ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬುಧವಾರ ಹು-ಧಾ ಮಹಾನಗರ ಪಾಲಿಕೆಯ ವತಿಯಿಂದ ಇಲ್ಲಿನ ಸಿದ್ಧಾರೂಢರ ಮಠದಿಂದ ಆರಂಭವಾದ ತಾಯಿ ಭುವನೇಶ್ವರಿ ಭಾವಚಿತ್ರದ ಅದ್ಧೂರಿ ಮೆರವಣಿಗೆಯಲ್ಲಿ ಹಲವು ಕಲಾತಂಡಗಳು, ಸ್ತಬ್ದಚಿತ್ರಗಳು ಪಾಲ್ಗೊಳ್ಳುವ ಮೂಲಕ ಮೆರಗು ತಂದವು.50ನೇ ವರ್ಷದ ಕರ್ನಾಟಕ ಸಂಭ್ರಮದ ಅಂಗವಾಗಿ ನಡೆದ ಅದ್ಧೂರಿ ಮೆರವಣಿಗೆಯಲ್ಲಿ ಸಿದ್ಧಾರೂಢರ ಜಂಬೂ ಸವಾರಿ, ಪಾಲಿಕೆಯಿಂದ ತಯಾರಿಸಲಾದ ಚಂದ್ರಯಾನ-3, ಕಿತ್ತೂರು ರಾಣಿ ಚೆನ್ನಮ್ಮ, ಜ್ಯೂನಿಯರ್ ರಾಜಕುಮಾರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕನ್ನಡ ಕ್ರಾಂತಿ ಸಮಿತಿಯ ಚಂದ್ರಯಾನ-3, ಹಳೇ ಹುಬ್ಬಳ್ಳಿಯ ಭವಾನಿಶಂಕರ ದೇವಸ್ಥಾನದ ಸ್ತಬ್ದಚಿತ್ರಗಳ ಮೆರವಣಿಗೆ ಕನ್ನಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.
ಹಾನಗಲ್ಲಿನ ಕುಮಾರೇಶ್ವರ ಕಲಾತಂಡದ ಬೇಡರ ವೇಷ, ಹುಲಿವೇಷ, ಕರಡಿ ಮಜಲು, ಜಗ್ಗಲಿಗೆ, ಬ್ಯಾಂಡ್‌ಮೇಳ, ಮಹಿಳಾ ಮಂಡಳಿಗಳು ಹಾಗೂ ಶಾಲಾ ಮಕ್ಕಳ ಕೋಲಾಟ, ಸಾರೋಟದಲ್ಲಿ ಬುದ್ಧ-ಬಸವ-ಅಂಬೇಡ್ಕರ್ ವೇಷಧಾರಿಗಳ ಮೆರವಣಿಗೆ, ಕರ್ನಾಟಕ ಸಂಗ್ರಾಮ ಸೇನೆಯಿಂದ 100 ಮೀಟರ್ ಉದ್ದದ ಕನ್ನಡಧ್ವಜದ ಮೆರವಣಿಗೆ ಮೆರಗು ತಂದಿತು.ಸಿದ್ಧಾರೂಢರ ಮಠದಿಂದ ಆರಂಭವಾದ ತಾಯಿ ಭುವನೇಶ್ವರಿ ಭಾವಚಿತ್ರದ ಅದ್ಧೂರಿ ಮೆರವಣಿಗೆಯು ಇಂಡಿಪಂಪ್ ವೃತ್ತ, ಹಳೇ ಹುಬ್ಬಳ್ಳಿ, ಸಿದ್ಧಾರ್ಥ ವೃತ್ತ, ಬಮ್ಮಾಪುರ ಓಣಿ, ಹಿರೇಪೇಟ, ಜವಳಿ ಸಾಲ, ದುರ್ಗದಬೈಲ್, ಮರಾಠಗಲ್ಲಿ, ಮೇದಾರ ಓಣಿ, ತುಳಜಾಭವಾನಿ ಗುಡಿ, ದಾಜಿಬಾನಪೇಟ, ಸಂಗೋಳ್ಳಿ ರಾಯಣ್ಣ ವೃತ್ತ, ರಾಣಿಚೆನ್ನಮ್ಮ ವೃತ್ತ, ಸರ್ ಸಿದ್ದಪ್ಪ ಕಂಬಳಿ ಮಾರ್ಗದ ಮೂಲಕ ನೆಹರು ಮೈದಾನ ತಲುಪಿತು.
