ಯಾದಗಿರಿ ನ್ಯಾಯಾಲಯ ಕಟ್ಟಡಕ್ಕೆ ಹಣಕಾಸು ಕಿರಿಕಿರಿ

| Published : Oct 17 2023, 12:46 AM IST

ಯಾದಗಿರಿ ನ್ಯಾಯಾಲಯ ಕಟ್ಟಡಕ್ಕೆ ಹಣಕಾಸು ಕಿರಿಕಿರಿ
Share this Article
  • FB
  • TW
  • Linkdin
  • Email

ಸಾರಾಂಶ

ಯಾದಗಿರಿ ನ್ಯಾಯಾಲಯ ಕಟ್ಟಡಕ್ಕೆ ಹಣಕಾಸು ಕಿರಿಕಿರಿಅನುದಾನ ಕೊರತೆಯಿಂದ ಮೇಲೇಳದ ಕಟ್ಟಡ । ಪ್ರಕರಣಗಳ ವಿಲೇವಾರಿ ವಿಳಂಬ । ಸತ್ಯಾಗ್ರಹಕ್ಕೆ ವಕೀಲರ ಚಿಂತನೆ

ಅನುದಾನ ಕೊರತೆಯಿಂದ ಮೇಲೇಳದ ಕಟ್ಟಡ । ಪ್ರಕರಣಗಳ ವಿಲೇವಾರಿ ವಿಳಂಬ । ಸತ್ಯಾಗ್ರಹಕ್ಕೆ ವಕೀಲರ ಚಿಂತನೆಆನಂದ್ ಎಂ. ಸೌದಿ

ಕನ್ನಡಪ್ರಭ ವಾರ್ತೆ ಯಾದಗಿರಿ

ಅನುದಾನ ಕೊರತೆಯಿಂದಾಗಿ ಜಿಲ್ಲಾ ನ್ಯಾಯಾಲಯದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಗ್ರಹಣ ಹಿಡಿದಿರುವುದರಿಂದ, ಇಲ್ಲಿನ ವಕೀಲರ ಸಂಘ ಸತ್ಯಾಗ್ರಹದ ಮೂಲಕ ಸರ್ಕಾರದ ಕಣ್ತೆರೆಸುವ ಚಿಂತನೆಗೆ ಮುಂದಾಗಿದ್ದಾರೆ.

ಯಾದಗಿರಿ ಜಿಲ್ಲಾಡಳಿತ ಭವನದ ಹಿಂದುಗಡೆಯ 10 ಎಕರೆ ಪ್ರದೇಶದಲ್ಲಿ ನೂತನ ಜಿಲ್ಲಾ ನ್ಯಾಯಾಲಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಹಣಕಾಸು ಇಲಾಖೆ ಅನುದಾನ ಬಿಡುಗಡೆ ಮಾಡದೇ ಇರುವುದು ಹೋರಾಟಕ್ಕೆ ಮುಂದಡಿ ಇಡುವಂತೆ ಮಾಡಿದೆ.

ಈ ಹಿಂದೆ ಜಿಲ್ಲಾ ನ್ಯಾಯಾಲಯ ಕಟ್ಟಡಕ್ಕೆ ಜಾಗಕ್ಕಾಗಿ ಸತತ 28 ದಿನಗಳ ಕಾಲ ವಕೀಲರು ಧರಣಿ ಕೈಗೊಂಡಿದ್ದಾಗ ಸರ್ಕಾರ 10 ಎಕರೆ ಜಾಗ ನೀಡಿತ್ತು. 24 ಡಿಸೆಂಬರ್ 2020ರಂದು ಹೊಸ ಕೋರ್ಟ್ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿತ್ತು. 15 ಕೋಟಿ ರು. ಮಂಜೂರಾದ ಅನುದಾನದಲ್ಲಿ ಕಾಮಗಾರಿ ಚಾಲನೆಗೊಂಡಿತ್ತಾದರೂ, ಹೆಚ್ಚುವರಿ 9.90 ಕೋಟಿ ರು. ಅನುದಾನ ಕೊರತೆಯಿಂದಾಗಿ ಕೋರ್ಟ್ ಕಟ್ಟಡ ನಿರ್ಮಾಣಕ್ಕೆ ಈಗ ಗ್ರಹಣ ಹಿಡಿದಿದೆ.

ಅನುದಾನ ನೀಡುವಂತೆ ಅನೇಕ ಬಾರಿ ಸರ್ಕಾರಕ್ಕೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಇದರಿಂದ ಪ್ರಕರಣಗಳ ವಿಲೇವಾರಿ ವಿಳಂಬಕ್ಕೆ ಕಾರಣವಾಗುತ್ತಿದೆ. ಹೀಗಾಗಿ, ಅನುದಾನಕ್ಕಾಗಿ ಸತ್ಯಾಗ್ರಹ ಅನಿವಾರ್ಯ ಎಂದು ವಕೀಲರ ಸಂಘದ ಜಿಲ್ಲಾಧ್ಯಕ್ಷ ಸಿ. ಎಸ್. ಮಾಲೀಪಾಟೀಲ್ "ಕನ್ನಡಪ್ರಭ "ಕ್ಕೆ ತಿಳಿಸಿದರು.=========ಬಾಕ್ಸ್:1=========* ಅನುದಾನ ಕೊರತೆ : ನ್ಯಾಯಾಧೀಶರ ಬೇಸರ!

ನ್ಯಾಯಾಂಗ ಇಲಾಖೆಯ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಕೊರತೆಯಿದೆ, ಯಾದಗಿರಿ ಜಿಲ್ಲೆಯಾಗಿ 13 ವರ್ಷ ಕಳೆದರೂ, ಅಗತ್ಯವಾದ ಅಭಿವೃದ್ಧಿ ಕಾಮಗಾರಿಗಳು ಕಾಣುತ್ತಿಲ್ಲ, ಬೇರೆ ಜಿಲ್ಲೆಗೆ ಹೋಲಿಸಿದರೆ ಇಲ್ಲಿ ಅಗತ್ಯ ಸೌಲಭ್ಯಗಳ ಕೊರತೆ ಹೆಚ್ಚಿದೆ ಎಂದು ಇತ್ತೀಚೆಗಷ್ಟೇ ಜಿಲ್ಲೆಯ ನ್ಯಾಯಾಧೀಶರೊಬ್ಬರು ನೋವು ವ್ಯಕ್ತಪಡಿಸಿದ್ದರು. ಕಟ್ಟಡ ಕಾಮಗಾರಿಗೆಂದು ಹೈಕೋರ್ಟ್ ಪತ್ರ ಕೊಟ್ಟಿತ್ತಾದರೂ, ಸರ್ಕಾರಗಳು ಜಾಣಕುರುಡಾಗಿ ವರ್ತಿಸಿದ್ದವು.==========ಬಾಕ್ಸ್:2==========

ಸ್ವಂತ ಖರ್ಚಿನಲ್ಲೇ ರಸ್ತೆ ಗುಂಡಿಗಳ ಮುಚ್ಚಿಸಿದ ಜಿಲ್ಲಾ ನ್ಯಾಯಾಧೀಶರು!

ಇಲ್ಲಿನ ಜಿಲ್ಲಾ ನ್ಯಾಯಾಲಯದಿಂದ ನ್ಯಾಯಾಧೀಶರ ಮನೆಗೆ ತೆರಳುವ ರಸ್ತೆ ತೆಗ್ಗುದಿನ್ನೆಗಳಿಂದ ಕೂಡಿದ್ದು, ದುರಸ್ತಿ ಮಾಡುವಂತೆ ಸಂಬಂಧಿತರಿಗೆ ಪತ್ರ ಬರೆದಿದ್ದ ಹಿರಿಯ ಶ್ರೇಣಿ ನ್ಯಾಯಾಧೀಶರು ರವೀಂದ್ರ ಹೊನೊಲೆ, ರಸ್ತೆ ದುರಸ್ತಿಗೆ ಮುಂದಾಗದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಕೆಲ ದಿನಗಳ ಹಿಂದೆ ತಾವೇ ಮುಂದಾಗಿ, ಗುಂಡಿಗಳ ತುಂಬಿಸಿದ್ದರು. ಅವ್ಯವಸ್ಥೆ ವಿರುದ್ಧ ಖುದ್ದು ನ್ಯಾಯಾಧೀಶರೇ ರಸ್ತೆಗಿಳಿದ ಪ್ರಸಂಗ ಇಲ್ಲಿನ ಆಡಳಿತ ಅವ್ಯವಸ್ಥೆಗೆ ಕನ್ನಡಿಯಂತಿತ್ತು. --------------

ಕೋಟ್-1

ಡಿಸಿ, ಸಿಇಓ, ಎಸ್ಪಿ ಸೇರಿದಂತೆ ಪ್ರಮುಖರ ಸರ್ಕಾರಿ ನಿವಾಸಗಳಿಗೆ ಸಿಗುವ ಅನುದಾನ ಕೋರ್ಟ್ಗೆ ಇಲ್ಲವೇ? ಇದೆಂಥಾ ಅನ್ಯಾಯ!

- ಸಿ.ಎಸ್. ಮಾಲೀಪಾಟೀಲ್, ಜಿಲ್ಲಾಧ್ಯಕ್ಷರು, ವಕೀಲರ ಸಂಘ, ಯಾದಗಿರಿ.-14ವೈಡಿಆರ್1

ನೆನೆಗುದಿಗೆ ಬಿದ್ದಿರುವ ಯಾದಗಿರಿ ಜಿಲ್ಲಾ ನ್ಯಾಯಾಲಯ ಕಟ್ಟಡ ನಿರ್ಮಾಣ.14ವೈಡಿಆರ್2

ತಾವೇ ಖುದ್ದಾಗಿ ರಸ್ತೆ ರಿಪೇರಿ ಮಾಡಿಸಿದ ಹಿರಿಯ ಶ್ರೇಣಿ ನ್ಯಾಯಾಧೀಶರಾದ ರವೀಂದ್ರ ಹೊನಲೆ.