ಸಾರಾಂಶ
ಕನ್ನಡಪ್ರಭ ವಾರ್ತೆ, ದಾವಣಗೆರೆ, ಏ. 5,ಕರ್ನಾಟಕದ ಸಮಾನ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಸಂವಿಧಾನದ ಉಳಿವಿಗಾಗಿ ಮತ್ತು ದೇಶ ಉಳಿಸಿ ಎಂಬ ಸಂದೇಶದೊಂದಿಗೆ ಕರ್ನಾಟಕದ ಮಹನೀಯರ ಸಂದೇಶವನ್ನು ಸಾರಲು ಸಂಕಲ್ಪ ಯಾತ್ರೆಯು ಏ. 1 ರಂದು ಬೆಂಗಳೂರಿನಿಂದ ಹೊರಟಿದ್ದು ಏ. 8 ರಂದು ಬೆಳಗಾವಿಯಲ್ಲಿ ಸಮಾವೇಶಗೊಳ್ಳಲಿದ್ದು, ಸಂಕಲ್ಪ ಯಾತ್ರೆಯು ಶುಕ್ರವಾರ ನಗದ ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಆಗಮಿಸಿತು. ಸಂಕಲ್ಪ ಯಾತ್ರೆಯನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು. ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ. ಎ.ಬಿ.ರಾಮಚಂದ್ರಪ್ಪ ಮಾತನಾಡಿ, ಸಂವಿಧಾನ ಉಳಿಸು ಹೋರಾಟ ಇಂದಿನ ತುರ್ತು ಅಗತ್ಯವಿದೆ. ಶ್ರೀ ರಾಮಚಂದ್ರ ನಿಜವಾದ ರಾಮನಾಗಿದ್ದು, ಸೀತೆಯನ್ನು ಮದುವೆಯಾದಾಗ, ಕಾಡಿಗೆ ಹೋದಾಗ ಮತ್ತು ಹನುಮಂತನ ಜೊತೆ ಸಖ್ಯ ಬೆಳೆಸಿದಾಗ. ಹಾಗಾಗಿ, ದೇಶಕ್ಕೆ ಬಹುತ್ವದ ರಾಮಬೇಕೇ ಹೊರತು, ಬಾಲರಾಮನ ಅವಶ್ಯಕತೆ ಈ ದೇಶಕ್ಕೆ ಇಲ್ಲ ಎನ್ನುವುದನ್ನು ಪ್ರಧಾನಿ ಅರ್ಥ ಮಾಡಿಕೊಳ್ಳಬೇಕು. ಸಂವಿಧಾನ ಉಳಿಸಬೇಕೆಂದು ನಡೆಯುತ್ತಿರುವ ಈ ಯಾತ್ರೆ ನಿರಂತರವಾಗಿ ನಡೆಯುತ್ತಿರಲಿ ಎಂದು ಆಶಿಸಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಮಾತನಾಡಿ, ನಾನು ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ ಎಂದು ಅಧಿಕಾರಕ್ಕೆ ಬಂದು 10 ವರ್ಷಗಳಿಂದ ದೇಶದ ಸಂಪತ್ತನ್ನು ಲೂಟಿ ಹೊಡೆದು, ತಿಂದು ತೇಗಿದ ಬಿಜೆಪಿ ಮತ್ತು ಪ್ರಧಾನಿ ಮೋದಿ, ಎಲೆಕ್ಟ್ರೋಲ್ ಬಾಂಡ್ ಮೂಲಕ ಉದ್ಯಮಿಗಳನ್ನು ಹೆದರಿಸಿ, ಅಕ್ರಮವಾಗಿ ಪಕ್ಷಕ್ಕೆ ದೇಣಿಗೆ ಪಡೆದ ಪ್ರಧಾನಿ ಮೋದಿಯವರ ಭ್ರಷ್ಟಾಚಾರವನ್ನು ಸಂಪೂರ್ಣ ಹತ್ತಿಕ್ಕುತ್ತೇವೆ ಎಂದು ನಾಚಿಕೆ ಇಲ್ಲದೆ ಹೇಳುತ್ತಿದ್ದಾರೆ. ಇಂತಹ ದೇಶವಿರೋಧಿ ಭ್ರಷ್ಟಾಚಾರಿಗಳನ್ನು ಈ ಲೋಕಸಭಾ ಚುನಾವಣೆಯಲ್ಲಿ ಅಧಿಕಾರದಿಂದ ತೊಲಗಿಸಲು ಸಂಕಲ್ಪಯಾತ್ರೆ ಮೂಲಕ ಜನರನ್ನು ಜಾಗೃತಿಗೊಳಿಸುತ್ತಿದ್ದೇವೆ ಎಂದು ತಿಳಿಸಿದರು.ಅಪ್ಪಾ ಸಾಹೇಬ್ ಯರನಾಳ್ ಮಾತನಾಡಿ, ಈ ಯಾತ್ರೆ ಈಗಾಗಲೇ ತುಮಕೂರು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಮೂಲಕ ಹಾದು ದಾವಣಗೆರೆಗೆ ಆಗಮಿಸಿದೆ ಎಂದರು.
