ಮಕ್ಕಳಿಗೆ ಸ್ಫೂರ್ತಿಯಾಗಲಿದ್ದಾರೆ ಸುಕ್ರಿ, ತುಳಸಿ ಅಜ್ಜಿಯರು!

| Published : Mar 28 2025, 12:33 AM IST

ಸಾರಾಂಶ

ಶಿಕ್ಷಣ, ಹಣ ಬಲವಿಲ್ಲದೆಯೂ ಪ್ರಕೃತಿ ಸೇವೆ, ಸಮಾಜ ಸೇವೆ, ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಿ ದೇಶಾದ್ಯಂತ ಗುರುತಿಸಲ್ಪಟ್ಟ, ಪದ್ಮಶ್ರೀ ಪುರಸ್ಕೃತರಾದ ಸುಕ್ರಿ ಬೊಮ್ಮಗೌಡ ಹಾಗೂ ತುಳಸಿ ಗೌಡ ಸ್ಮರಣಾರ್ಥ ಅವರ ಕಾಯಕ ಮುಂದುವರಿಸುವತ್ತ ಸರ್ಕಾರ ಈವರೆಗೆ ಯಾವ ಹೆಜ್ಜೆಯನ್ನೂ ಇಟ್ಟಿಲ್ಲ. ಆದರೆ ಮಂಗಳೂರಿನ ಪರಿಸರಾಸಕ್ತರ ಸಂಘಟನೆ ‘ಸಹ್ಯಾದ್ರಿ ಸಂಚಯ’ ಈ ಬಗ್ಗೆ ಕಾರ್ಯೋನ್ಮುಖವಾಗಿದೆ.

ಸಂದೀಪ್‌ ವಾಗ್ಲೆ

ಕನ್ನಡಪ್ರಭ ವಾರ್ತೆ ಮಂಗಳೂರು

ಶಿಕ್ಷಣ, ಹಣ ಬಲವಿಲ್ಲದೆಯೂ ಪ್ರಕೃತಿ ಸೇವೆ, ಸಮಾಜ ಸೇವೆ, ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಿ ದೇಶಾದ್ಯಂತ ಗುರುತಿಸಲ್ಪಟ್ಟ, ಪದ್ಮಶ್ರೀ ಪುರಸ್ಕೃತರಾದ ಸುಕ್ರಿ ಬೊಮ್ಮಗೌಡ ಹಾಗೂ ತುಳಸಿ ಗೌಡ ಸ್ಮರಣಾರ್ಥ ಅವರ ಕಾಯಕ ಮುಂದುವರಿಸುವತ್ತ ಸರ್ಕಾರ ಈವರೆಗೆ ಯಾವ ಹೆಜ್ಜೆಯನ್ನೂ ಇಟ್ಟಿಲ್ಲ. ಆದರೆ ಮಂಗಳೂರಿನ ಪರಿಸರಾಸಕ್ತರ ಸಂಘಟನೆ ‘ಸಹ್ಯಾದ್ರಿ ಸಂಚಯ’ ಈ ಬಗ್ಗೆ ಕಾರ್ಯೋನ್ಮುಖವಾಗಿದೆ.

ಅಗಲಿದ ಈ ಇಬ್ಬರು ಮಹಾ ಚೇತನಗಳ ಆಶಯಕ್ಕೆ ಪೂರಕವಾದ ಕಾರ್ಯಕ್ರಮ, ಚಟುವಟಿಕೆಗಳನ್ನು ಒಂದಿಡೀ ವರ್ಷ ಹಮ್ಮಿಕೊಂಡು ಮುಂದಿನ ಪೀಳಿಗೆಗೆ ಸ್ಫೂರ್ತಿ ತುಂಬಲು ತೀರ್ಮಾನಿಸಿದೆ.

