ಸಾರಾಂಶ
ಮಲ್ಲಯ್ಯ ಪೋಲಂಪಲ್ಲಿ
ಕನ್ನಡಪ್ರಭ ವಾರ್ತೆ ಶಹಾಪುರದೇಶದ ಬೆನ್ನೆಲುಬಾಗಿರುವ ರೈತ ತನಗೆ ಬೆನ್ನೆಲುಬಾಗಿರುವ ಎತ್ತುಗಳನ್ನು ಅತ್ಯಂತ ಪೂಜನೀಯ ಭಾವದಿಂದ ಕಾಣುತ್ತಾನೆ. ಆದ್ದರಿಂದಲೇ ವರ್ಷವಿಡೀ ತನ್ನೊಂದಿಗೆ ದುಡಿದು ಸಂಸಾರಕ್ಕೆ ಆದರ ಸ್ತಂಭವಾಗಿರುವ ಎತ್ತುಗಳಿಗೆ ಕೃತಜ್ಞತೆ ಸಮರ್ಪಿಸುವ ದೃಷ್ಟಿಯಿಂದ ಕಾರ ಹುಣ್ಣಿಮೆ ಹಬ್ಬವನ್ನು ಆಚರಿಸಲಾಗುತ್ತದೆ.
ರೈತರ ಮೊದಲ ಹಬ್ಬ ಕಾರಹುಣ್ಣಿಮೆ ಆಗಿದ್ದು, ಮುಂಬರುವ ದಿನಗಳಲ್ಲಿ ಕೃಷಿ ಚಟುವಟಿಕೆಗಳು ಚೆನ್ನಾಗಿ ನಡೆಯಲಿ ಎಂಬುದು ರೈತರ ಬಯಕೆ ಮತ್ತು ಸಂಕಲ್ಪ. ವಿವಿಧತೆಯಲ್ಲಿ ಏಕತೆಯನ್ನು ಮೂಡಿಸಿ ಗ್ರಾಮ ಗ್ರಾಮಗಳಲ್ಲಿ ಸೌಹಾರ್ದತೆಯನ್ನು ಮೂಡಿಸುವುದರಲ್ಲಿ ಸಹಕಾರಿಯಾಗುತ್ತದೆ ಎನ್ನುತ್ತಾರೆ ರೈತ ಚೆನ್ನಬಸವಣ್ಣ.ಎತ್ತುಗಳಿಗೆ ಅಲಂಕಾರ: ಹಬ್ಬದ ದಿನ ಎತ್ತುಗಳನ್ನು ಮೈತೊಳೆದು, ಮಿರಿಮಿರಿ ಮಿಂಚುವಂತೆ ಮಾಡುವ ರೈತರು, ಜೂಲ ಹಾಕಿ, ಕೊಂಬುಗಳಿಗೆ ಬಣ್ಣ ಹಚ್ಚಿ, ಕೊರಳಿಗೆ ಘಂಟೆ, ಹಣೆಪಟ್ಟಿ, ಬಲೂನು, ಟೇಪು, ರಿಬ್ಬನ್ ಬಣ್ಣದ ಪರಿಪರಿ ಮತ್ತಿತರ ಅಲಂಕಾರಿಕ ಸಾಮಗ್ರಿಗಳನ್ನು ಕಟ್ಟಿ, ಮೈಮೇಲೆ ಚಿತ್ರ ಬರೆದು, ರಂಗುರಂಗಿನ ಬಟ್ಟೆಯ ಹೊದಿಸಿ ಅಂದವಾಗಿ ಅಲಂಕರಿಸುತ್ತಾರೆ. ಜೊತೆಗೆ ತಮಗಾಗಿ ಮಾಡಿಕೊಂಡ ವಿವಿಧ, ರುಚಿಯಾದ ಸಿಹಿ ಭಕ್ಷ್ಯ ಭೋಜ್ಯಗಳನ್ನು ಎತ್ತುಗಳಿಗೆ ಉಣಬಡಿಸಿ ಸಂಭ್ರಮಿಸುತ್ತಾರೆ.
