ವೀರಣ್ಣನವರ ಆತ್ಮಕಥನ ನಾಟಕದ ಗೊಂಬೆ ಕೃತಿ ಲೋಕಾರ್ಪಣೆ

| Published : Apr 06 2024, 12:57 AM IST

ವೀರಣ್ಣನವರ ಆತ್ಮಕಥನ ನಾಟಕದ ಗೊಂಬೆ ಕೃತಿ ಲೋಕಾರ್ಪಣೆ
Share this Article
  • FB
  • TW
  • Linkdin
  • Email

ಸಾರಾಂಶ

ನಾಡಿನ ಅನೇಕ ಹಿರಿಯ ಸಾಹಿತಿ, ಕವಿ, ಕಲಾವಿದರ ಒಡನಾಡಿಯಾಗಿದ್ದರು. ಕರ್ನಾಟಕ ಸರ್ಕಾರದ ಯಕ್ಷಗಾನ ಹಾಗೂ ಬಯಲಾಟ ಅಕಾಡೆಮಿಯ ಅಧ್ಯಕ್ಷರಾಗಿ ಕಲಾವಿದರನ್ನು ಪ್ರೋತ್ಸಾಹಿಸಿದ್ದರು.

ಬಳ್ಳಾರಿ: ತೊಗಲುಗೊಂಬೆ ಹಾಗೂ ರಂಗಭೂಮಿ ಕ್ಷೇತ್ರದಲ್ಲಿ ಅಪಾರ ಸೇವೆಗೈದು ನಮ್ಮನ್ನಗಲಿರುವ ನಾಡೋಜ ಬೆಳಗಲ್ಲು ವೀರಣ್ಣನವರ ಮೊದಲ ವರ್ಷದ ಸ್ಮರಣಾಂಜಲಿ ಕಾರ್ಯಕ್ರಮ, ಬೆಳಗಲ್ಲು ವೀರಣ್ಣನವರ ಆತ್ಮಕಥನ ಕೃತಿ ಲೋಕಾರ್ಪಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏ.7ರಂದು ನಗರದ ರಾಘವ ಕಲಾಮಂದಿರದಲ್ಲಿ ಸಂಜೆ 5.45ಕ್ಕೆ ಆಯೋಜಿಸಲಾಗಿದೆ ಎಂದು ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ ಹಾಗೂ ಹೆಜ್ಜೆಗೆಜ್ಜೆ ಬಯಲಾಟ ಕಲಾ ಟ್ರಸ್ಟ್ ನ ಅಧ್ಯಕ್ಷ ಹಡಪದ ತಿಪ್ಪೇಸ್ವಾಮಿ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ರಂಗಭೂಮಿ ಹಾಗೂ ತೊಗಲುಗೊಂಬೆ ಹೀಗೆ ಉಭಯ ರಂಗಗಳಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ಬಳ್ಳಾರಿಯವರೇ ಆದ ಬೆಳಗಲ್ಲು ವೀರಣ್ಣನವರು, ಅದ್ಭುತ ಕಂಠಸಿರಿ, ಅಪ್ರತಿಮ ನಟನೆಯಿಂದ ಖ್ಯಾತಿಗೊಂಡವರು. ವಯೋ ಸಂಜೆಯವರೆಗೂ ರಂಗಭೂಮಿಯಲ್ಲಿ ಹಾಸ್ಯ, ಖಳ, ವಿಶಿಷ್ಟ ಪಾತ್ರಗಳಲ್ಲಿ ಮೆರೆದ ಬೆಳಗಲ್ಲು ವೀರಣ್ಣನವರು ಎಂದೂ ದೊಡ್ಡಸ್ತಿಕೆಯಿಂದ ಬೀಗಿದವರಲ್ಲ ಎಂದರು.

ನಾಡಿನ ಅನೇಕ ಹಿರಿಯ ಸಾಹಿತಿ, ಕವಿ, ಕಲಾವಿದರ ಒಡನಾಡಿಯಾಗಿದ್ದರು. ಕರ್ನಾಟಕ ಸರ್ಕಾರದ ಯಕ್ಷಗಾನ ಹಾಗೂ ಬಯಲಾಟ ಅಕಾಡೆಮಿಯ ಅಧ್ಯಕ್ಷರಾಗಿ ಕಲಾವಿದರನ್ನು ಪ್ರೋತ್ಸಾಹಿಸಿದ್ದರು. ಕನ್ನಡ ವಿಶ್ವವಿದ್ಯಾಲಯದ ನಾಡೋಜ, ದೆಹಲಿಯ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರೂ ಆದ ಬೆಳಗಲ್ಲು ವೀರಣ್ಣ ನವರು ಕಳೆದ ವರ್ಷ ರಸ್ತೆ ಅಪಘಾತದಲ್ಲಿ ದಿಢೀರನೆ ಕಣ್ಮರೆಯಾಗಿದ್ದು ನಾಡಿನ ದುರ್ದೈವ ಎಂದು ತಿಳಿಸಿದರು.