ಸುಕ್ರಿ ಅಜ್ಜಿ ಹಾಗೂ ತುಳಸಿ ಅಜ್ಜಿಯರ ಕಾಯಕ, ಚಿಂತನೆಗಳಿಂದ ಉತ್ತರ ಕನ್ನಡ ಜಿಲ್ಲೆ ಅಂಕೋಲಾದ ಬಡಿಗೇರಿ ಮತ್ತು ಹೊನ್ನಳ್ಳಿ ಎಂಬ ಪುಟ್ಟ ಹಳ್ಳಿಗಳ ಹೆಸರು ರಾಷ್ಟ್ರ ಮಟ್ಟದಲ್ಲಿ ಗುರುತಿಸಲ್ಪಟ್ಟಿವೆ. ಪರಿಸರ ಚಳವಳಿ, ಸಮುದಾಯ ರಕ್ಷಣೆಯ ಚಳುವಳಿ, ಮದ್ಯಪಾನ ವಿರುದ್ಧ ಚಳುವಳಿ ಮಾಡಿ ಗುರುತಿಸಲ್ಪಟ್ಟಿದ್ದ ಸುಕ್ರಿ ಬೊಮ್ಮಗೌಡರು 4 ಸಾವಿರಕ್ಕೂ ಅಧಿಕ ಜಾನಪದ ಹಾಡುಗಳನ್ನು ರಚಿಸಿದ್ದಾರೆ. ಇನ್ನೊಂದೆಡೆ ತುಳಸಿ ಗೌಡರು ಲಕ್ಷಾಂತರ ಗಿಡಗಳನ್ನು ನೆಟ್ಟು ಸಮಾಜಕ್ಕೆ ಕಾಣಿಕೆಯಾಗಿ ನೀಡಿದ್ದಾರೆ. ಇವರಿಬ್ಬರ ಕಾಯಕಗಳನ್ನು ಮುಂದುವರಿಸಿಕೊಂಡು ಹೋಗುವ ಅವಶ್ಯಕತೆ ಮನಗಂಡು ಮಂಗಳೂರಿನ ಪರಿಸರ ಹೋರಾಟಗಾರ, ಕಲಾವಿದರೂ ಆಗಿರುವ ದಿನೇಶ್‌ ಹೊಳ್ಳ ಈ ನೂತನ ಕೆಲಸಕ್ಕೆ ಕೈಹಾಕಿದ್ದಾರೆ.

ಮಕ್ಕಳ ಮನದಲ್ಲಿ ಅಜ್ಜಿಯರ ಆಶಯ:

ದಿನೇಶ್‌ ಹೊಳ್ಳ ನೇತೃತ್ವದ ‘ವನ ಚೇತನಾ’ ತಂಡವು ಕಳೆದ 16 ವರ್।ಗಳಿಂದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಜೋಯಿಡಾ, ಯಲ್ಲಾಪುರದ ಅರಣ್ಯದಂಚಿನ ಶಾಲೆಗಳಲ್ಲಿ ಅಡವಿ ಮಕ್ಕಳ ವಿದ್ಯಾ ವಿಕಸನಕ್ಕಾಗಿ ವನಚೇತನ ಶಿಬಿರಗಳನ್ನು ಹಮ್ಮಿಕೊಂಡು ಬರುತ್ತಿದೆ. ದಾನಿಗಳ ನೆರವಿನಲ್ಲಿ ಮಕ್ಕಳ ವಿದ್ಯೆಗೆ ಪೂರಕ ವಾತಾವರಣ ಕಲ್ಪಿಸುವುದು, ಅಡವಿ ಮಕ್ಕಳ ಉನ್ನತ ಶಿಕ್ಷಣಕ್ಕೆ ಸಹಕಾರ ನೀಡುವುದು, ಪರಿಸರದ ಬಗ್ಗೆ ಅರಿವು ಮೂಡಿಸುವ ಕಾರ್ಯ ಶ್ಲಾಘನೆಗೆ ಪಾತ್ರವಾಗಿದೆ. ಈ ವರ್ಷಪೂರ್ತಿ ಇಬ್ಬರು ಅಜ್ಜಿಯರ ಕಾರ್ಯಗಳನ್ನು ವನಚೇತನಾ ಶಿಬಿರಗಳಲ್ಲಿ ಜಾರಿಗೆ ತರುವ ಯೋಜನೆ ರೂಪಿಸಲಾಗಿದೆ.ಅನುಷ್ಠಾನ ಹೇಗೆ?:

