ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲಬೇಕೆಂದು ಬಿಜೆಪಿ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದು, ಚಾಮುಂಡೇಶ್ವರಿ ಕ್ಷೇತ್ರದ ಜಯಪುರ ಹೋಬಳಿ ಭಾಗದ ಗ್ರಾಮಗಳಲ್ಲಿ ಭಾನುವಾರ ಬಿಜೆಪಿ ಅಭ್ಯರ್ಥಿ ಯದುವೀರ್ ಮತ್ತು ಶಾಸಕ ಜಿ.ಟಿ. ದೇವೇಗೌಡ ಅವರು ಜತೆಯಾಗಿ ಮತಯಾಚಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸಿದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ-ಜಾ.ದಳ ಮೈತ್ರಿಕೂಟಕ್ಕೆ ಹೆಚ್ಚಿನ ಮತಗಳ ಲೀಡ್ ಬರುವಂತೆ ಮಾಡಲು ಶಾಸಕ ಜಿ.ಟಿ. ದೇವೇಗೌಡರು ಯದುವೀರ್ ಜತೆಗೂಡಿ ದಿನವೀಡಿ ರೋಡ್ ಶೋ ನಡೆಸುವ ಮೂಲಕ ಮತಯಾಚಿಸಿದರು.
ತಮ್ಮ ಎದುರಾಳಿ ಕಾಂಗ್ರೆಸ್ ಗೆ ಸ್ವಲ್ಪಮಟ್ಟಿಗೆ ನೆಲೆಯಾಗಿರುವ ಜಯಪುರ ಹೋಬಳಿಯನ್ನು ಗುರಿ ಮಾಡಿಕೊಂಡು ಪ್ರಚಾರ ಮಾಡುವ ಮೂಲಕ ಮತದಾರರನ್ನು ಮೋಡಿ ಮಾಡಿದರು. ಉದ್ಭೂರು ಗ್ರಾಮದಲ್ಲಿ ತಳಿರು ತೋರಣ ಕಟ್ಟಿ ಪೂರ್ಣಕುಂಭ ಸ್ವಾಗತ, ಮಂಗಳವಾದ್ಯದೊಂದಿಗೆ ಯದುವೀರ್ ಅವರನ್ನು ಗ್ರಾಮಸ್ಥರು ಅದ್ದೂರಿಯಾಗಿ ಬರಮಾಡಿಕೊಂಡರು.ಬಳಿಕ ಗ್ರಾಮದ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದ ಯದುವೀರ್ ಗೆ ವೀರಮದಕರಿ ನಾಯಕ, ವಾಲ್ಮೀಕಿ ಭಾವಚಿತ್ರವನ್ನು ನೀಡಿ ಸನ್ಮಾನಿಸಲಾಯಿತು. ನಂತರ, ತೆರೆದ ವಾಹನವನ್ನೇರಿದ ಯದುವೀರ್-ಜಿ.ಟಿ. ದೇವೇಗೌಡರು ಪ್ರತಿಯೊಂದು ಬೀದಿಗಳಲ್ಲಿ ಸಂಚಾರಿಸಿ ಮತಯಾಚಿಸಿದರು. ಈ ವೇಳೆ ಉದ್ಬೂರಿನ ಹಿರಿಯ ಅಜ್ಜಿಯೊಬ್ಬರು ಯದುವೀರ್ ಗೆ ವೀಳ್ಯದೆಲೆ ಕೊಟ್ಟು ಹಾರೈಸಿದ್ದು ವಿಶೇಷವಾಗಿತ್ತು. ನಂತರ, ಕೆಂಚಲಗೂಡು, ಡಿ. ಸಾಲುಂಡಿ ಗ್ರಾಮದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ಗ್ರಾಮದ ಕನಕದಾಸರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಧನಗಳ್ಳಿ, ದೇವಗಳ್ಳಿ, ಮುಳ್ಳೂರು, ಗೋಪಾಲಪುರದಲ್ಲಿ ಮತಯಾಚಿಸಿದ ಬಳಿಕ ಮಾವಿನಹಳ್ಳಿ ಗ್ರಾಮದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ಯದುವೀರ್ ಆಗಮನಕ್ಕಾಗಿ ಕಾದು ನಿಂತಿದ್ದ ಮಹಿಳೆಯರು ಆರತಿ ಬೆಳಗಿ ಹಣೆಗೆ ಕುಂಕುಮ ಇಟ್ಟರು.