ಉಡುಪಿಯಲ್ಲಿ ವಂದೇ ಭಾರತ್‌ ರೈಲಿಗೆ ಭವ್ಯ ಸ್ವಾಗತ

| Published : Dec 31 2023, 01:30 AM IST

ಸಾರಾಂಶ

ಇಂದ್ರಾಣಿ ರೈಲು ನಿಲ್ದಾಣಕ್ಕೆ ಶನಿವಾರ ಆಗಮಿಸಿದ ಮಡಗಾಂವ್ - ಮಂಗಳೂರು ವಂದೇ ಭಾರತ್‌ ಎಕ್ಸ್‌ಪ್ರೆಸ್ ರೈಲಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿಇಲ್ಲಿನ ಇಂದ್ರಾಣಿ ರೈಲು ನಿಲ್ದಾಣಕ್ಕೆ ಶನಿವಾರ ಆಗಮಿಸಿದ ಮಡಗಾಂವ್ - ಮಂಗಳೂರು ವಂದೇ ಭಾರತ್‌ ಎಕ್ಸ್‌ಪ್ರೆಸ್ ರೈಲಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು.ವಾದ್ಯಘೋಷ, ಯಕ್ಷಗಾನ ವೇಷಗಳೊಂದಿಗೆ ನೂರಾರು ಮಂದಿ ಬಿಜೆಪಿ ಕಾರ್ಯಕರ್ತರು ರೈಲು ನಿಲ್ದಾಣದಲ್ಲಿ ರೈಲನ್ನು ಜೈಕಾರದೊಂದಿಗೆ ಬರಮಾಡಿಕೊಂಡರು.ಶಾಸಕರಾದ ವಿ.ಸುನಿಲ್ ಕುಮಾರ್, ಸುರೇಶ್ ಶೆಟ್ಟಿ ಗುರ್ಮೆ, ಯಶ್ಪಾಲ್‌ ಸುವರ್ಣ, ಗುರುರಾಜ ಗಂಟಿಹೊಳೆ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ನಾಯಕರಾದ ಸುರೇಶ್ ನಾಯಕ್ ಕುಯಿಲಾಡಿ, ಕೆ.ಉದಯಕುಮಾರ್ ಶೆಟ್ಟಿ, ವೀಣಾ ಎಸ್.ನಾಯಕ್, ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಎಸ್ಪಿ ಡಾ.ಅರುಣ್, ಕೊಂಕಣ ರೈಲ್ವೆ ವಿಭಾಗಾಧಿಕಾರಿ ಬಿ.ಬಿ.ನಿಖಂ, ಪಿಆರ್‌ಓ ಸುಧಾ ಕೃಷ್ಣಮೂರ್ತಿ ಅವರು ರೈಲಿಗೆ ಹೂವು ಎರಚಿ ಸ್ವಾಗತಿಸಿದರು.ಈ ರೈಲು ಮುಂದೆ ಕರಾವಳಿಯನ್ನು ಉತ್ತರ ಭಾರತದೊಂದಿಗೆ ಔದ್ಯೋಗಿಕ ಮತ್ತು ಸಾಂಸ್ಕೃತಿಕವಾಗಿ ಬೆಸೆಯುವುದಕ್ಕೆ ಸಹಕಾರಿಯಾಗಲಿದೆ ಎಂದು ಶೋಭಾ ಹೇಳಿದರು.ದಿ.ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ ಅವರ ಕನಸಿನ ಕೊಂಕಣ ರೈಲು ಪ್ರತ್ಯೇಕ ಹಣಕಾಸಿನ ವ್ಯವಸ್ಥೆ, ಆಡಳಿತ ವ್ಯವಸ್ಥೆ ಹೊಂದಿದ್ದರೂ ನಿರೀಕ್ಷಿಕ ರೀತಿಯಲ್ಲಿ ಅಭಿವೃದ್ಧಿಯಾಗಿಲ್ಲ. ಪೂರ್ಣ ಪ್ರಮಾಣದಲ್ಲಿ ಹಳಿಗಳ ವಿಸ್ತರಣೆ, ರೈಲು ಮಾರ್ಗದ ವಿದ್ಯುದ್ದೀಕರಣ ಆಗಿಲ್ಲದಿರುವುದು, ಇದಕ್ಕೆ ಈ ಭಾಗದ ಅರಣ್ಯ - ಭೌಗೋಳಿಕ ಸಮಸ್ಯೆಗಳೂ ಕಾರಣವಾಗಿವೆ. ಆದರೆ ವಂದೇ ಭಾರತ್ ಯೋಜನೆಯಿಂದ ರೈಲು ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ಸಾಧ್ಯ ಎಂದರು.ಅಯೋಧ್ಯೆಯಲ್ಲಿ ಪ್ರದಾನಿ ಮೋದಿ ಅವರಿಂದ ವಂದೇ ಮಾತರಂ ರೈಲಿಗೆ ಚಾಲನೆಯ ನೇರಪ್ರಸಾರವನ್ನು ವೀಕ್ಷಣೆಗೆ ನಿಲ್ದಾಣದಲ್ಲಿ ವ್ಯವಸ್ಥೆ ಮಾಡಲಾಗಿತ್ತು.