ಅರಣ್ಯ ಅತಿಕ್ರಮಣದಾರರಿಗೆ ನ್ಯಾಯ ಒದಗಿಸಿದ್ದು ಬಿಜೆಪಿ: ಸದಾನಂದ ಭಟ್‌

| Published : Apr 06 2024, 12:57 AM IST / Updated: Apr 06 2024, 10:02 AM IST

ಅರಣ್ಯ ಅತಿಕ್ರಮಣದಾರರಿಗೆ ನ್ಯಾಯ ಒದಗಿಸಿದ್ದು ಬಿಜೆಪಿ: ಸದಾನಂದ ಭಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಅರಣ್ಯ ಅತಿಕ್ರಮಣದಾರರು ಗಂಭೀರ ಸಮಸ್ಯೆ ಎದುರಿಸುತ್ತಿದ್ದಾರೆ. ಅವರಿಗೆ ರವೀಂದ್ರ ನಾಯ್ಕ ನಾಯಕತ್ವ ವಹಿಸಿ, ಜಿಲ್ಲೆ ಮತ್ತು ರಾಜ್ಯದಲ್ಲಿ ನಿರಂತರ ಹೋರಾಟ ಮಾಡುತ್ತ ಬಂದಿದ್ದಾರೆ.

ಶಿರಸಿ: ಅತಿಕ್ರಮಣದಾರರ ಹೋರಾಟದ ಮುಖ್ಯಸ್ಥರಿಗೆ ನ್ಯಾಯ ಒದಗಿಸಲು ಕಾಂಗ್ರೆಸ್‌ನಿಂದ ಆಗಿಲ್ಲ. ಚುನಾವಣೆ ಎದುರಿನಲ್ಲಿ ಅತಿಕ್ರಮಣದಾರರ ಪರವಾಗಿ ನಾವಿದ್ದೇವೆ ಎಂಬ ಘೋಷಣೆ ಮಾಡುವ ಕಾಂಗ್ರೆಸ್ ತಮ್ಮ ಅಧಿಕಾರದಲ್ಲಿ ಏನು ಮಾಡಿದೆ ಎಂಬುದನ್ನು ತಿಳಿಸಲಿ. ಅತಿಕ್ರಮಣದಾರರ ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಬಿಜೆಪಿ ತತ್ವ- ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತ ಎಂದು ಜಿಲ್ಲಾ ಮಾಧ್ಯಮ ವಕ್ತಾರ ಸದಾನಂದ ಭಟ್ಟ ನಿಡಗೋಡ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಅರಣ್ಯ ಅತಿಕ್ರಮಣದಾರರು ಗಂಭೀರ ಸಮಸ್ಯೆ ಎದುರಿಸುತ್ತಿದ್ದಾರೆ. ಅವರಿಗೆ ರವೀಂದ್ರ ನಾಯ್ಕ ನಾಯಕತ್ವ ವಹಿಸಿ, ಜಿಲ್ಲೆ ಮತ್ತು ರಾಜ್ಯದಲ್ಲಿ ನಿರಂತರ ಹೋರಾಟ ಮಾಡುತ್ತ ಬಂದಿದ್ದಾರೆ. ಅರಣ್ಯವಾಸಿಗಳಿಗೆ ಹಕ್ಕು ನೀಡಲು ಕಾಂಗ್ರೆಸ್ ಪ್ರಯತ್ನ ಏನಿದೆ ಎಂಬುದನ್ನು ಜನರಿಗೆ ಹೇಳಲಿ ಎಂದು ಸವಾಲು ಹಾಕಿದರು.

ವಿಶ್ವೇಶ್ವರ ಹೆಗಡೆ ಸಭಾಧ್ಯಕ್ಷರಾಗಿದ್ದ ವೇಳೆ ೨೦೨೨ರಲ್ಲಿ ಅರಣ್ಯ ಅತಿಕ್ರಮಣದಾರರಿಗೆ ವಸತಿ ಯೋಜನೆಯ ಮೂಲಕ ಮನೆ ನಿರ್ಮಿಸಲು ಅವಕಾಶಕ್ಕೆ ಆದೇಶ ಹೊರಡಿಸಿದ್ದಾರೆ. ಅರಣ್ಯ ಪ್ರದೇಶ ಹೊಂದಿರುವ ಉತ್ತರಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅರಣ್ಯ ಪ್ರದೇಶದಲ್ಲಿ ವಾಸವಾಗಿರುವ ಕುಟುಂಬಗಳಿಗೆ ವಸತಿ ಯೋಜನೆಯ ಮೂಲಕ ೨೫ ಸಾವಿರ ಮನೆ ಮಂಜೂರಿಗೆ ಅವಕಾಶ ದೊರೆಯಿತು. ಆರ್.ವಿ. ದೇಶಪಾಂಡೆ ತಮ್ಮ ಪುತ್ರ ಸ್ಪರ್ಧಿಸಿದಾಗ ಆಗ ಉಸ್ತುವಾರಿ ಸಚಿವರಾಗಿದ್ದ ಅವರು ಚುನಾವಣಾ ತರಾತುರಿಯಲ್ಲಿ ೩೦೦ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿದ್ದರು. 87 ಸಾವಿರ ಕುಟುಂಬಕ್ಕೆ ಹಕ್ಕುಪತ್ರ ನೀಡಲು ಯಾವ ತೊಂದರೆ ಇತ್ತು ಎಂಬುದನ್ನು ಅವರು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.