ಐತಿಹಾಸಿಕ ಹಿನ್ನೆಲೆ: ಸುರ ಅಸುರರು ಅಮೃತಕ್ಕಾಗಿ ಮಂಥನಗೈಯುವಾಗ ಇತ್ತ ರಾಕ್ಷಸಿ ಜಗತ್ತನ್ನು ಪೀಡಿಸುತ್ತಿರುವಾಗ, ತಂದೆ ಈಶ್ವರನ ಅಪ್ಪಣೆಯಂತೆ ಹುಣ್ಣಿಮೆ ದಿನದಂದು ನಂದೀಶನು ಆಕೆಯನ್ನು ತನ್ನ ಚೂಪಾದ ಅಂಬುವಿನಿಂದ ತಿವಿದು ಕೊಂದು ಹಾಕಿದನಂತೆ. ಆಗ ಆತನ ಮೈಯೆಲ್ಲಾ ರಾಕ್ಷಸಿ ರಕ್ತ ಹತ್ತಿ ವೀರ ಕಳೆಯಿಂದ ಶೋಭಿಸುತ್ತಾ ಜಗತ್ತಿನ ಕಳಂಕ ತಪ್ಪಿಸಿದ ಠೀವಿಯಿಂದ ಬೀಗುತ್ತಾನೆ. ನಂದೀಶನ ರಾಕ್ಷಸ ಮರ್ದನದ ಸಂಕೇತ ಮತ್ತು ನರಕುಲದ ಹರ್ಷದ ಸಂಕೇತ ಈ ಕಾರಹುಣ್ಣಿಮೆ. ನಂದೀಶನ ವಿಜಯದ ಸಂಕೇತಕ್ಕಾಗಿ ನಂದಿಗಳನ್ನು ಸಿಂಗರಿಸಿ ಕೊಂಬು ಮತ್ತು ಮೈ ತುಂಬ ಜೀರಂಗಿ ಬಣ್ಣ ಹಚ್ಚಿ ಹಬ್ಬ ಆಚರಿಸಲಾಗುತ್ತದೆ.ಕರಿ ಹರಿಯುವುದು: ಹಬ್ಬದ ಪ್ರಯುಕ್ತ ಎತ್ತುಗಳನ್ನು ಬೆಂಕಿಯಲ್ಲಿ ಹಾಯಿಸಿ (ಕಿಚ್ಚು ಹಾಯಿಸಿ), ಕರಿ ಹರಿಯುವ ಮೂಲಕ ಅವುಗಳ ಸಾಮರ್ಥ್ಯ ಅಳೆಯುವ ಆಚರಣೆ ಒಂದು ಕಡೆಯಾದರೆ ಮತ್ತೊಂದು ಕಡೆ, ಕರಿ ಹರಿಯುವ ಎತ್ತುಗಳನ್ನು ಪೂಜಿಸಿ ಓಡಲು ಬಿಡಲಾಗುತ್ತದೆ. ಈ ಕಾರ್ಯಕ್ರಮವೇ ಒಂದು ವೈಶಿಷ್ಟ್ಯ. ಊರ ಮುಂಭಾಗದಲ್ಲಿ ಬೇವಿನ ತೋರಣದ ನಡುವೆ ಕೊಬ್ಬರಿಯನ್ನು ಕಟ್ಟಲಾಗಿರುತ್ತದೆ. ಈ ಕರಿಯನ್ನು ಹರಿಯಲು ಬಿಳಿ, ಹಾಗೂ ಕಂದು ಬಣ್ಣದ ಎತ್ತುಗಳಿಗೆ ಮಾತ್ರ ಅವಕಾಶವಿದ್ದು ಜೋರಾಗಿ ಭಾಜ ಭಜಂತ್ರಿ ಡೋಲು ಮತ್ತು ತಮಟೆಯ ಸದ್ದಾಗುತ್ತಿದ್ದಂತೆಯೇ, ಸಿಂಗರಿಸಿದ್ದ ತಮ್ಮ ರಾಸುಗಳೊಂದಿಗೆ ರೈತರು