ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕೃಷ್ಣಾ ಮೇಲ್ದಂಡೆ ಯೋಜನೆಗೆ ಬಾಗಲಕೋಟೆ ಜನ ಬಹುದೊಡ್ಡ ತ್ಯಾಗ ಮಾಡಿದ್ದಾರೆ. ಅವರ ತ್ಯಾಗ ಸ್ಮರಣೀಯವಾಗಿದೆ. ಮುಳುಗಡೆ ಹೊಂದಿರುವ ನಗರದಲ್ಲಿ ಜಾತ್ರೆ, ಪರಂಪರೆಗಳು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹೊಸ ಶಕ್ತಿ ತುಂಬುತ್ತಿದ್ದಾರೆ ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ ಹೇಳಿದರು.ನಗರದ ತರಕಾರಿ ಮಾರುಕಟ್ಟೆ ಆವರಣದಲ್ಲಿ ಗ್ರಾಮ ದೇವತೆ ಜಾತ್ರಾ ಮಹೋತ್ಸವ ಅಂಗವಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜಾತ್ರೆಗಳಿಂದ ಯುವ ಸಮೂಹಕ್ಕೆ ನಮ್ಮ ನೆಲದ ಸಂಸ್ಕೃತಿ, ಇತಿಹಾಸ ಪರಿಚಯವಾಗುತ್ತದೆ ಎಂದರು.ಬಹು ವರ್ಷಗಳಿಂದ ನಿಂತು ಹೋಗಿದ್ದ ಜಾತ್ರೆಗೆ ಚಾಲನೆ ನೀಡಿದ್ದು ಸಂಭ್ರಮ ಮೇಳೈಸುವಂತೆ ಮಾಡಿದೆ. ಯುಕೆಪಿ ಯೋಜನೆಗೆ ಇಲ್ಲಿನ ಜನರ ತ್ಯಾಗ ಸ್ವಾತಂತ್ರ್ಯ ಯೋಧರಿಗೆ ಸಮಾನವಾಗಿದೆ. ಹೊಸ ನಗರದಲ್ಲಿ ಇಂತಹ ವೈಭವ ಮತ್ತೆ ಮರುಕಳಿಸುವಂತೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ವಿಪ ಸದಸ್ಯ ಪಿ.ಎಚ್. ಪೂಜಾರ ಮಾತನಾಡಿ, ಭಾರತವು ಧರ್ಮ, ದೇವರು, ಅಧ್ಯಾತ್ಮ, ಪರಂಪರೆ, ಸಂಸ್ಕೃತಿಯ ಸಮ್ಮಿಲನ. ಜಾತಿ, ಮತ, ಪಂಥ ಮೀರಿದ ಸಂಬಂಧವಿದೆ. ಜಾತ್ರೆ, ಮಹೋತ್ಸವ, ಉತ್ಸವಗಳು ಸಾಕ್ಷೀಕರಿಸುತ್ತಿರುವುದು ಸಂತೋಷದ ವಿಷಯ. ಬಾಗಲಕೋಟೆ ಗ್ರಾಮ ದೇವತೆ ಜಾತ್ರೆ ಮಾದರಿಯಾಗಿದೆ. ಸದನದಲ್ಲಿ ಬಾಗಲಕೋಟೆ ಸಂತ್ರಸ್ತರ ಪರ ಧ್ವನಿ ಎತ್ತಿದ್ದೇನೆ. ಪುನರ್ವಸತಿ ಎಂದರೇ ಕೇವಲ ಮನೆ, ನಿವೇಶನವಲ್ಲ. ಇಲ್ಲಿನ ಸಂಸ್ಕೃತಿ, ಪರಂಪರೆಯು ನವನಗರದಲ್ಲಿ ಪುನರ್ ಸ್ಥಾಪನೆಯಾಗಬೇಕು ಎಂದು ತಿಳಿಸಿದರು.ಅಂಕಲಗಿಯ ಅಡವಿ ಸಿದ್ದೇಶ್ವರ ಸ್ವಾಮೀಜಿ, ಬಿಲ್ ಕೆರೂರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಾತ್ರಾ ಸಮಿತಿ ಅಧ್ಯಕ್ಷ ಬಂಡೇರಾವ ಸರದೇಸಾಯಿ, ಉದ್ಯಮಿಗಳಾದ ಇಂದ್ರಜೀತ ದರ್ಬಾರ, ಪೀರಪ್ಪ ಮ್ಯಾಗೇರಿ, ಅಕ್ಷಯ ಬರಗಿ, ಪತ್ರಕರ್ತ ರವಿರಾಜ ಗಲಗಲಿ, ಸುಧಾ ದೇಸಾಯಿ, ಅಶೋಕ ಲಿಂಬಾವಳಿ, ನಾಗರಾಜ ಹದ್ಲಿ ಇತರರು ಇದ್ದರು.