ಮತ ಪಡೆಯುವ ದೃಷ್ಟಿಯಿಂದ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ ಬೊಗಳೆ ಮಾತನ್ನು ಹೇಳುತ್ತಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಕುಮಟಾದಲ್ಲಿ ಜಾಗ ಗುರುತಿಸಿ, ೨೦೨೩ನೇ ಸಾಲಿನ ಅಂತಿಮ ಬಜೆಟ್‌ನಲ್ಲಿ ಘೋಷಣೆ ಮಾಡಿ, ಅನುದಾನ ಬಿಡುಗಡೆ ಮಾಡಲಾಗಿತ್ತು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಯಾಕೆ ಕೈ ಬಿಡಲಾಯಿತು ಎಂಬುದಕ್ಕೆ ಉತ್ತರ ನೀಡಲಿ. ಕೇವಲ ಚುನಾವಣಾ ಸರಕನ್ನಾಗಿ ಮಾಡುವುದನ್ನು ಬಿಡಲಿ ಎಂದರು.

ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಾಗಿ ಚುನಾವಣಾ ಎದುರಿಸಲು ಎಲ್ಲ ಸಿದ್ಧತೆ ಕೈಗೊಳ್ಳಲಾಗಿದೆ. ವಿಶ್ವೇಶ್ವರ ಹೆಗಡೆ ಅಭ್ಯರ್ಥಿಯಾಗಿ ಘೋಷಣೆಯಾದ ನಂತರ ಅತ್ಯುತ್ತಮ ಸಂಬಂಧ ಮಾಡಿಕೊಳ್ಳಲಾಗಿದೆ. ಹಳಿಯಾಳದಲ್ಲಿ ಮಾಜಿ ಶಾಸಕ ಸುನೀಲ ಹೆಗ್ಡೆ, ವಿಧಾನಪರಿಷತ್ ಮಾಜಿ ಸದಸ್ಯ ಶ್ರೀಕಾಂತ ಘೋಟ್ನೇಕರ, ಕುಮಟಾ ಶಾಸಕ ದಿನಕರ ಶೆಟ್ಟಿ ಹಾಗೂ ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಒಂದೇ ವೇದಿಕೆ ಮೇಲೆ ಒಳ್ಳೆಯ ವಾತಾವರಣ ನಿರ್ಮಿಸಿದ್ದಾರೆ. ಶಿರಸಿಯ ಉಪೇಂದ್ರ ಪೈ ಅವರು ಕಾಗೇರಿ ಅವರ ಜತೆ ಒಂದು ಸುತ್ತಿನ ಪ್ರವಾಸ ಕೈಗೊಂಡಿದ್ದಾರೆ. ಕಾರವಾರದ ಮಾಜಿ ಸಚಿವ ಆನಂದ ಅಸ್ನೋಟಿಕರ್ ನರೇಂದ್ರ ಮೋದಿ ಅವರನ್ನು ಮೂರನೆಯ ಬಾರಿಗೆ ಪ್ರಧಾನಿ ಮಾಡಲು ಉತ್ತರಕನ್ನಡದಲ್ಲಿ ಬಿಜೆಪಿ ಗೆಲ್ಲಿಸಲು ಕಾಗೇರಿ ಅವರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ. ಎಲ್ಲರೂ ಜೋಡೆತ್ತಿನ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.

ನಗರ ಮಂಡಳ ಅಧ್ಯಕ್ಷ ಆನಂದ ಸಾಲೇರ, ಗ್ರಾಮೀಣ ಮಂಡಳ ಅಧ್ಯಕ್ಷೆ ಉಷಾ ಹೆಗಡೆ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರೇಮಕುಮಾರ ನಾಯ್ಕ, ಪದಾಧಿಕಾರಿಗಳಾದ ಮಹಂತೇಶ ಹಾದಿಮನಿ, ನಾಗರಾಜ ನಾಯ್ಕ, ಶರ್ಮಿಳಾ ಮಾದನಗೇರಿ, ನಾಗರಾಜ ಶೆಟ್ಟಿ ಇದ್ದರು.