ಸಾರಾಂಶ
ಸಿಂಧನೂರು ನಗರಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾವನ್ನು ಗುರುವಾರ ಅಂಬೇಡ್ಕರ್ ವೃತ್ತದಿಂದ ಟೌನ್ ಹಾಲ್‌ವರೆಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಕಲಾ ತಂಡಗಳು, ಮಕ್ಕಳ ವೇಷಭೂಷಣ ಜನರ ಕಣ್ಮನ ಸೆಳೆಯಿತು.
ಕನ್ನಡಪ್ರಭ ವಾರ್ತೆ ಸಿಂಧನೂರು
ಸಂವಿಧಾನ ಜಾಗೃತಿ ಜಾಥಾ ಗುರುವಾರ ಸಿಂಧನೂರು ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ತಾಲ್ಲೂಕಾಡಳಿತದಿಂದ ಅದ್ಧೂರಿಯಾಗಿ ಸ್ವಾಗತಿಸಿಕೊಂಡು ವಿವಿಧ ಶಾಲೆಗಳ ಸಾವಿರಾರು ವಿದ್ಯಾರ್ಥಿಗಳೊಂದಿಗೆ ಮೆರವಣಿಗೆ ನಡೆಸಲಾಯಿತು.ನಂತರ ಆರಂಭಗೊಂಡ ಜಾಥಾ ಹಿರೇಹಳ್ಳ ಸೇತುವೆ, ಕಿತ್ತೂರುರಾಣಿ ಚೆನ್ನಮ್ಮ ಸರ್ಕಲ್ ಮೂಲಕ ಟೌನ್ಹಾಲ್ಗೆ ತಲುಪಿತು. ಡೊಳ್ಳು ಕುಣಿತ, ಕೋಲಾಟ, ಹಲಗೆ ವಾದನ ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರುಗು ತಂದವು. ಅಂಬೇಡ್ಕರ್, ಕಿತ್ತೂರುರಾಣಿ ಚೆನ್ನಮ್ಮ, ಭುವನೇಶ್ವರಿ ದೇವಿ ಹೀಗೆ ವಿವಿಧ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ಧರಿಸಿದ್ದ ವಿದ್ಯಾರ್ಥಿಗಳು ನೋಡುಗರ ಕಣ್ಮನ ಸೆಳೆದರು.
ಮೆರವಣಿಗೆಯುದ್ದಕ್ಕೂ ಅಂಬೇಡ್ಕರ್ ಭಾವಚಿತ್ರಗಳು ಹಾಗೂ ಅವರ ಸಂದೇಶಗಳ ಬಿತ್ತಿಚಿತ್ರಗಳನ್ನು ಹಿಡಿದು ವಿದ್ಯಾರ್ಥಿಗಳು ಜೈಭೀಮ್ ಜಯಘೋಷ ಕೂಗಿ ಸಂಭ್ರಮಿಸಿದರು.ನಂತರ ಟೌನ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಾಲಿಹಾಳ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಡಾ.ಹುಸೇನಪ್ಪ ಅಮರಾಪುರ ವಿಶೇಷ ಉಪನ್ಯಾಸ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಮಹೇಶ ಪೋತೆದಾರ್, ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಮಾತನಾಡಿದರು. ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ ಮಾತನಾಡಿದರು. ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ, ಪರಿಶಿಷ್ಟ ಪಂಗಡದ ಕಲ್ಯಾಣಾಧಿಕಾರಿ ಶಿವಮಾನಪ್ಪ, ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಬಸವಲಿಂಗಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಇದ್ದರು. ನಂತರ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಕಣ್ಮನ ಸೆಳೆದವು. ಶಿಕ್ಷಕ ವೀರೇಶ ಗೋನವಾರ ನಿರೂಪಿಸಿದರು.