ಬಣ್ಣಗೊಂಡ ನೂತನ ಗ್ರಾಮ ದೇವಿಯ ಮೂರ್ತಿಯು ಅನಾವರಣಗೊಳ್ಳುತ್ತಿದ್ದಂತೆಯೇ ನೆರೆದಿದ್ದ ಸಾವಿರಾರು ಭಕ್ತರು ಉಧೋ ಉಧೋ ಎನ್ನುವ ಉದ್ಘೋಷ ಮಾಡಿದರು.
ಲಕ್ಷ್ಮೇಶ್ವರ: ಸಮೀಪದ ಶಿಗ್ಲಿ ಗ್ರಾಮದಲ್ಲಿ ಗ್ರಾಮದೇವಿಯ ಪ್ರಥಮ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಸಂಜೆ ಪುನರ್ ಪ್ರತಿಷ್ಠಾಪನೆಗೊಳ್ಳಲಿರುವ ಗ್ರಾಮದೇವಿ ದ್ಯಾಮವ್ವನ ಮೂರ್ತಿಗೆ ಬಣ್ಣ ಲೇಪನವಾಗಿದ್ದರಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶೃಂಗರಿಸಿದ ಟ್ರ್ಯಾಕ್ಟರ್‌ನಲ್ಲಿ ಭವ್ಯವಾದ ದೇವಿಯ ಮೂರ್ತಿಯ ಮೆರವಣಿಗೆ ಜರಗಿತು.
ಬಣ್ಣಗೊಂಡ ನೂತನ ಗ್ರಾಮ ದೇವಿಯ ಮೂರ್ತಿಯು ಅನಾವರಣಗೊಳ್ಳುತ್ತಿದ್ದಂತೆಯೇ ನೆರೆದಿದ್ದ ಸಾವಿರಾರು ಭಕ್ತರು ಉಧೋ ಉಧೋ ಎನ್ನುವ ಉದ್ಘೋಷ ಮಾಡಿದರು. ನಂತರ ಗ್ರಾಮದ ತುಂಬ ದೇವಿಯ ಮೆರವಣಿಗೆಯು ನಡೆಯಿತು. ಮೆರವಣಿಗೆಯಲ್ಲಿ ಚಂಡೆಮದ್ದಳೆ, ಬೃಹತ್ ಆಕಾರದ ವೇಷಭೂಷಣಗಳು ಗೊಂಬೆಗಳ ನೃತ್ಯ, ಡೊಳ್ಳು ಕುಣಿತ ಸೇರಿದಂತೆ ಸಕಲ ವಾದ್ಯ ವೈಭವಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.ದೇವಿ ಮೂರ್ತಿಯ ಪ್ರತಿಷ್ಠಾಪನೆಯ ಅಂಗವಾಗಿ ಲಕ್ಷಾಂತರ ಮೌಲ್ಯದ ಮದ್ದುಗಳನ್ನು ಸುಡಲಾಯಿತು. ಪಟಾಕಿಯಲ್ಲಿ ನಾಗರಹಾವು ಸೇರಿದಂತೆ ಆಕಾಶದಲ್ಲಿ ಸಿಡಿಮದ್ದುಗಳ ಚಮತ್ಕಾರ ಕಂಡು ಭಕ್ತರು ಆಶ್ಚರ್ಯ ಚಕಿತರಾಗಿದ್ದರು. ಸುಡುಮದ್ದು ಸಿಡಿಸುವ ಮೂಲಕ ದೇವಿಯ ಮೆರವಣಿಗೆಗೆ ಹೆಚ್ಚಿನ ಕಳೆ ಕಟ್ಟಿದ್ದು ಕಂಡು ಬಂದಿತು. ದೇವಿಯ ಮೂರ್ತಿಯ ಪ್ರತಿಷ್ಠಾಪನೆಯ ಅಂಗವಾಗಿ ಭಕ್ತರು ಗ್ರಾಮದ ತುಂಬೆಲ್ಲ ತಳಿರು ತೋರಣ ಕಟ್ಟಿ, ವಿದ್ಯುತ್ ದೀಪಗಳ ಅಲಂಕಾರ ಮಾಡಿ, ಮನೆಯ ಮುಂದೆ ರಂಗೋಲಿ ಹಾಕಿ, ರಸ್ತೆಗೆ ನೀರು ಹಾಕಿ ಅತ್ಯಂತ ಭಕ್ತಿ ಭಾವದಿಂದ ದೇವಿಯ ಮೆರವಣಿಗೆಯಲ್ಲಿ ಪಾಲ್ಗೊಂಡರು. ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಸಂಭ್ರಮದ ಕೋಡಿಕೊಪ್ಪದ ಹುಚ್ಚೀರಪ್ಪಜ್ಜನ ರಥೋತ್ಸವನರೇಗಲ್ಲ: ಕೋಡಿಕೊಪ್ಪದ ಹುಚ್ಚೀರಪ್ಪಜ್ಜನ ರಥೋತ್ಸವವು ಬುಧವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ, ವೈಭವದಿಂದ ಜರುಗಿತು.ಬೆಳಗ್ಗೆ ಜಾತ್ರೆಯ ಅಂಗವಾಗಿ ಕತೃ ಗದ್ದುಗೆಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಪಟ್ಟಣದ ಸಂಕನಗೌಡ್ರ ಮನೆಯಿಂದ ತೇರಿನ ಕಳಸ ಹಾಗೂ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಿದ್ನೇಕೊಪ್ಪ ಗ್ರಾಮದಿಂದ ಭಕ್ತಿ ಪೂರ್ವಕವಾಗಿ ಮೆರವಣಿಗೆ ಮೂಲಕ ಭಕ್ತರು ರಥಕ್ಕೆ ಹಗ್ಗ ತಂದು ಶೃಂಗರಿಸಿದರು.
ಸಂಜೆ ಮಹಾರಥವನ್ನು ಭಕ್ತಮಹಾಸಾಗರ ಮಠದಿಂದ ಪಾದಗಟ್ಟಿಯವರೆಗೆ ವಿಜೃಂಭಣೆಯಿಂದ ಎಳೆದರು. ಮೆರವಣಿಗೆ ಉದ್ದಕ್ಕೂ ಹಠಯೋಗಿ ವೀರಪ್ಪಜ್ಜನವರಿಗೆ ಜೈ, ತ್ರಿಲೋಕಜ್ಞಾನಿ ಹುಚ್ಚೀರಪ್ಪಜ್ಜಗೆ ಜೈ ಎಂದು ಜಯ ಘೋಷ ಹಾಕಿದರು.ರಥೋತ್ಸವದಲ್ಲಿ ಭಜನೆ, ಜಾಂಜ್ ಮೇಳ, ಡೊಳ್ಳು ಕುಣಿತ, ಕರಡಿ ಮಜಲು, ನಂದಿಕೋಲು ನೋಡುಗರ ಗಮನ ಸೆಳೆದವು. ಭಕ್ತರು ಭಕ್ತಿ ಭಾವದಿಂದ ಉತ್ತತ್ತಿ, ಬಾಳೆಹಣ್ಣುಗಳನ್ನು ಎಸೆದು ನಮಿಸಿದರು. ರಥವು ಯಶಸ್ವಿಯಾಗಿ ಮರಳಿ ಸ್ವಸ್ಥಳಕ್ಕೆ ಬಂದು ನಿಂತಾಗ ಚಪ್ಪಾಳೆ ತಟ್ಟಿ ಭಕ್ತರು ಭಕ್ತಿ ಭಾವ ಮೆರೆದರು.ಜಾತ್ರೆಗೆ ಗಜೇಂದ್ರಗಡ, ಗದಗ, ರೋಣ, ಗುಜಮಾಗಡಿ, ಜಕ್ಕಲಿ, ಮಾರನಬಸರಿ, ಹಾಲಕೆರೆ, ತೋಟಗಂಟಿ, ಡ.ಸ. ಹಡಗಲಿ, ಯರೆಬೇಲೇರಿ, ನಿಡಗುಂದಿಕೊಪ್ಪದ, ರೋಣ, ಕೊತಬಾಳ, ಅಣ್ಣಿಗೇರಿ, ಯಲಬುರ್ಗಾದ ವಿವಿಧ ಭಾಗಗಳಿಂದ ಟ್ರ್ಯಾಕ್ಟರ್, ಎತ್ತಿನ ಬಂಡಿ ಮತ್ತು ಪಾದಯಾತ್ರೆ ಮೂಲಕ ಭಕ್ತರು ಬಂದು ವೀರಪ್ಪಜ್ಜನ ದರ್ಶನಾಶೀರ್ವಾದ ಪಡೆದರು.