ಈ ವೇಳೆ ಅನೇಕರು ಫೋಟೋಗೆ ಮುಗಿಬಿದ್ದರು. ಜಯಪುರ ಗ್ರಾಮದಲ್ಲಿ ಯದುವೀರ್ ಆಗಮಿಸುತ್ತಿದ್ದಂತೆ ಮಂಗಳವಾದ್ಯ ಸಮೇತ ಸ್ವಾಗತಿಸಲಾಯಿತು. ವಾಲ್ಮೀಕಿ, ಅಂಬೇಡ್ಕರ್, ಬಸವೇಶ್ವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಊರಿನ ಗ್ರಾಮದ ಕೆಲವರು ಶಾಲು ಹೊದಿಸಿ ಸನ್ಮಾನಿಸಿದರು. ನಂತರ, ಸುಡು ಬಿಸಿಲನ್ನು ಲೆಕ್ಕಿಸದೆ ಗುಮಚನಹಳ್ಳಿ, ಎಸ್. ಕಲ್ಲಹಳ್ಳಿ, ಚುಂಚರಾಯನಹುಂಡಿ, ಮದ್ದೂರು, ಮದ್ದೂರು ಹುಂಡಿ, ಮಂಡನಹಳ್ಳಿ, ಗುಜ್ಜೇಗೌಡನಪುರ ಅರಸನಕೆರೆ, ಹಾರೋಹಳ್ಳಿ, ಮಾರ್ಬಳ್ಳಿ ಹುಂಡಿ, ಮಾರ್ಬಳ್ಳಿ, ಟಿ. ಕಾಟೂರು, ಕೆಲ್ಲಹಳ್ಳಿ, ಮುರುಡಗಳ್ಳಿ, ದೂರ, ದೊಡ್ಡಕಾಟೂರು, ತಳೂರು, ಸಿಂಧುವಳ್ಳಿ, ಬ್ಯಾತಹಳ್ಳಿ, ಕಡಕೊಳ, ಮಂಡಕಳ್ಳಿ ಗ್ರಾಮದಲ್ಲಿ ರೋಡ್ ಶೋ ಮೂಲಕ ಮತಯಾಚಿಸಿದರು.ಪ್ರತಿಯೊಂದು ಗ್ರಾಮದಲ್ಲಿ ತಳಿರು ತೋರಣ ಕಟ್ಟಿ ಜೈಕಾರದ ಘೋಷಣೆಗಳನ್ನು ಕೂಗಿ ಸ್ವಾಗತಿಸಿದರು. ಸಣ್ಣ ಸಣ್ಣ ಭಾಷಣದ ಮೂಲಕ ಮತಯಾಚಿಸಿದ ಯದುವೀರ್ ಅವರು, ಮುಂದಿನ ಯೋಜನೆ ವಿವರಿಸಿದರು.
ಸಂಜೆ ಗೆಜ್ಜಗಳ್ಳಿ, ಬಂಡೀಪಾಳ್ಯ, ಹೊಸಹುಂಡಿ, ಆಲನಹಳ್ಳಿ, ಗಿರಿದರ್ಶಿನಿ ಬಡಾವಣೆ, ದೇವೇಗೌಡ ವೃತ್ತ, ನಾಡನಹಳ್ಳಿ, ನಂದಿನಿ ಬಡಾವಣೆ, ಪೊಲೀಸ್ ಬಡಾವಣೆಯಲ್ಲಿ ಪ್ರಚಾರ ನಡೆಸಿದರು. ಗೆಜ್ಜಗಳ್ಳಿ ಗ್ರಾಮದಲ್ಲಿ ಹಬ್ಬದ ವಾತಾವರಣದಂತೆ ಸಂಭ್ರಮ ಮನೆ ಮಾಡಿತ್ತು. ರತ್ನಖಚಿತ ಸಿಂಹಾಸನ ಜೋಡಣೆ ಮಾಡುವ ಗೆಜ್ಜಗಳ್ಳಿ ಗ್ರಾಮಕ್ಕೂ-ಅರಮನೆಗೂ ಬಹಳ ಆತ್ಮೀಯತೆ ಇರುವ ಕಾರಣ ಹಿರಿಯರು-ಕಿರಿಯರು ಎನ್ನದೆ ಒಂದಾಗಿ ಯದುವೀರ್ ಪ್ರಚಾರದಲ್ಲಿ ಭಾಗಿಯಾದರು.ಮುಖಂಡ ಕವೀಶ್ ಗೌಡ, ಕೆ. ವಸಂತಕುಮಾರ್, ಗೆಜ್ಜಗಳ್ಳಿ ಮಹೇಶ್, ಬಿ.