ಹಾನಗಲ್ಲ: ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ₹೫೦ ಲಕ್ಷಗಳಿಂದ ₹೧ ಕೋಟಿ ವರೆಗೆ ಅನುದಾನ ನೀಡಲಾಗಿದೆ. ಈ ಪ್ರಕ್ರಿಯೆ ನಿರಂತರವಾಗಿ ನಡೆದಿದ್ದು, ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಗಳ ಜತೆಗೆ ಗ್ರಾಮಗಳ ಒಳಗಿನ ರಸ್ತೆಗಳ ಅಭಿವೃದ್ಧಿಗೂ ಗಮನ ನೀಡಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಅವರು ಹೇಳಿದರು.

ತಾಲೂಕಿನ ಹಳೆ ಶಿಂಗಾಪುರ ಗ್ರಾಮದಲ್ಲಿ ೨೦೨೫-೨೬ನೇ ಸಾಲಿನ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮದಡಿ ₹ ೫ ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ೨೦೨೩-೨೪ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ₹ ೫ ಲಕ್ಷದಲ್ಲಿ ನಿರ್ಮಿಸಿದ ಬಸ್ ತಂಗುದಾಣ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಂದು ಕುಟುಂಬಗಳ ಆರ್ಥಿಕ ಸ್ಥಿತಿಗತಿ ಸುಧಾರಿಸುವ ನಿಟ್ಟಿನಲ್ಲಿ ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತರಲಾಗಿದೆ. ಕುಟುಂಬವೊಂದಕ್ಕೆ ಪ್ರತಿ ತಿಂಗಳು ಕನಿಷ್ಠ ₹ ೪ರಿಂದ ೫ ಸಾವಿರ ಆರ್ಥಿಕ ನೆರವು ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಲಭಿಸುತ್ತಿದೆ. ಗ್ಯಾರಂಟಿ ಯೋಜನೆಗಳ ಜತೆಗೆ ಗ್ರಾಮೀಣ ಪ್ರದೇಶದಲ್ಲಿ ಮೂಲಸೌಕರ್ಯ ಹೆಚ್ಚಿಸಲು ರಾಜ್ಯ ಸರ್ಕಾರ ಒತ್ತು ನೀಡಿದೆ. ತಾಲೂಕಿನ ಪ್ರತಿ ಗ್ರಾಪಂಗಳಿಗೆ ₹೫೦ ಲಕ್ಷದಿಂದ ಒಂದು ಕೋಟಿ ವರೆಗೆ ಅನುದಾನ ಒದಗಿಸಲಾಗಿದೆ ಎಂದು ಹೇಳಿದರು.

ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಮುಖಂಡರಾದ ಭರಮಣ್ಣ ಶಿವೂರ, ನಾಗಪ್ಪ ಸಣ್ಣಮನಿ, ಗಿರಿಮಲ್ಲಪ್ಪ ಸಣ್ಣಮನಿ, ಶಿವಾನಂದಪ್ಪ ಬನ್ನಿಹಳ್ಳಿ, ಮಹೇಶ ಹೆಡ್‌ಮೇಸ್ತ್ರಿ, ಯಲ್ಲಪ್ಪ ಸಣ್ಣಮನಿ, ಮಲ್ಲೇಶ ಹಾಲಣ್ಣನವರ, ಬಸನಗೌಡ ನೀಲನಗೌಡ್ರ, ಶಂಕ್ರಪ್ಪ ದಾನಪ್ಪನವರ, ಬಾಬು ನಿಕ್ಕಂ, ಬಸವರಾಜ ಡುಮ್ಮನವರ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.