ಸಾರಾಂಶ
ಕನ್ನಡಪ್ರಭ ವಾರ್ತೆ ಕೊರಟಗೆರೆ ಜಾತಿ ವ್ಯವಸ್ಥೆಯನ್ನು ವಿರೋಧಿಸಿ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಘೋಷಣೆಯ ಮೂಲಕ ಸಮಾಜದಲ್ಲಿ ಕ್ರಾಂತಿಗೆ ನಾಂದಿ ಹಾಡಿದವರು ಸಮಾನತೆಯ ಸಂದೇಶ ಸಾರಿದ ಆಧ್ಯಾತ್ಮಿಕ ನಾಯಕ ಮತ್ತು ಸಮಾಜ ಸುಧಾರಕರಾದ ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದು ಗ್ರೇಡ್೨ ತಹಸೀಲ್ದಾರ್ ರಾಮಪ್ರಸಾದ್ ತಿಳಿಸಿದರು. ಪಟ್ಟಣದ ತಾಲೂಕು ಕಛೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಈಡಿಗ ಸಮುದಾಯ ಏರ್ಪಡಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ದೇವಾಲಯಗಳಿಗೆ ಪ್ರವೇಶ ಸಿಗದೆ ದೂರ ಉಳಿದಿದ್ದ ಧಾರ್ಮಿಕ ಶೋಷಣೆಗೆ ಒಳಗಾದ ವರ್ಗಗಳ ಜನರಿಗಾಗಿಯೇ ದೇವಾಲಯಗಳನ್ನು ನಿರ್ಮಿಸಿಕೊಂಡುವ ಮೂಲಕ ಸಮಾಜದಲ್ಲಿ ಅಸಮಾನತೆಯನ್ನು ತೊಡೆಯಲು ಕ್ರಾಂತ್ರಿಕಾರಕ ಮಾರ್ಗವನ್ನು ಸೃಷ್ಠಿಸಿದ ನಾರಾಯಣ ಗುರುಗಳು ಹಲವು ಪ್ರತಿರೋಧವನ್ನು ಎದುರಿಸಿದರು. ಮಾನವೀಯತೆ ಮಲಗಿ ಮೂಢನಂಬಿಕೆಗಳು ಎದ್ದಿದ್ದ ಕಾಲದಲ್ಲಿ ಮಹಾನ್ ಮನವತಾವಾದಿಯಾಗಿ ಸಮಾಜದ ಕಣ್ಣರಳಿಸಿದ ದಾರ್ಶನಿಕ ಬ್ರಹ್ಮಶ್ರೀ ನಾರಾಯಣ ಗುರು ಶೋಷಿತ ವರ್ಗದವರಿಗೆ ಶಕ್ತಿ ತುಂಬಿದ ಮಹಾನ್ ವ್ಯಕ್ತಿ ಅವರ ಸಂದೇಶವನ್ನು ಜೀವನದೂದ್ದಕ್ಕು ಪ್ರತಿಯೊಬ್ಬರು ಪಾಲಿಸಬೇಕು ಎಂದು ತಿಳಿಸಿದರು. ತಾಲೂಕು ಈಡಿಗ ಸಮಾಜದ ಕಾರ್ಯದರ್ಶಿ ರಾಜಣ್ಣ ಮಾತನಾಡಿ, ಕೇರಳದ ತಿರುವನಂತಪುರ ಸಮೀಪದ ಚಿಂಬಳಂತಿ ಗ್ರಾಮದಲ್ಲಿ ೧೮೫೪ ರಲ್ಲಿ ಶಿಕ್ಷಕರಾಗಿದ್ದ ತಂದೆ ಮಾಡಾನ್ ಆಶಾನ್ ಮತ್ತು ತಾಯಿ ಕುಟ್ಟಿಯಮ್ಮ ದಂಪತಿಗಳ ಮಗನಾಗಿ ಜನಿಸಿ ಚಿಕ್ಕಂದಿನಿಂದಲೇ ಕಲಿಕೆಯಲ್ಲಿ ಚುರುಕುತನ ಹೊಂದಿದ್ದು, ಕಲಿಕೆಯೊ೦ದಿಗೆ ಸಂಸ್ಕೃತ, ತಮಿಳು, ಮಲಯಾಳಿಯನ್ನು ಮತ್ತು ಕಾವ್ಯ ಅಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು. ದೇವರಂತೆ ಬಂದವರು ನಾರಾಯಣಗುರುಗಳು ಜನರಲ್ಲಿ ಭೇದ-ಭಾವವಿಲ್ಲದೆ ಎಲ್ಲರನ್ನೂ ಒಂದಾಗಿ ಕಂಡರು ಶೋಷಿತ ವರ್ಗಕ್ಕೆ ಮಂಗಳೂರಿನ ಕುದ್ರೋಳಿಯ ಶ್ರೀ ಗೋಕರ್ಣನಾಥ ದೇವಸ್ಥಾನವನ್ನು ಸ್ಥಾಪಿಸಿದವರು ನಾರಾಯಣಗುರು, ಕನ್ನಡ ನಾಡಿನೊಂದಿಗೆ ನಾರಾಯಣಗುರುಗಳ ನಂಟು ಹಿರಿದು, ನಾರಾಯಣ ಗುರುಗಳ ಆಧ್ಯಾತ್ಮ ಮತ್ತು ವೈಚಾರಿಕ ಮಾರ್ಗವನ್ನು ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶನ ಎಂದರು. ಕಾರ್ಯಕ್ರಮದಲ್ಲಿ ತಾಲೂಕು ಈಡಿಗ ಸಂಘದ ಉಪಾಧ್ಯಕ್ಷ ಡಾ.ಮಲ್ಲಿಕಾರ್ಜುನ್ ರವರು ಬ್ರಹ್ಮಶ್ರೀ ನಾರಾಯಣಗುರುಗಳ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಈ ಸಂದರ್ಭದಲ್ಲಿ ಸಂಘದ ಖಜಾಂಚಿ ರಾಮಕೃಷ್ಣಯ್ಯ, ಅಶ್ವತ್ಥನಾರಾಯಣ್, ಗೋವಿಂದರಾಜು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ದಾಕ್ಷಾಯಿಣಿ, ನಾಗರತ್ನಮ್ಮ, ಮಂಜುನಾಥ್, ಕಂದಾಯ ಇಲಾಖೆಯ ಆರ್.ಐ ಬಸವರಾಜು ತಿಮ್ಮಾಪುರ, ನಕುಲ್, ಪವನ್‌ಕುಮಾರ್, ರಘು ಸೇರಿದಂತೆ ಇಡಿಗ ಸಮುದಾಯದ ಮುಖಂಡರು, ಮಹಿಳೆಯರು ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.