ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಾಥಪುರ
ಇಲ್ಲಿಯ ಕಾವೇರಿ ನದಿ ದಂಡೆಯಲ್ಲಿರುವ ಹಾಗೂ "ದಕ್ಷಿಣ ಕಾಶಿ " ಎಂದೇ ಪ್ರಖ್ಯಾತಿ ಹೊಂದಿರುವ ರಾಮನಾಥಪುರದ ಪ್ರಸನ್ನ ಶ್ರೀ ಸುಬ್ರಮಣ್ಯಸ್ವಾಮಿ ತುಳುಸೃಷ್ಟಿ ಮಹಾರಥೋತ್ಸವದಲ್ಲಿ ಇಲ್ಲಿಯ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ಬಹಳ ಅದ್ಧೂರಿಯಾಗಿ ಮಹಾರಥೋತ್ಸವ ನೆರವೇರಿತು.ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ರಥೋತ್ಸವದ ಅಂಗವಾಗಿ ದೇಗುಲವು ವಿವಿಧ ರೀತಿಯ ಹೂಗಳು ಹಾಗೂ ಚಿತ್ತಾರಗಳಿಂದ ಅಲಂಕೃತಗೊಂಡಿತ್ತು. ಭಾನುವಾರ ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇಗುಲದ ಮುಂಭಾಗದಲ್ಲಿ ನಿಲ್ಲಿಸಿದ್ದ ರಥಕ್ಕೆ ವಿವಿಧ ಪುಷ್ಪಗಳಿಂದ ಹಾಗೂ ಬಗ್ಗೆ ಬಗೆಯ ವರ್ಣದ ಬಟ್ಟೆಗಳಿಂದ ಅಲಂಕರಿಸಿದ 40 ಅಡಿ ಎತ್ತರದ ರಥದಲ್ಲಿ ದೇವಾಲಯದಲ್ಲಿ ಮಹಾ ಮಂಗಳಾರತಿ ನಂತರ ಉತ್ಸವ ಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸಿ, ಪೂಜಾ ಕೈಂಕರ್ಯವನ್ನು ನೆರವೇರಿಸಿದರು.
ರಥದಲ್ಲಿ ಕುಳ್ಳರಿಸಿದ ನಂತರ ಛತ್ರಿಚಾಮರ, ಚಂಡೆವಾದ್ಯ, ಗಾರುಡಿ ಗೊಂಬೆಗಳು ಇನ್ನಿತರ ಜನಪದ ಕಲಾತಂಡಗಳೊಂದಿಗೆ ಸುತ್ತಮುತ್ತಲಿನ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಭಕ್ತರ ಸಮಯದಲ್ಲಿ ಹರ್ಷೋದ್ಘಾರದೊಂದಿಗೆ ಸಾಮೂಹಿಕವಾಗಿ ರಥವನ್ನು ಎಳೆಯುತ್ತಾ ದೇವಸ್ಥಾನದ ಮುಂಭಾಗದಿಂದ ರಥದ ಬೀದಿಯಲ್ಲಿ ತೆರಳಿ ಕಾವೇರಿ ನದಿ ಸೇತುವೆಯವರೆಗೂ ಹಾಗೂ ಅಲ್ಲಿಂದ ಮತ್ತೆ ಸ್ವಸ್ಥಾನಕ್ಕೆ ರಥವನ್ನು ಭಕ್ತರು ಎಳೆದು ತಂದು ನಿಲ್ಲಿಸಿದರು.ನೂರಾರು ನವಜೋಡಿ ಆಗಮನ:
ಶ್ರೀ ಸುಬ್ರಹ್ಮಣ್ಯಸ್ವಾಮಿ ರಥೋತ್ಸವದಲ್ಲಿ ಸಂಪ್ರದಾಯದಂತೆ ಸುತ್ತಮುತ್ತಲ ಗ್ರಾಮೀಣ ಭಾಗದ ನೂರಾರು ನವ- ವಧುವರರು ಶ್ರೀ ಸುಬ್ರಹ್ಮಣ್ಯಸ್ವಾಮಿ ರಥಕ್ಕೆ ಪೂಜೆ ಸಲ್ಲಿಸಿ ಬಾಳೆಹಣ್ಣು ಮತ್ತು ದವನವನ್ನು ರಥದ ಮೇಲೆ ಸಮರ್ಪಿಸಿದರು.ಪೊಲೀಸ್ ಭದ್ರತೆ:ಅರಕಲಗೂಡು ವೃತ್ತ ನಿರೀಕ್ಷಕರು ಕೆ.ಎಂ. ವಸಂತ್, ಕೊಣನೂರು ಠಾಣೆ ಪಿ.ಎಸ್.ಐ ಗಿರೀಶ್ ಹಾಗೂ ತಂಡ ಅಗತ್ಯ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.
ಈ ಸಂದರ್ಭದಲ್ಲಿ ಶ್ರೀ ಸಂಪುಟ ನರಸಿಂಹಸ್ವಾಮಿ ಸುಬ್ರಮಣ್ಯ ಮಠದ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀಪಾದಂಗಳ ಆಶೀರ್ವಾದದೊಂದಿಗೆ ಬ್ರಹ್ಮಶ್ರೀ ತಂತ್ರಸಾರ ಆಗಮ ಕುಶಲ ಭಾರತೀರಮಣ ಆಚಾರ್ಯ ದಿವಾನರಾದ ಸುದರ್ಶನ ಜೋಯಿಸ್ ಪಾರು ಪತ್ತೇಗಾರ್ ರಮೇಶ್ ಭಟ್ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನಡೆದವು.ರಥೋತ್ಸವದಲ್ಲಿ ಶಾಸಕ ಎ. ಮಂಜು, ಹಾಸನ ಹಿರಿಯ ಸಿವಿಲ್ ನ್ಯಾಯಧೀಶರಾದ ಬಿ. ಗಿರೀಗೌಡರು, ಗ್ರಾ.ಪಂ. ಕಾರ್ಯದರ್ಶಿ ರೇವಣ್ಣ, ಮುಂತಾದವರು ಭಾಗವಹಿಸಿದ್ದರು.
* ಬಾಕ್ಸ್ರಾಮನಾಥಪುರದ ಕಾವೇರಿ ನದಿ ದಂಡೆಯಲ್ಲಿರುವ ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ರಥ ಎಳೆಯುವ ಸಂದರ್ಭದಲ್ಲಿ ಅಕಾಶದಿಂದ ಹಾಜರಾಗುವ ನಾಲ್ಕಾರು ಗರುಡ ಪಕ್ಷಿಗಳು ರಥದ ಮೇಲೆ ( ಅವಕಾಶದಲ್ಲಿ) ಹಾಗೂ ದೇವಾಲಯದ ಮೇಲೆ ಪ್ರದಕ್ಷಣೆ ಹಾಕುವುದು ಪ್ರತೀತಿ.ಈ ವರ್ಷವೂ ಸಹ ಗರುಡಗಳ ಆಗಮನದಿಂದ ಭಕ್ತರು ನೋಡಿ ಧನ್ಯತಾ ಭಾವ ಸಮರ್ಪಿಸಿದರು.