ಎಂ. ರಘು, ಅರುಣ್ ಕುಮಾರ್ ಗೌಡ, ಹಿರಿಯ ವಕೀಲ ಪಾಲಾಕ್ಷ, ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಹಿನಕಲ್ ರಾಜಣ್ಣ, ಎಪಿಎಂಸಿ ಮಾಜಿ ಸದಸ್ಯ ಕೋಟೆಹುಂಡಿ ಮಹದೇವ್, ಉದ್ಬೂರು ಗ್ರಾಮದ ಮಹದೇವಸ್ವಾಮಿ, ಪಿತಾಂಬರ, ಮೂರ್ತಿ, ಬಸವರಾಜ್, ಗೋವಿಂದ್, ಕುಮಾರ್, ಮೂರ್ತಿ, ಸಾಲುಂಡಿ ಗ್ರಾಮದ ಕೃಷ್ಣಮೂರ್ತಿ, ಭಾಸ್ಕರ್, ಧನಗಳ್ಳಿ ಗ್ರಾಮದ ಲಿಂಗರಾಜ್, ಸ್ವಾಮಿ, ದೇವಗಳ್ಳಿ ಗ್ರಾಮದ ಸಿದ್ದಯ್ಯ, ಗೋಪಾಲಪುರ ಗ್ರಾಪಂ ಅಧ್ಯಕ್ಷ ಬಸವೇಗೌಡ, ಗ್ರಾಮದ ವಿಶ್ವಣ್ಣ, ಸುರೇಶ್, ಸ್ವಾಮಿ ಗೌಡ, ಪುಟ್ಟೇಗೌಡ, ದೇವರಾಜ್, ಮಾವಿನಹಳ್ಳಿ ಗ್ರಾಮದ ಲೋಕೇಶ್ ರಾಜೇಶ್, ಅಭಿ, ಜಯಪುರ ಗ್ರಾಮದ ಜವರ ನಾಯಕ, ನಾಗರಾಜ್, ರೇಣುಕಾ, ಮಂಜುನಾಥ್, ಮುತಾಲಿಬ್, ನಗರ್ತಳ್ಳಿ ಚಿಕ್ಕಣ್ಣ, ಗುಮ್ಮಚ್ಚಳ್ಳಿ ಗ್ರಾಮದ ಚಿಕ್ಕಣ್ಣ, ಹರೀಶ್, ಎಸ್. ಕಲ್ಲಹಳ್ಳಿ ಗ್ರಾಮದ ಮೂರ್ತಿ, ರಮೇಶ್, ಚುಂಚರಾಯನಹುಂಡಿ ಗ್ರಾಮದ ಮಂಜು, ರವಿ, ಮದ್ದೂರು ಗ್ರಾಮದ ಶಿವಣ್ಣ, ಶಿವನಂಜಯ್ಯ, ಹರೀಶ್ ಮೊದಲಾದವರು ಇದ್ದರು.
---ಬಾಕ್ಸ್ ಸುದ್ದಿ
ಗ್ಯಾರಂಟಿಗೆ ಮರುಳಾಗದೆ ಯದುವೀರ್ ಗೆಲ್ಲಿಸಿಗ್ಯಾರಂಟಿ ಯೋಜನೆಗಳಿಗೆ ಮರುಳಾಗಬಾರದು. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಮತ್ತೊಮ್ಮೆ ಮೋದಿ ಪ್ರಧಾನಿಯಾಗುವ ಕಾರಣ ಯದುವೀರ್ ಅವರನ್ನು ಗೆಲ್ಲಿಸಬೇಕು ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
ಉದ್ಭೂರು, ಜಯಪುರ, ಗೋಪಾಲಪುರ, ಮಾವಿನಹಳ್ಳಿ ಗ್ರಾಮದಲ್ಲಿ ಮತದಾರರನ್ನುದ್ದೇಶಿಸಿ ಮಾತನಾಡಿ, ಬಿಜೆಪಿ- ಜಾ.ದಳ ಮೈತ್ರಿ ಮಾಡಿಕೊಂಡು ಒಂದಾಗಿ ಹೋಗುತ್ತಿದೆ. ಮೈಸೂರಲ್ಲಿ ಯದುವೀರ್, ಮಂಡ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿ ಗೆಲ್ಲಬೇಕು. ಮೋದಿ-ಎಚ್.ಡಿ. ದೇವೇಗೌಡ, ಬಿ.ಎಸ್. ಯಡಿಯೂರಪ್ಪ- ಎಚ್.ಡಿ. ಕುಮಾರಸ್ವಾಮಿ ಒಂದಾಗಿದ್ದಾರೆ ಎಂದು ಹೇಳಿದರು.ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಹೆಚ್ಚುದಿನ ನಿಲ್ಲಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ಸ್ಪರ್ಧೆ ಮಾಡಿರುವುದೇ 140 ಸ್ಥಾನಗಳು. 40 ರಿಂದ 50 ಸ್ಥಾನಗಳನ್ನು ಮಾತ್ರ ಗೆಲ್ಲುವ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದರು.