ಭಾರತೀಯ ಸಂಸ್ಕೃತಿ, ಧರ್ಮ ಮತ್ತು ಸಂಸ್ಕಾರಗಳನ್ನು ಜೀವಂತವಾಗಿಡುವ ಉದ್ದೇಶದಿಂದ ವಿಜಯಪುರ ಜಿಲ್ಲಾ ಮಠಾಧೀಶರ ಒಕ್ಕೂಟ ಹಾಗೂ ಭಾರತೀಯ ಸಂತ ಮಹಾ ಪರಿಷತ್ (ಬಿ.ಎಸ್.ಎಂ.ಪಿ) ಸಹಯೋಗದಲ್ಲಿ 2027ರ ಜನವರಿ 31ರಂದು ವಿಜಯಪುರ ಜಿಲ್ಲೆಯಲ್ಲಿ ಬೃಹತ್ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಬೆಂಗಳೂರಿನ ಸರ್ಪಭೂಷಣ ಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ನುಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಭಾರತೀಯ ಸಂಸ್ಕೃತಿ, ಧರ್ಮ ಮತ್ತು ಸಂಸ್ಕಾರಗಳನ್ನು ಜೀವಂತವಾಗಿಡುವ ಉದ್ದೇಶದಿಂದ ವಿಜಯಪುರ ಜಿಲ್ಲಾ ಮಠಾಧೀಶರ ಒಕ್ಕೂಟ ಹಾಗೂ ಭಾರತೀಯ ಸಂತ ಮಹಾ ಪರಿಷತ್ (ಬಿ.ಎಸ್.ಎಂ.ಪಿ) ಸಹಯೋಗದಲ್ಲಿ 2027ರ ಜನವರಿ 31ರಂದು ವಿಜಯಪುರ ಜಿಲ್ಲೆಯಲ್ಲಿ ಬೃಹತ್ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಬೆಂಗಳೂರಿನ ಸರ್ಪಭೂಷಣ ಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ನುಡಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಸಂತ ಮಹಾ ಪರಿಷತ್ ಎರಡು ಮಹತ್ವದ ಕ್ರಿಯಾ ಯೋಜನೆಗಳಾದ ಏಕರೂಪ ಆಚಾರ ಸಂಹಿತೆ ಹಾಗೂ ಏಕರೂಪ ಸಾಮಾನ್ಯ ಸಂಸ್ಕಾರ ಶಿಕ್ಷಣವನ್ನು ಜಾರಿಗೆ ತರಲು ಉದ್ದೇಶಿಸಿದೆ. ನಿತ್ಯ ದೇವರ ಪ್ರಾರ್ಥನೆ, ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದು, ಧರ್ಮದ ಅಧ್ಯಯನ ಮಾಡಿಸುವುದು, ಸಮಾಜದಲ್ಲಿ ಸಾಮರಸ್ಯದಿಂದ ಬದುಕುವ ಮನೋಭಾವ ಬೆಳೆಸುವುದು ಹಾಗೂ ಪ್ರಕೃತಿ ಸಂರಕ್ಷಣೆಯ ಮಹತ್ವವನ್ನು ಮಕ್ಕಳಿಗೆ ತಿಳಿಸುವುದು ಈ ಯೋಜನೆಗಳ ಮುಖ್ಯ ಉದ್ದೇಶವಾಗಿದೆ. ಧರ್ಮೋ ರಕ್ಷತಿ ರಕ್ಷಿತಃ ಎಂಬ ಆಶಯದಂತೆ ಯುವಕರು ಧರ್ಮದ ರಕ್ಷಣೆಗೆ ಮುಂದಾಗಬೇಕು. ಭಾರತೀಯ ಸಂಸ್ಕೃತಿಯನ್ನು ಜೀವಂತವಾಗಿಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಶೃಂಗೇರಿ ಪೀಠ, ಹರಿಹರ ಪೀಠ, ರಾಜರಾಜೇಶ್ವರಿ ಪೀಠ ಸೇರಿದಂತೆ ನಾಡಿನ ಹಲವು ಮಠಗಳ ಮಠಾಧೀಶರು ಭಾಗವಹಿಸಲಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲೆಯ ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಬಂಥನಾಳದ ಪೂಜ್ಯ ಸಂಗನಬಸವ ಮಹಾಸ್ವಾಮಿಗಳ ಜೀವನ ಸಾಧನೆ ಕುರಿತು ಕಿರು ಸಾಕ್ಷ್ಯಚಿತ್ರ ಬಿಡುಗಡೆ ಮಾಡಲಾಗುವುದು. ಅಲ್ಲದೆ, 1857ರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗುರು ಗಂಗಾಧರೇಶ್ವರ ಶಿವಯೋಗಿಗಳು ಹಾಗೂ ಷ.ಬ್ರ.