ಸಮಾಧಿ ಒಡೆಯುವ ಮುಸ್ಲಿಂ ಸಮಾಜದ ಕೆಲವರ ಮಾನಸಿಕತೆಯನ್ನು ನಾವು ಸಹಿಸುವುದಿಲ್ಲ, ಕೊಲೆ ಮಾಡಿದ್ದಾಯ್ತು, ಈಗ ಸಮಾಧಿ ಒಡೆಯುವ ಕೃತ್ಯವನ್ನು ಹೇಗೆ ಸಹಿಸಲು ಸಾಧ್ಯ? ಇದಕ್ಕೆ ಮುಸ್ಲಿಂ ಸಮಾಜ ಉತ್ತರ ನೀಡಬೇಕು ಎಂದು ಶಾಸಕ ಎಸ್. ಎನ್. ಚನ್ನಬಸಪ್ಪ ಗುಡುಗಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸಮಾಧಿ ಒಡೆಯುವ ಮುಸ್ಲಿಂ ಸಮಾಜದ ಕೆಲವರ ಮಾನಸಿಕತೆಯನ್ನು ನಾವು ಸಹಿಸುವುದಿಲ್ಲ, ಕೊಲೆ ಮಾಡಿದ್ದಾಯ್ತು, ಈಗ ಸಮಾಧಿ ಒಡೆಯುವ ಕೃತ್ಯವನ್ನು ಹೇಗೆ ಸಹಿಸಲು ಸಾಧ್ಯ? ಇದಕ್ಕೆ ಮುಸ್ಲಿಂ ಸಮಾಜ ಉತ್ತರ ನೀಡಬೇಕು ಎಂದು ಶಾಸಕ ಎಸ್. ಎನ್. ಚನ್ನಬಸಪ್ಪ ಗುಡುಗಿದರು. ಇಲ್ಲಿನ ಊರಗಡೂರು ಬಾಲಕ ಸಂಕೇತ್ ಸಮಾಧಿ ಧ್ವಂಸಗೊಳಿಸಿದ ಘಟನೆ ಹಿನ್ನೆಲೆ ಗುರುವಾರ ಸಂಕೇತ್ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೆ.23ರಂದು ಒಂದು ಘಟನೆ ನಡೀತು. 7 ಜನ ಅಪ್ರಾಪ್ತರು ಬಾಲಕ ಸಂಕೇತ್‌ನನ್ನು ಕೊಲೆಮಾಡಿದರು. ಅವರೆಲ್ಲರೂ ಅಪ್ರಾಪ್ತರು, ನಶೆಯಲ್ಲಿದ್ದರು ಅಂತೆಲ್ಲ ಪ್ರಕರಣಕ್ಕೆ ಇನ್ನೇನೋ ಹೇಳಿ ಹಿಂದೂ ಸಮಾಜವನ್ನು ಸಮಾಧಾನ ಮಾಡಲಾಯಿತು. ಈಗ ನೋಡಿದರೆ ಸಂಕೇತ್‌ನ ಸಮಾಧಿ ಒಡೆದು ಹಾಕಲಾಗಿದೆ. ಮುಸ್ಲಿಂ ಸಮಾಜದ ಕೆಲವರ ಮಾನಸಿಕತೆ ಭಯಾನಕವಾಗಿದೆ ಎಂದು ಕಿಡಿಕಾರಿದರು.ಬಾಲಕ ಸಂಕೇತ್ ಹತ್ಯೆಯಾದಾಗ ಕ್ಯಾಂಡಲ್ ಮಾರ್ಚ್ ಮಾಡಿದ ಮುಸ್ಲಿಂ ಸಮಾಜದವರು ಇಂದು ಉತ್ತರ ಕೊಡಬೇಕಿದೆ. ಸಂಕೇತ್‌ನನ್ನು ನಶೆಯಲ್ಲಿ ಹತ್ಯೆ ಮಾಡಿದವರು ಈಗ ಜೈಲಿನಲ್ಲಿದ್ದಾರೆ. ಈಗ ಸಂಕೇತ್ ಸಮಾಧಿಯನ್ನು ಧ್ವಂಸಗೊಳಿಸಲಾಗಿದೆ. ಹಾಗಾದರೆ ಇವರು ಯಾರು? ಇದೂ ನಶೆಯಲ್ಲಿಯೇ ಮಾಡಲಾಗಿದೆಯಾ? ಇದಕ್ಕೆಲ್ಲ ಮುಸ್ಲಿಂ ಸಮಾಜ ಉತ್ತರ ನೀಡಬೇಕಲ್ಲವೇ? ನಾವಿದನ್ನು ಸಹಿಸಲು ಆಗೋದಿಲ್ಲ ಎಂದರು.
