟಿ) ಸೇರಿದಂತೆ ಕವಳಿ, ಕಂಚಿ, ಮಾವು, ನಿಂಬೆ, ಮೆಣಸಿನ ಹಿಂಡಿ, ಮೆಂತ್ಯ ಹಿಂಡಿ, ಅಗಸಿ, ಶೇಂಗಾ, ಗುರೆಳ್ಳು ಚಟ್ನಿ ಪುಡಿಯಂತಹ ವೈವಿಧ್ಯಮಯ ಆಹಾರಗಳೂ ಸ್ವದೇಶಿ ಆಹಾರ ಪ್ರೀಯರ ಮನಸ್ಸನ್ನು ಗೆದ್ದಿವೆ.ಇನ್ನು ಸ್ವದೇಶಿ ಕ್ರೀಡೆಗಳಾದ ಹಗ್ಗ ಜಗ್ಗಾಟ, ಲಗೋರಿ, ಕೋಲಾಟ, ಅವ್ವ ಅಪ್ಪಚ್ಚಿ ಆಟ, ಕುದುರೆ ಆಟ, ಚೆಂಡಾಟ, ರಿಂಗ್ ಆಟ, ಬುಗುರಿ, ಟೈರ್ ಗಾಲಿ ಆಟಗಳು ಮಕ್ಕಳಿಗೆ ಭರಪೂರ ಮನರಂಜನೆ ನೀಡಿದವು. ಪ್ಲಾಸ್ಟಿಕ್ ಕವರ್, ಬ್ಯಾಗ್ ಇಲ್ಲ, ಪೇಪರ್ ಕವರ್ ಕೂಡ ಇಲ್ಲ, ಊಟದ ತಟ್ಡೆ, ಲೋಟ ವ್ಯವಸ್ಥೆ, ಟೀ,ಕಾಫಿ ಕೂಟ ಲೋಟದಲ್ಲಿ ವ್ಯವಸ್ಥೆ, ಸ್ವಚ್ಛತೆ ಹೆಚ್ಚಿನ ಆದ್ಯತೆ, ಧೂಳು ಮುಕ್ತ, ಪರಿಸರ ಸ್ನೇಹಿ ವಾತಾವರಣವನ್ನು ಉಂಟು ಮಾಡಿದ್ದು ಮೇಳದ ವಿಶೇಷವಾಗಿತ್ತು.
ಭಾನುವಾರ ನಡೆದ ಸ್ವದೇಶಿ ಮೇಳದ ಸಮಾರೋಪದಲ್ಲಿ ಆವದೂತ ವಿನಯ್ ಗುರೂಜಿ ಮಾತನಾಡಿ, ಇಂದಿನ ಕಾಲದಲ್ಲಿ ಎಲ್ಲರಲ್ಲೂ ವಿದೇಶದ ಪ್ರಭಾವ ಬೀರಿದೆ. ನಾವು ಬಳಸುವ ಮೊಬೈಲ್‌ನಿಂದ ಇಡಿದು ಎಲ್ಲವೂ ಹೊರ ದೇಶದಿಂದಲೇ ಬರುತ್ತಿವೆ. ಸಾಲದಕ್ಕೆ ನಾವು ತಿನ್ನುವ ಆಹಾರ ಕೂಡ ವಿದೇಶದ್ದೆ ಆಗುತ್ತಿದೆ. ಈಗಾಗಾಗಿ ಭಾರತದಲ್ಲಿ ಸ್ವದೇಶಿ ಮಹತ್ವ ಕಳೆದುಕೊಳ್ಳುತ್ತಿದೆ. ಮೇಡಿನ್ ಇಂಡಿಯಾದಲ್ಲಿ ಮೆಡಿನ್ ಚೈನಾ ಆಗಿದೆ. ನಮ್ಮ ದೇಶವನ್ನು ಉತ್ತಮವಾಗಿ ಬೆಳೆಸಲು ಸ್ವದೇಶಿತನದಿಂದ ಸಾಧ್ಯವಿದೆ ಎಂದರು.ಕಾರ್ಯಕ್ರಮದಲ್ಲಿ ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಎಸ್.ರುದ್ರೇಗೌಡ, ಸ್ವದೇಶ ಮೇಳದ ಸಂಯೋಜಕ ಡಾ.ಧನಂಜಯ್ ಸರ್ಜಿ, ಸಂಘಟಕ ಹರ್ಷ ಕಾಮತ್, ಅಮೃತ್ ನೋನಿ ಶ್ರೀನಿವಾಸ್ ಮೂರ್ತಿ, ಅಖಿಲ ಭಾರತ ಸಂಘರ್ಷ ವಾಹಿನಿ ಪ್ರಮುಖ್ ಅನ್ನದಾ ಶಂಕ ಪಾಣಿಗ್ರಾಯಿ ಮತ್ತಿತರರು ಇದ್ದರು.
---------10ಎಸ್‌ಎಂಜಿಕೆಪಿ05
ಶಿವಮೊಗ್ಗದ ಫ್ರೀಡಂ ಪಾರ್ಕ್‌ನಲ್ಲಿ ಭಾನುವಾರ ನಡೆದ ಸ್ವದೇಶಿ ಮೇಳದ ಸಮಾರೋಪದಲ್ಲಿ ಆವದೂತ ವಿನಯ್ ಗುರೂಜಿ ಮಾತನಾಡಿದರು.