ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶ್ರಾವಣ ಮಾಸದ ಮೊದಲ ಹಬ್ಬವಾದ ವರಮಹಾಲಕ್ಷ್ಮಿ ಹಬ್ಬವನ್ನು ನಗರದಲ್ಲೆಡೆ ಶುಕ್ರವಾರ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.ಮಹಿಳೆಯರು ಹಬ್ಬದ ಅಂಗವಾಗಿ ಮುಂಜಾನೆಯೇ ಮನೆಯ ಮುಂದೆ ಸಾರಿಸಿ ರಂಗೋಲಿ ಹಾಕಿ, ತಳಿರು ತೋರಣ ಕಟ್ಟಿ ಲಕ್ಷ್ಮಿದೇವಿ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿದರು.
ದೇವಸ್ಥಾನಗಳಲ್ಲಿ ವಿಶೇಷಪೂಜೆ ಕೈಂಕರ್ಯಗಳು ನಡೆದವು. ಬೆಳಗ್ಗೆಯಿಂದಲೇ ಭಕ್ತರು ದೇವಸ್ಥಾನಕ್ಕೆ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ಹಬ್ಬದ ವಸ್ತುಗಳ ಖರೀದಿ ಭರಾಟೆಯೂ ಜೋರಾಗಿತ್ತು. ಜನರಿಗೆ ಬೆಲೆ ಏರಿಕೆಯ ಶಾಕ್ ತಟ್ಟಿದ್ದು, ಹೂವು, ಹಣ್ಣುಗಳ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬಂತು. ಪೈನಾಪಲ್ ಎರಡಕ್ಕೆ 100 ರು., ಮೂಸಂಬಿ ಕೆ.ಜಿ.ಗೆ 100 ರು., ಬಾಳೆಹಣ್ಣು ಕೆ.ಜಿ.ಗೆ 120 ರು., ಸೇಬು 250 ರು., ದ್ರಾಕ್ಷಿ 200 ರು., ಸಪೋಟ 120 ರು., ದಾಳಿಂಬೆ 200 ರು. ಇತ್ತು. ಇನ್ನೂ ಹೂವುಗಳ ಬೆಲೆಯೂ ಹೆಚ್ಚಾಗಿದ್ದು, ಸೇವಂತಿಗೆ ಹೂವು ಒಂದು ಮಾರಿಗೆ 120 ರು, ತಾವರೆಹೂವು ಜೊತೆಗೆ 100 ರು., ಮಲ್ಲಿಗೆ 200 ರು., ಕಾಕಡ 150 ರು., ಚಂಡು ಹೂವು 50ರಿಂದ 80 ರು., ಬಾಳೆಕಂದು ಜೊತೆಗೆ 50 ರು, ಮಾವಿನ ಎಲೆ ಒಂದು ಕಟ್ಟಿಗೆ 20 ರು., ಕಬ್ಬು ಒಂದು ಜೊತೆಗೆ 40 ರು, ವರೆಗೆ ಮಾರಾಟವಾಯಿತು.