ಇಂತಹ ವಿಕೃತ ಮಾನಸಿಕತೆ ಮುಸಲ್ಮಾನ ಸಮಾಜದ ಕೆಲವರಲ್ಲಿದೆ. ಇದಕ್ಕೆ ಮುಸಲ್ಮಾನ ಸಮಾಜ ಉತ್ತರ ನೀಡಬೇಕು. ಯಾಕೆಂದರೆ ನಾವು ಕೆಲವು ಮುಸ್ಲಿಮರ ಬಗ್ಗೆ ಮಾತನಾಡಿದರೆ ಮುಸ್ಲಿಂ ವಿರೋಧಿಗಳು ಅಂತೆಲ್ಲ ಬಿಂಬಿಸಲಾಗುತ್ತದೆ. ಹಾಗಾದ್ರೆ ಇದನ್ನು ಪ್ರಶ್ನೆ ಮಾಡಬಾರದಾ? ಇದಕ್ಕೆ ಮುಸ್ಲಿಂ ಸಮಾಜ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.ಇಲ್ಲಿ ಕೊಲೆ ಮಾಡಿದವರು ಸಿಕ್ಕಿ ಹಾಕಿಕೊಳ್ಳುತ್ತಾರೆ. ಕೊಲೆ ಮಾಡಿಸಿದವರು ಸಿಕ್ಕಿ ಹಾಕಿಕೊಳ್ಳಲ್ಲ. ಮುಸಲ್ಮಾನ ಸಮಾಜವೇ ನೇರ ಹೊಣೆ. ಬಾಲಕ ಸಂಕೇತ್ ಕುಟುಂಬದವರನ್ನು ನೆಮ್ಮದಿಯಾಗಿ ಇರುವುದಕ್ಕೆ ಬಿಡುತ್ತಿಲ್ಲ. ಮೂರು ದಿನ ಆಗಿದೆ, ಯಾರು ಮಾಡಿದ್ದಾರೆ ಎಂಬುದನ್ನು ಬಂಧಿಸುವುದಿರಲಿ ಪತ್ತೆನೂ ಹಚ್ಚಿಲ್ಲ. ರಕ್ಷಣಾ ಇಲಾಖೆ ಎಚ್ಚೆತ್ತುಕೊಳ್ಳಬೇಕು. ನಾವು ಸುಮ್ನೆ ಕೂರೋದಿಲ್ಲ. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದರು.
ಕುಟುಂಬದ ರಕ್ಷಣೆ ಮಾಡುವವರು ಯಾರು? ರುದ್ರಭೂಮಿಗೆ ಸಿಸಿಟಿವಿ ಕ್ಯಾಮೆರಾ ಹಾಕಬೇಕು, ನಾನೇ ಸ್ವಂತ ಖರ್ಚಿನಲ್ಲಿ ಹಾಕಿಸುತ್ತೇನೆ. ಕಾಂಪೌಂಡ್ ನಿರ್ಮಿಸುವುದಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಶಾಸಕರಾದ ಶಾರದಾ ಪೂರ್ಯಾ ನಾಯ್ಕ್ ಜೊತೆಗೂ ಮಾತನಾಡುತ್ತೇನೆ. ಇದೇ ವೇಳೆ ಸಂಕೇತ್ ಕುಟಂಬದವರ ಬೇಡಿಕೆಗೆ ಪ್ರತಿಕ್ರಿಯಿಸಿದರು.ಪ್ರಕರಣದ ತನಿಖೆ ಮಾಡಿ: ಬೇಕಾದರೆ ಎನ್‌ಐಎ ತನಿಖೆಯಾದರೂ ಮಾಡಿಸಿ, ಹರ್ಷನ ಕೊಲೆಯಾದ ನಂತರ ಶಿವಮೊಗ್ಗದಲ್ಲಿ ಟ್ರಯಲ್ ಬಾಂಬ್ ಬ್ಲಾಸ್ಟ್ ಪತ್ತೆಯಾಗಿದ್ದು, ಬಾಂಬ್ ಬ್ಲಾಸ್ಟ್ ಮಾಡಿದವರು ಶಿವಮೊಗ್ಗದಲ್ಲಿ ಇದ್ದಾರೆ. ಸಮಾಧಿ ಒಡೆದ ಪ್ರಕರಣದ ಕುರಿತು ಆ ಸಮಾಜದವರು ಯಾಕೆ ಪ್ರತಿಕ್ರಿಯೆ ನೀಡುತ್ತಿಲ್ಲ. ಸರ್ಕಾರ ಕೈಕಟ್ಟಿ ಕುಳಿತರೆ ಪ್ರಯೋಜನವಿಲ್ಲ ಎಂದು ಗುಡುಗಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಡಿ. ಮೋಹನ್ ರೆಡ್ಡಿ, ಶ್ರೀನಾಗ್ ಉಪಸ್ಥಿತರಿದ್ದರು. ಈ ಸ್ಮಶಾನದ ಕಣ್ಗಾವಲಿಗೆ ಸಿಸಿ ಕ್ಯಾಮರಾ ಅಳವಡಿಕೆಗೆ ಅನುದಾನ ನೀಡುವುದಾಗಿ ಭರವಸೆ ನೀಡಿದರು.ಕೊಲೆ, ಸಮಾಧಿ ಧ್ವಂಸ ವ್ಯವಸ್ಥಿತ ಸಂಚು: ಕೆ.ಎಸ್. ಈಶ್ವರಪ್ಪ