ಪಂಡಿತಾರಾಧ್ಯರು ನೀಡಿದ ಕೊಡುಗೆಗಳನ್ನು ಸ್ಮರಿಸುವ ಕಾರ್ಯಕ್ರಮವೂ ನಡೆಯಲಿದೆ. ಈ ಕುರಿತು ಕಲಬುರಗಿಯ ಚಾಲುಕ್ಯ ಅಧ್ಯಯನ ಪೀಠದಿಂದ ವಿಶೇಷ ಪ್ರಸ್ತುತಿ ಇರಲಿದೆ. ಬಂಥನಾಳದ ಸಂಗನಬಸವ ಮಹಾಸ್ವಾಮಿಗಳು ನಾಡಿಗೆ ನೀಡಿದ ಕೊಡುಗೆ ಅಪಾರವಾಗಿದೆ. ಅವರ ಹೆಸರನ್ನು ಜನಮಾನಸದಲ್ಲಿ ಶಾಶ್ವತವಾಗಿ ಉಳಿಸುವ ಉದ್ದೇಶದಿಂದ ಸ್ಮಾರಕ ನಿರ್ಮಾಣ ಹಾಗೂ ಪ್ರಮುಖ ಸ್ಥಳಗಳಿಗೆ ಅವರ ಹೆಸರನ್ನು ನಾಮಕರಣ ಮಾಡುವ ಕುರಿತು ಚಿಂತನೆ ನಡೆಸಲಾಗುತ್ತಿದೆ. ಕೊಟ್ಟನಾಳದ ಬಸವಲಿಂಗಪ್ಪ ವೀರಸಂಗಪ್ಪ ದೇಶಮುಖ ಅವರ ಸ್ಮರಣಾರ್ಥ ಭವನ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಗಮನ ಸೆಳೆಯಲು ನಿರ್ಧರಿಸಲಾಗಿದೆ ಎಂದರು.ಉತ್ತರ ಭಾರತದ ಅನೇಕ ಗಣ್ಯರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆಗಳು ದೇಶಾದ್ಯಂತ ಪರಿಚಿತವಾಗಿವೆ. ಆದರೆ ದಕ್ಷಿಣ ಭಾರತದ ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ರಾಣಿ ಅಬ್ಬಕ್ಕ, ಸುರಪುರದ ರಾಜಾ ವೆಂಕಟಪ್ಪ ನಾಯಕ, ಕೊಟ್ಟನಾಳ ಹಾಗೂ ಜಂಬಗಿಯ ಬಸವಲಿಂಗಪ್ಪ ದೇಶಮುಖರಂತಹ ಮಹನೀಯರ ಕೊಡುಗೆಗಳನ್ನು ಜನಮಾನಸಕ್ಕೆ ತಲುಪಿಸುವಲ್ಲಿ ನಿರೀಕ್ಷಿತ ಮಟ್ಟದ ಪ್ರಯತ್ನಗಳಾಗಿಲ್ಲ. ಈ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಭಾರತೀಯ ಸಂತ ಮಹಾ ಪರಿಷತ್ ಮೂಲಕ ಇಂತಹ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.ಈ ಕಾರ್ಯಕ್ರಮದಲ್ಲಿ ಯಾವುದೇ ರಾಜಕೀಯ ಅಥವಾ ಪಕ್ಷಪಾತದ ವಿಚಾರಗಳಿಗೆ ಅವಕಾಶವಿಲ್ಲ. ದೇಶಕ್ಕೆ ಕೊಡುಗೆ ನೀಡಿದ ಮಹನೀಯರನ್ನು ಸ್ಮರಿಸುವುದು ಹಾಗೂ ಧರ್ಮದಿಂದ ವಿಮುಖರಾಗುತ್ತಿರುವ ಯುವ ಪೀಳಿಗೆಯಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸುವುದೇ ಮುಖ್ಯ ಆಶಯವಾಗಿದೆ. ಭಾರತ ಮಾತೆಯ ನೆಲ, ಜಲ ಮತ್ತು ಧರ್ಮದ ಸಂರಕ್ಷಣೆಯ ವಿಚಾರಗಳನ್ನೂ ವೇದಿಕೆಯಲ್ಲಿ ಚರ್ಚಿಸಲಾಗುವುದು ಎಂದರು.

ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಬಿ.ಎಸ್.ಎಂ.ಪಿ ಕಾರ್ಯಕರ್ತರು ಹಾಗೂ ಯರನಾಳ, ಕರಿಭಂಟನಾಳ, ಮಹಾಜಲಗಾಂವ, ಬಂಥನಾಳ, ಕೊಟ್ಟನಾಳ ಮತ್ತು ಜಂಬಗಿ(ಎ) ಗ್ರಾಮಗಳ ಅಭಿಮಾನಿ ಬಳಗದವರು ಸತತವಾಗಿ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.ಗೋಷ್ಠಿಯಲ್ಲಿ ವಿಜಯಪುರ ಜಿಲ್ಲಾ ಮಠಾಧೀಶರ ಒಕ್ಕೂಟದ ಹಿರೂರ ಜಯಸಿದ್ದೇಶ್ವರ ಮಹಾಸ್ವಾಮಿಗಳು, ಆಲಮೇಲ ಚಂದ್ರಶೇಖರ ಮಹಾಸ್ವಾಮೀಜಿ, ತಡವಲಗಾ ರಾಚೋಟೇಶ್ವರ ಮಹಾಸ್ವಾಮೀಜಿ, ಬಂಥನಾಳ ಸಂಗನಬಸವ ದೇವರು, ಕರಭಂಟನಾಳ ಶಿವಕುಮಾರ ಸ್ವಾಮೀಜಿ, ಕೊಟ್ನಾಳ ದೇಶಮುಖ ಮನೆತನದ ಬಸವರಾಜ ದೇಶಮುಖ ಹಾಗೂ ಬಸವಂತರಾಯ ದೇಶಮುಖ ಉಪಸ್ಥಿತರಿದ್ದರು.