ಏಕೀಕರಣಕ್ಕೆ ಜಿಲ್ಲೆಯ ಕೊಡುಗೆ ಅಪಾರ: ಬೆಲ್ಲದಭಾವಚಿತ್ರದ ಮೆರವಣಿಗೆಯ ಪೂರ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ವೇದಿಕೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಅರವಿಂದ ಬೆಲ್ಲದ, ಹರಿದು ಹಂಚಿ ಹೋಗಿದ್ದ ಕರ್ನಾಟಕವನ್ನು ಒಂದುಗೂಡಿಸುವ ಚಿಂತನೆ ಆರಂಭವಾಗಿದ್ದೇ ಧಾರವಾಡ ಜಿಲ್ಲೆಯಿಂದ. ಇಲ್ಲಿನ ವಿದ್ಯಾವರ್ಧಕ ಸಂಘದ ಪಾತ್ರವೂ ಪ್ರಮುಖವಾಗಿದೆ. ಕರ್ನಾಟಕವನ್ನು ಒಂದುಗೂಡಿಸುವ ಕುರಿತು ನಡೆದ ಹೋರಾಟದ ಸಂದರ್ಭದಲ್ಲಿ ದಕ್ಷಿಣ ಕರ್ನಾಟಕದ ಕೆಲವರು ತೀವ್ರ ವಿರೋಧ ವ್ಯಕ್ತಪಡಿಸಿದರು. ಇದಕ್ಕೆ ಬಗ್ಗದೆ ಹಲವು ಮಹನನೀಯರ ಹೋರಾಟದ ಫಲವಾಗಿ 1973ರ ನ. 1ರಂದು ಕರ್ನಾಟಕ ಎಂಬ ಹೆಸರು ನಾಮಕರಣ ಮಾಡುವ ಮೂಲಕ ಹೋರಾಟಗಾರರ ಶ್ರಮಕ್ಕೆ ಫಲ ದೊರೆಯುವಂತಾಯಿತು. ಅಂದಿನಿಂದ ಇಂದಿನವರೆಗೂ ಕನ್ನಡ ರಾಜ್ಯೋತ್ಸವವನ್ನು ಎಲ್ಲ ಬಾಂಧವರು ಸೇರಿ ಸಂಭ್ರಮದಿಂದ ಆಚರಿಸಿಕೊಂಡು ಬರುತ್ತಿದ್ದೇವೆ ಎಂದರು.
ಅಧಿಕಾರಿಗಳ ಯಡವಟ್ಟು:50ನೇ ವರ್ಷದ ಕರ್ನಾಟಕ ಸಂಭ್ರಮ ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಕನ್ನಡ ಸಂಖ್ಯೆಗಳನ್ನು ಬಳಸದೇ ಆಂಗ್ಲಭಾಷೆಯ ಸಂಖ್ಯೆ ಬಳಸುವ ಮೂಲಕ ಕನ್ನಡಕ್ಕೆ ಅವಮಾನ ಮಾಡಿದ್ದಾರೆ. ನಿರ್ಲಕ್ಷ್ಯ ತೋರಿರುವ ಅಧಿಕಾರಿಗಳ ಮೇಲೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಕನ್ನಡದ ನೆಲ, ಜಲ, ಭಾಷೆಗೆ ತೊಂದರೆ ಬಂದರೆ ಒಂದಾಗಿ ಹೋರಾಟ ಮಾಡುವ ಮನೋಭಾವ ಎಲ್ಲರಲ್ಲೂ ಮೂಡಬೇಕಿದೆ. ಜಿಲ್ಲೆಯ ಹೆಸರನ್ನು ದೇಶಕ್ಕೆ ಪರಿಚಯಿಸಿದ ಗಂಗೂಬಾಯಿ ಹಾನಗಲ್ಲ ಅವರ ಹೆಸರಿನಲ್ಲಿರುವ ಸಂಸ್ಥೆಯು ಇಂದು ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿ ಅಳಿವಿನಂಚಿಗೆ ತಲುಪಿರುವುದು ನೋವಿನ ಸಂಗತಿ. ಸರ್ಕಾರ ಈ ಕೂಡಲೇ ಇಂತಹ ಸಂಘ-ಸಂಸ್ಥೆಗಳ ಪುನರುಜ್ಜೀವನಕ್ಕೆ ಆದ್ಯತೆ ನೀಡುವ ಕಾರ್ಯ ಕೈಗೊಳ್ಳುವಂತೆ ಸಲಹೆ ನೀಡಿದರು.ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಕರ್ನಾಟಕವನ್ನು ಕರುನಾಡು, ಗಂಧದನಾಡು, ಭುವನೇಶ್ವರಿಯ ನಾಡು, ಕವಿಗಳ, ಸಾಧು-ಸಂತರ ನಾಡು ಎಂದು ವ್ಯಾಖ್ಯಾನಿಸುತ್ತೇವೆ. ಕನ್ನಡಿಗರು ಸ್ವಾಭಿಮಾನಿಗಳು ಎಂಬ ಅರಿವು ಪ್ರತಿಯೊಬ್ಬರಲ್ಲೂ ಮೂಡಲಿ. ನ. 1 ರಂದು ಮಾತ್ರ ಕನ್ನಡಿಗರಾಗದೇ ವರ್ಷಪೂರ್ತಿ ಕನ್ನಡ ನಾಡು, ನುಡಿಯ ಉಳಿವಿಗೆ ಶ್ರಮಿಸುವ ಕಾರ್ಯ ಕೈಗೊಳ್ಳಬೇಕು. ಅನ್ಯ ಭಾಷೆಗಳಿಂದ ಕನ್ನಡದ ಮೇಲೆ ದಬ್ಬಾಳಿಕೆ ಇಂದಿಗೂ ಕಾಣುತ್ತೇವೆ. ಇದು ಸಲ್ಲದು. ಕನ್ನಡವೇ ಉಸಿರು ಎಂಬ ಮನೋಭಾವ ಎಲ್ಲರಲ್ಲೂ ಮೂಡಬೇಕು.
50ನೇ ಕರ್ನಾಟಕ ಸಂಭ್ರಮದಲ್ಲಿ ಆಂಗ್ಲಭಾಷೆಯ ಸಂಖ್ಯೆ ಬಳಕೆ ಖಂಡನಾರ್ಹ. ಹಿಂದಿನ ಸರ್ಕಾರ 3 ಸಾವಿರಕ್ಕೂ ಅಧಿಕ ಕನ್ನಡ ಶಾಲೆಗಳನ್ನು ಮುಚ್ಚಿದೆ. ಇನ್ನೂ 13ಸಾವಿರ ಕನ್ನಡ ಶಾಲೆಗಳನ್ನು ಬಂದ್ ಮಾಡುವ ಚಿಂತನೆ ನಡೆದಿರುವುದು ದುರ್ದೈವದ ಸಂಗತಿ. ಮಾತಿನಲ್ಲಿ ಮಾತ್ರ ಕನ್ನಡವಾಗದೇ ಕೃತಿಯಲ್ಲೂ ಕನ್ನಡವಾಗುವ ಕಾರ್ಯವಾಗಬೇಕಿದೆ. ಕನ್ನಡ ನಾಡು ಉಳಿಸುವ ಕಾರ್ಯಕ್ಕೆ ಎಲ್ಲರೂ ಸನ್ನದ್ಧರಾಗೋಣ ಎಂದು ಕರೆ ನೀಡಿದರು.ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಾಲಿಕೆ ಮೇಯರ್ ವೀಣಾ ಬರದ್ವಾಡ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ವೇಳೆ ಪಾಲಿಕೆ ಉಪಮೇಯರ್ ಸತೀಶ ಹಾನಗಲ್ಲ, ಸಭಾ ನಾಯಕ ಶಿವು ಹಿರೇಮಠ, ವಿಪಕ್ಷ ನಾಯಕಿ ಸುವರ್ಣಾ ಕಲ್ಲಕುಂಟಲಾ ಸೇರಿದಂತೆ ಸ್ಥಾಯಿ ಸಮಿತಿ ಅಧ್ಯಕ್ಷರು, ಪಾಲಿಕೆ ಸದಸ್ಯರು, ವಿವಿಧ ಕನ್ನಡಪರ ಸಂಘಟನೆಗಳ ಪ್ರಮುಖರು, ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.