ತುಮಕೂರಿನ ರೈತ ಕಾರ್ಯಕರ್ತ ಎನ್.ಜಿ.ರಾಮಚಂದ್ರ ಮಾತನಾಡಿ, ಈ ಬಾರಿ ಎನ್‌ಡಿಎ 400 ಸೀಟು ಪಡೆಯುವುದಾಗಿ ಹೇಳಿದರೂ, 140-180 ದಾಟುವುದು ಅಸಾಧ್ಯವಾದ ಮಾತು ಎಂದು ಈಗಾಗಲೇ ಸಮೀಕ್ಷೆಗಳು ಹೇಳಿವೆ. ದೆಹಲಿ ಪ್ರವೇಶಕ್ಕೆ ತಡೆಯೊಡ್ಡಿದಂತೆ ನಾವೂ ಬಿಜೆಪಿ ಮತ ಹೋಗುವುದನ್ನು ತಡೆಯುತ್ತೇವೆ. ದೇಶಾದ್ಯಂತ "ಮತ ಬಂದ್ " ಹೋರಾಟ ಮಾಡಲಿದ್ದೇವೆ ಎಂದರು.ಹಿರಿಯ ವಕೀಲ ಅನೀಸ್ ಪಾಷ, ನೆರಳು ಬೀಡಿ ಕಾರ್ಮಿಕರ ಸಂಘದ ಜಬೀನಾ ಖಾನಂ, ಕರಿಬಸಪ್ಪ, ಇಂತಿಯಾಜ್ ಹುಸೇನ್, ಅಪ್ಪಾರಾವ್ ಸಾಹೇಬ್, ಎನ್.ಜಿ.ರಾಮಚಂದ್ರ, ವಿಶ್ವ ಮಾನವ ಮಂಟಪದ ಆವರಗೆರೆ ರುದ್ರಮುನಿ, ಎಚ್.ಜಿ.ಉಮೇಶ, ಚಿನ್ನಪ್ಪ, ಸತೀಶ ಅರವಿಂದ, ಸರೋಜ, ಗದಿಗೇಶ ಪಾಳ್ಯದ, ಕೆ.ಜಿ.ಶಿವಮೂರ್ತಿ, ಪಾಲವನಹಳ್ಳಿ ಪ್ರಸನ್ನಕುಮಾರ, ಎಂ.ಕರಿಬಸಪ್ಪ, ಸಮಾನ ಮನಸ್ಕರರು, ಚಿಂತಕರು, ಹೋರಾಟಗಾರರು, ಇತರರು ಭಾಗವಹಿಸಿದ್ದರು. ಕಾರ್ಯಕ್ರಮದ ಮೊದಲು ಇಪ್ಟಾ ಜಿಲ್ಲಾಧ್ಯಕ್ಷ ಐರಣಿ ಚಂದ್ರು ಜಾಗೃತಿ ಗೀತೆ ಹಾಡಿದರು.
- - - -5ಕೆಡಿವಿಜಿ36ಃ:ಸಂವಿಧಾನದ ಉಳಿವಿಗಾಗಿ ಮತ್ತು ದೇಶ ಉಳಿಸಿ ಎಂಬ ಸಂದೇಶದೊಂದಿಗೆ ಹೊರಟ ಸಂಕಲ್ಪ ಯಾತ್ರೆಯನ್ನು ದಾವಣಗೆರೆಯಲ್ಲಿ ಸಮಾನ ಮನಸ್ಕರು, ಚಿಂತಕರು ಸ್ವಾಗತಿಸಿದರು.