ಶಿವಮೊಗ್ಗ: ಮುಸ್ಲಿಮರ ಒಂದು ಗುಂಪು ಊರಗಡೂರಿನಲ್ಲಿ ಬಾಲಕ ಸಂಕೇತ್‌ನ ಕೊಲೆ ಮಾಡಿತ್ತು. ಇದೀಗ ಅವನ ಸಮಾಧಿಯನ್ನೂ ಧ್ವಂಸಗೊಳಿಸಿದ್ದು, ಇದನ್ನು ಹಿಂದೂ ಸಮಾಜ ಸಹಿಸಲು ಸಾಧ್ಯವಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.ಗುರುವಾರ ಸೂಳೆಬೈಲ್‌ನ ರುದ್ರಭೂಮಿಯಲ್ಲಿ ಸಂಕೇತ್ ಸಮಾಧಿ ಧ್ವಂಸಗೊಳಿಸಿದ ಜಾಗಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಂಕೇತ್ ಕೊಲೆ ಮತ್ತು ಸಮಾಧಿ ಧ್ವಂಸ ಪ್ರಕರಣ ವ್ಯವಸ್ಥಿತ ಸಂಚು ಆಗಿದೆ. ರಾಜ್ಯದ ಮುಖ್ಯಮಂತ್ರಿ ಮತ್ತು ಗೃಹಮಂತ್ರಿಗಳಿಗೆ ನಾನು ಒತ್ತಾಯ ಮಾಡುವುದೇನೆಂದರೆ ಪರಿಹಾರ ಕೊಟ್ಟ ಮಾತ್ರಕ್ಕೆ ಬಿಡಬಾರದು. ಈ ದೇಶದ್ರೋಹಿ ಮನಸ್ಥಿತಿ ಹೋಗಬೇಕಾದರೆ ಸರ್ಕಾರ ಕೂಡ ಮನಸ್ಥಿತಿ ಬದಲಾಯಿಸಬೇಕು. ಆರ್.ಎಸ್.ಎಸ್. ಮತ್ತು ಹಿಂದೂ ಸಂಘಟನೆಗಳ ವಿರುದ್ಧ ಪೌರುಷದಿಂದ ಮಾತನಾಡಿದ ಮುಖ್ಯಮಂತ್ರಿಗಳು ಈಗ ಯಾಕೆ ತಣ್ಣಗಿದ್ದಾರೆ ಎಂದು ಪ್ರಶ್ನಿಸಿದರು.
ಇದು ವ್ಯವಸ್ಥಿತ ಪಿತೂರಿ: ಮುಸ್ಲಿಂ ಸಮಾಜ ಎಚ್ಚೆತ್ತುಕೊಂಡು ತಮ್ಮ ಸಮಾಜದ ಕಿಡಿಗೇಡಿಗಳನ್ನು ಸರಿ ಮಾಡದಿದ್ದರೆ ಮುಂದೆ ಬಹಳ ತೊಂದರೆ ಅನುಭವಿಸುತ್ತಾರೆ. ರಕ್ಷಣಾಧಿಕಾರಿಗಳ ಬಗ್ಗೆ ನನಗೆ ನಂಬಿಕೆ ಇದೆ. ಈಗಾಗಲೇ ಎರಡು ತಂಡ ರಚಿಸಿ ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಆದರೆ, ಸರ್ಕಾರ ಮನಸ್ಥಿತಿ ಬದಲಾಯಿಸದಿದ್ದರೆ ಇಡೀ ಹಿಂದೂ ಸಮಾಜ ಸರ್ಕಾರದ ವಿರುದ್ಧ ದಂಗೆ ಎದ್ದರೆ ಆಶ್ಚರ್ಯವಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಜಾಗೃತಗೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ನಂತರ ಸಂಕೇತ್ ಮನೆಗೂ ಭೇಟಿ ನೀಡಿ ಪೋಷಕರೊಂದಿಗೆ ಮಾತನಾಡಿದರು. ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು. ಕೆ. ಇ. ಕಾಂತೇಶ್, ಇ. ವಿಶ್ವಾಸ್, ಮೋಹನ್ ಜಾಧವ್, ರಾಜು, ಕುಬೇರಪ್ಪ ಇದ್ದರು.