ಸುಕ್ರಿ ಬೊಮ್ಮಗೌಡ ಸ್ವತಃ ರಚಿಸಿರುವ ಜಾನಪದ ಹಾಡುಗಳ ದಾಖಲೀಕರಣ ಪೂರ್ಣ ಪ್ರಮಾಣದಲ್ಲಿ ಆಗದಿದ್ದರೂ ಅವರ ಅನೇಕ ಸಮಕಾಲೀನರಿಗೆ ಅವು ಕಂಠಪಾಠ ಆಗಿವೆ. ಅವರನ್ನು ಶಾಲೆಗಳಿಗೆ ಕರೆಸಿ ಮಕ್ಕಳಿಗೆ ಹಾಗೂ ಇತರರಿಗೆ ಅವುಗಳನ್ನು ಕಲಿಸಲಾಗುತ್ತದೆ. ಇದೇ ಸಂದರ್ಭ ಪ್ರತಿ ಶಾಲೆಯ ಆವರಣದಲ್ಲಿ ನಾಲ್ಕೈದು ಗಿಡಗಳನ್ನು ನೆಟ್ಟು ಅವುಗಳನ್ನು ಮಕ್ಕಳಿಂದಲೇ ಬೆಳೆಸಲಾಗುತ್ತದೆ. ಮಾತ್ರವಲ್ಲದೆ, ಸುಕ್ರಿ ಮತ್ತು ತುಳಸಿ ಅಜ್ಜಿಯರ ಆಶಯಗಳಾದ ಪರಿಸರ ಸಂರಕ್ಷಣೆ, ಮದ್ಯಮುಕ್ತ ಸಮಾಜ, ಸಮಾಜ ಸುಧಾರಣೆಯ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ನಡೆಸಲಾಗುತ್ತದೆ.

ಈ ಕುರಿತು ಶೀಘ್ರದಲ್ಲೇ ಸುಕ್ರಿ ಬೊಮ್ಮ ಗೌಡ ಮತ್ತು ತುಳಸಿ ಗೌಡರ ಸಮಕಾಲೀನ ನಾಯಕರು, ಹಾಲಕ್ಕಿ ಸಮುದಾಯದ ನಾಯಕರು, ಹಿರಿಯರನ್ನೊಳಗೊಂಡ ಸಭೆ ನಡೆಸಿ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಈ ಸಮಿತಿಯ ಮೂಲಕ ಸುಕ್ರಿ ಬೊಮ್ಮ ಗೌಡರ ನೆನಪಿಗಾಗಿ ಅವರ ಮನೆಯಲ್ಲಿ ಹಾಲಕ್ಕಿ ಜಾನಪದ ಹಾಡುಗಳ ಜತೆಗೆ ರಾಜ್ಯಮಟ್ಟದ ಜಾನಪದ ಹಾಡುಗಾರರನ್ನು ಕರೆಸಿ ಕಾರ್ಯಕ್ರಮ ಮಾಡುವುದು, ತುಳಸಿ ಗೌಡರ ನೆನಪಿಗಾಗಿ ಅಲ್ಲಲ್ಲಿ ಗಿಡ ನೆಡುವ ಕಾರ್ಯಕ್ರಮ, ಪರಿಸರ ಸಂರಕ್ಷಣಾ ಕಾರ್ಯಕ್ರಮಗಳು ಶಾಲಾ, ಕಾಲೇಜುಗಳಲ್ಲಿ ಪ್ರಕೃತಿ ಅಧ್ಯಯನ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಲಾಗಿದೆ...............................

ಪದ್ಮಶ್ರೀ ಅಜ್ಜಿಯರ ಶಾಶ್ವತ ನೆನಪಿಗಾಗಿ ಮೋದಿಗೆ ಮನವಿ

ಕಳೆದ ಚುನಾವಣೆ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರು ಶಿರಸಿಗೆ ಬಂದಿದ್ದಾಗ ಸುಕ್ರಿ ಹಾಗೂ ತುಳಸಿ ಅಜ್ಜಿಯರ ಕಾಲಿಗೆರಗಿ ಆಶೀರ್ವಾದ ಪಡೆದಿದ್ದರು. ಇವರಿಬ್ಬರು ಹಿರಿಯ ಚೇತನಗಳ ಆಶಯಗಳನ್ನು ಶಾಶ್ವತವಾಗಿರಿಸುವ ನಿಟ್ಟಿನಲ್ಲಿ ಕೇಂದ್ರದ ಯೋಜನೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಅವರಿಗೆ ಮನವಿ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿದಿದೆ. ತುಳಸಿ ಗೌಡ ಮನೆಯಲ್ಲಿ ಸಸ್ಯ ಅಧ್ಯಯನ ಕೇಂದ್ರ, ಸುಕ್ರಿಗೌಡ ಮನೆಯಲ್ಲಿ ಜಾನಪದ ಹಾಡು ಕೇಂದ್ರ ಮಾಡಿದರೆ ಮುಂದಿನ ಪೀಳಿಗೆಗೆ ಉಪಯೋಗವಾಗಲಿದೆ ಎಂದು ದಿನೇಶ್‌ ಹೊಳ್ಳ ಹೇಳುತ್ತಾರೆ.