ತಾಮುಂದು, ನಾಮುಂದು ಎಂದು ಆ ಕರಿಯನ್ನು ಹರಿಯುವತ್ತ ದೌಡಾಯಿಸುತ್ತಾರೆ. ಕರಿಯುವ ಓಟದಲ್ಲಿ ಎತ್ತುಗಳನ್ನು ಹಿಡಿದ ರೈತರು ಎದ್ದೆನೋ ಬಿದ್ದೇನೋ ಎಂದು ಓಡುತ್ತಿದ್ದರೆ, ಅದನ್ನು ನೋಡಲು ಬಂದಿರುವ ಪಡ್ಡೇ ಹುಡುಗರು ಮತ್ತು ಉಳಿದ ರೈತರುಗಳು ಸಿಳ್ಳೇ ಹೊಡೆಯುತ್ತಾ, ಜೋರಾಗಿ ಕೇಕೆ ಹಾಕುತ್ತಾ ಉತ್ಸಾಹ ತುಂಬುತ್ತಾರೆ. ಯಾವ ಬಣ್ಣದ ಎತ್ತು ಮೊದಲು ಕರಿಹರಿಯುತ್ತೋ ಆ ಬಣ್ಣದ ಬೆಳೆ ಆ ಬಾರಿ ಚೆನ್ನಾಗಿ ಬರುತ್ತದೆ. ಇದರ ಮೇಲೆ ಮುಂಗಾರು ಮತ್ತು ಹಿಂಗಾರು ಬೆಳೆ ಸಮೃದ್ಧವಾಗಿ ಬರುತ್ತದೆ ಎನ್ನುವ ನಂಬಿಕೆ ಆ ಎಲ್ಲಾ ರೈತರದ್ದಾಗಿರುತ್ತದೆ ಎನ್ನುತ್ತಾನೆ ರೈತ ಬಸಪ್ಪ.
-ರೈತರ ಕಷ್ಟ ಸುಖದೊಂದಿಗೆ ಸಮಭಾಗಿಯಾಗಿ ಹೆಗಲಿಗೆ ತಮ್ಮ ಹೆಗಲು ಕೊಟ್ಟು ರೈತನ ಜೀವನಕ್ಕಾಗಿ ತಮ್ಮ ಜೀವ ತೇಯುವ ಮೂಕ ಪ್ರಾಣಿಗಳಾದ ಎತ್ತುಗಳು ರೈತರ ಪಾಲಿಗೆ ದೇವರು ಇದ್ದ ಹಾಗೆ. ಹಬ್ಬಕ್ಕೆ ವಿಶಿಷ್ಟವಾದ ಅಡಿಗೆ ತಯಾರಿಸಿ ಎತ್ತುಗಳ ಗಳಿಗೆ ಹಣ ಬಡಿಸಿದ ನಂತರವೇ ಮನೆ ಮಂದಿ ಊಟ ಮಾಡುತ್ತಾರೆ.- ಹಣಮಂತರಾಯ ದೊರೆ, ಟೋಕಾಪುರ ಗ್ರಾಮದ ರೈತ.ಎತ್ತುಗಳಿಗೆ ಮುತ್ತೈದೆಯರು ಪೂಜೆ ಸಲ್ಲಿಸಿ, ಹಬ್ಬಕ್ಕಾಗಿಯೇ ಹೋಳಿಗೆ, ಶಾವಿಗೆ, ಪಾಯಸ, ಹುಗ್ಗಿ ಸೇರಿದಂತೆ ಇತ್ಯಾದಿ ವಿಶೇಷ ಅಡಿಗೆ ತಯಾರಿಸುತ್ತೇವೆ. ಮನೆಯಲ್ಲಿ ಸುಖ ಶಾಂತಿ ನೆಲೆಸಲು ಮುತ್ತೈದೆಯರಿಗೆ ಉಡಿ ತುಂಬಿ ಕೃತಜ್ಞತೆ ಸಲ್ಲಿಸಲಾಗುತ್ತಿದೆ.
- ಅನ್ನಪೂರ್ಣಮ್ಮ, ರೈತ ಮಹಿಳೆ.