ನಗರದ ಗಾಂಧಿ ಬಜಾರ್, ನೆಹರು ರಸ್ತೆ, ಗೋಪಿ ವೃತ್ತ, ಲಕ್ಷ್ಮಿ ಚಿತ್ರಮಂದಿರ ವೃತ್ತ, ಪೊಲೀಸ್ ಚೌಕಿ ಸೇರಿದಂತೆ ಎಲ್ಲೆಡೆ ವ್ಯಾಪಾರ ವಹಿವಾಟು ಜೋರಾಗಿ ನಡೆಯಿತು. ಹಬ್ಬದ ಹಿನ್ನೆಲೆಯಲ್ಲಿ ಎಲ್ಲೆಡೆ ಖರೀದಿ ಪ್ರಕ್ರಿಯೆ ಜೋರಾಗಿ ಸಾಗಿದ್ದರೆ, ಜನಜಂಗುಳಿ ಹೆಚ್ಚಾದ ಪರಿಣಾಮ ಮಾರುಕಟ್ಟೆಗಳಲ್ಲಿ ಸಂಚಾರ ದಟ್ಟಣೆ ಕಂಡುಬಂದಿತು.ಸೊರಬ: ಮಲೆನಾಡಿನ ಪುರಾಣ ಹಾಗೂ ಐತಿಹಾಸಿಕ ಪ್ರಸಿದ್ಧ ಶ್ರೀ ರೇಣುಕಾಂಬ ದೇವಾಲಯದಲ್ಲಿ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಶುಕ್ರವಾರ ಶ್ರೀದೇವಿಗೆ ವಿಶೇಷ ಪೂಜೆ ಕೈಂಕರ್ಯಗಳು ಜರುಗಿದವು.ಶ್ರಾವಣ ಮಾಸದ ವರಮಹಾಲಕ್ಷ್ಮಿ ಹಬ್ಬದ ನಿಮಿತ್ತ ಶ್ರೀ ರೇಣುಕಾಂಬ ದೇವಿ ದರ್ಶನಕ್ಕೆ ತಾಲೂಕು ಸೇರಿದಂತೆ ಹಿರೇಕೆರೂರು, ಬ್ಯಾಡಗಿ, ರಾಣೇಬೆನ್ನೂರು, ಶಿಕಾರಿಪುರ, ಹರಿಹರ, ಹಾನಗಲ್, ವಿಜಯಪುರ, ಶಿವಮೊಗ್ಗ, ರಾಯಚೂರು, ಚಿಕ್ಕಮಂಗಳೂರು, ದಾವಣಗೆರೆ, ಚಿತ್ರದುರ್ಗ ಹಾಗೂ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಭಕ್ತಿ ಸಮರ್ಪಿಸಿದರು.
ದೇವಸ್ಥಾನದ ಪರಿವಾರ ದೇವರುಗಳಾದ ಕಾಲಭೈರವ, ನಾಗದೇವತೆ, ಮಾತಂಗಿ, ಪರಶುರಾಮ, ತ್ರಿಶೂಲದ ಭೈರಪ್ಪ, ದೇವರುಗಳಿಗೆ ವಿಶೇಷ ಪೂಜೆ ಪುನಸ್ಕಾರಗಳು ನೆರವೇರಿದವು. ಭಕ್ತರು ದೇವಸ್ಥಾನದ ಆವರಣದಲ್ಲಿ ತುಲಾಭಾರ ಸೇವೆ, ಕಿವಿ ಚುಚ್ಚುವುದು, ಮುಡಿ ನೀಡುವುದು, ಸೇರಿದಂತೆ ವಿವಿಧ ರೀತಿಯ ಹರಕೆ ಮತ್ತು ಧಾರ್ಮಿಕ ಕಾರ್ಯಗಳನ್ನು ನಡೆಸಿದರು.ಇನ್ನು, ಧಾರ್ಮಿಕ ದತ್ತಿ ಇಲಾಖೆ ಆದೇಶದಂತೆ ದೇಗುಲಕ್ಕೆ ಆಗಮಿಸಿದ ಮಹಿಳೆಯರಿಗೆ ವರಮಹಾಲಕ್ಷ್ಮಿ ವ್ರತ ಆಚರಣೆ ಅಂಗವಾಗಿ ಪ್ರಸಾದ ರೂಪದಲ್ಲಿ ಅರಿಷಿಣ, ಕುಂಕುಮ, ಹಸಿರು ಬಳೆ ನೀಡಿ ಉಡಿ ತುಂಬಲಾಯಿತು. ಜತೆಗೆ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಇಂತಹ ಧಾರ್ಮಿಕ ಕಾರ್ಯಕ್ಕೆ ಮಹಿಳೆಯರು ಹಾಗೂ ಭಕ್ತಾದಿಗಳು ಹಾಗೂ ಊರ ಗ್ರಾಮಸ್ಥರು ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡಿದ್ದಾರೆ ಎಂದು ಶ್ರೀರೇಣುಕಾಂಬ ದೇವಳ ಕಾರ್ಯ ನಿರ್ವಹಣಾಧಿಕಾರಿ ಪ್ರಮೀಳಾಕುಮಾರಿ ಹೇಳಿದರು.