ರಂಜಿಸಿದ ಕೊನೆ ನಮಸ್ಕಾರ:ಧಾರವಾಡದ ಪತ್ರಕರ್ತ, ಹವ್ಯಾಸ ರಂಗಕರ್ಮಿ ಬಸವರಾಜ ಹೊಂಗಲ ನೇತೃತ್ವದ ತಂಡವು ಶನಿವಾರ ನಡೆಸಿಕೊಟ್ಟ ಕೊನೆ ನಮಸ್ಕಾರ ಹಾಸ್ಯ ಭರಿತ ನಾಟಕವು ನೆರೆದವರನ್ನು ನಕ್ಕು ನಗಿಸಿತು. ಮಹಾಭಾರತದ ದ್ರೌಪದಿ ವಸ್ತ್ರಾಭರಣ ಸನ್ನಿವೇಶ ಆಧಾರಿತ ನಾಟಕವು ಆಕರ್ಷಕವಾಗಿತ್ತು. ಜನರ ಮನಸೂರೆಗೊಂಡಿತು.
ಇಂದು ಉಡಿ ತುಂಬುವ ಕಾರ್ಯಕ್ರಮ: ಬಾಗಲಕೋಟೆಯ ಶ್ರೀ ಗ್ರಾಮ ದೇವಿಯ ಜಾತ್ರೋತ್ಸವದ ಅಂಗವಾಗಿ ಕಡೆ ಮಂಗಳವಾರ ಶ್ರೀ ದ್ಯಾಮವ್ವ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಎಲ್ಲ ಭಕ್ತಾದಿಗಳು ಬೆಳಗ್ಗೆಯಿಂದ ಉಡಿ ತುಂಬುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಗ್ರಾಮ ದೇವಿಯ ದರ್ಶನ ಭಾಗ್ಯ ಪಡೆಯಬೇಕು. ಅಂದು ಸಂಜೆ ಶ್ರೀ ಗ್ರಾಮದೇವಿಯ ಉತ್ಸವದ ಪ್ರಯುಕ್ತ ಕೊಲ್ಹಾಪುರದ ಸ್ವರ ನಿನಾದ ತಂಡದ ವತಿಯಿಂದ ಜಾಗೋ ಹಿಂದೂಸ್ಥಾನಿ ದೇಶಭಕ್ತಿ ಗೀತೆಗಳ ಸಂಗೀತ ಕಾರ್ಯಕ್ರಮ ಜರುಗಲಿದೆ.ಬಾಗಲಕೋಟೆಯ ಹಳೇ ಅಂಚೆ ಕಚೇರಿ ಹತ್ತಿರದ ಕಾಯಿಪಲ್ಲೆ ಬಜಾರ ಆವರಣದಲ್ಲಿರುವ ಭವ್ಯ ವೇದಿಕೆಯಲ್ಲಿ ರಾತ್ರಿ 8 ಗಂಟೆಯಿಂದ ಸಂಗೀತ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ ಎಂದು ಸಮಿತಿಯ ಉಪಾಧ್ಯಕ್ಷರಾದ ಅಶೋಕ ಲಿಂಬಾವಳಿ ಹಾಗೂ ನಾಗರಾಜ ಹದ್ಲಿ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.