ನಾಡೋಜ ಬೆಳಗಲ್ಲು ವೀರಣ್ಣನವರ ಸ್ಮರಣಾಂಜಲಿ ಕಾರ್ಯಕ್ರಮಕ್ಕೆ ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಚಾಲನೆ ನೀಡುವರು. ಡಾ.ರಾಜಪ್ಪ ದಳವಾಯಿ ರಚಿಸಿದ ವೀರಣ್ಣನವರ ಆತ್ಮಕಥನ "ನಾಟಕದ ಗೊಂಬೆ " ಕೃತಿಯನ್ನು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ.ಕೆ.ಆರ್.ದುರ್ಗಾದಾಸ್ ಲೋಕಾರ್ಪಣೆಗೊಳಿಸುವರು. ರಂಗಕರ್ಮಿ ಡಾ.ರಾಜಪ್ಪ ದಳವಾಯಿ ನುಡಿನಮನ ಸಲ್ಲಿಸುವರು. ವಿಜಯಪುರದ ಗುಬ್ಬಿವೀರಣ್ಣ ಪ್ರಶಸ್ತಿ ಪುರಸ್ಕೃತ ಎಲ್‌.ಬಿ.ಶೇಖ ಮಾಸ್ತರ್ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ವಿವರಿಸಿದರು.ನಾರಾಯಣಪ್ಪಗೆ ಬೆಳಗಲ್ಲು ವೀರಣ್ಣ ಪ್ರಶಸ್ತಿ:

ಬೆಳಗಲ್ಲು ವೀರಣ್ಣನವರ ಸ್ಮರಣೆಯನ್ನು ಇನ್ನಷ್ಟು ಮೆರಗುಗೊಳಿಸಲು ಹೆಜ್ಜೆ ಗೆಜ್ಜೆ ಬಯಲಾಟ ಕಲಾ ಟ್ರಸ್ಟ್ ಈ ವರ್ಷದಿಂದ ‘ನಾಡೋಜ ಬೆಳಗಲ್ಲು ವೀರಣ್ಣ’ ಪ್ರಶಸ್ತಿಯನ್ನು ನೀಡಲು ನಿರ್ಧರಿಸಲಾಗಿದೆ. ಪ್ರಶಸ್ತಿ ಫಲಕದೊಂದಿಗೆ ₹11 ಸಾವಿರ ನಗದು ನೀಡಿ ಸಮಾರಂಭದಲ್ಲಿ ಗೌರವಿಸಲಾಗುವುದು. ನಾರಾಯಣಪ್ಪ ಕಾರಿಗನೂರು ಈ ವರ್ಷದ ಮೊಟ್ಟ ಮೊದಲ ‘ನಾಡೋಜ ಬೆಳಗಲ್ಲು ವೀರಣ್ಣ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. 91 ವರ್ಷದ ನಾರಾಯಣಪ್ಪ ತನ್ನ ತಂದೆ ನಾಟಕದ ಹನುಮಂತಪ್ಪನವರಲ್ಲಿಯೇ ಬಾಲ್ಯದ ಅಭಿನಯದ ಪಾಠಗಳನ್ನು ಕಲಿತು ಮುಂದೆ ಬೆಳಗಲ್ಲು ವೀರಣ್ಣನವರನ್ನು ಗುರುವಾಗಿ ಸ್ವೀಕರಿಸಿದ್ದರು.

ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ವೀರಣ್ಣನವರ ಶ್ರೀ ರಾಮಾಂಜನೇಯ ತೊಗಲುಗೊಂಬೆ ಮೇಳದೊಂದಿಗೆ ಪ್ರದರ್ಶನಗಳಲ್ಲಿ ಭಾಗಿಯಾಗುತ್ತಿದ್ದ ನಾರಾಯಣಪ್ಪ ದೆಹಲಿ, ನಾಗಪುರ, ಮುಂತಾದೆಡೆ ಪ್ರದರ್ಶನ ನೀಡಿದ್ದಾರೆ. ನಾರಾಯಣಪ್ಪಗೆ ಶ್ರೀ ಕೃಷ್ಣದೇವರಾಯ ಪ್ರಶಸ್ತಿ, ಜಾನಪದ ಅಕಾಡೆಮಿಯ ಪ್ರಶಸ್ತಿಗಳು ಸಂದಿವೆ.

ಸ್ಮರಣಾಂಜಲಿ ಕಾರ್ಯಕ್ರಮದಲ್ಲಿ ವಸಂತಕುಮಾರ್ ಹಾಗೂ ಕವಿತಾ ಗಂಗೂರು ಅವರಿಂದ ಗೀತನಮನ ಹಾಗೂ ಶ್ರೀರಾಮಾಂಜಿನೇಯ ತೊಗಲುಗೊಂಬೆ ಮೇಳ ಟ್ರಸ್ಟ್‌ ವತಿಯಿಂದ ಮಹಾತ್ಮಗಾಂಧಿ ತೊಗಲುಗೊಂಬೆ ಪ್ರದರ್ಶನ ಜರುಗಲಿದೆ.

ರಂಗತೋರಣದ ಅಡವಿಸ್ವಾಮಿ ಸುದ್ದಿಗೋಷ್ಠಿಯಲ್ಲಿದ್ದರು.