ಸಾರಾಂಶ
ಶಶಿಕಾಂತ ಮೆಂಡೆಗಾರ
ಕನ್ನಡಪ್ರಭ ವಾರ್ತೆ ವಿಜಯಪುರಕ್ರೀಡಾ ಕ್ಷೇತ್ರದ ಅಪ್ರತಿಮ ಸಾಧಕರಿವರು. ವಿದ್ಯಾರ್ಥಿಗಳಿಗೆ ಅತ್ಯುತ್ತಮ ದೈಹಿಕ ಕ್ರೀಡಾ ಶಿಕ್ಷಕ ಹಾಗೂ ತರಬೇತುದಾರ. ಕಳೆದ 32 ವರ್ಷಗಳಿಂದ ಕ್ರೀಡಾ ಕ್ಷೇತ್ರದಲ್ಲಿ ತರಬೇತುದಾರರಾಗಿ ಹಾಗೂ ನಿರ್ಣಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಬಸವರಾಜ ನಂದಪ್ಪ ಬಾಗೇವಾಡಿ. ಮೂಲತಃ ವಿಜಯಪುರ ತಾಲೂಕಿನ ಉತ್ನಾಳ ಗ್ರಾಮದವರು. ವಿವಿಧ ದೇಶಿಯ ಹಾಗೂ ವಿದೇಶಿ ಕ್ರೀಡೆಗಳ ತರಬೇತುದಾರರಾಗಿ ಹಾಗೂ ನಿರ್ಣಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಬಸವರಾಜ ಬಾಗೇವಾಡಿ ಕ್ರೀಡಾ ಕ್ಷೇತ್ರದಲ್ಲಿ ಜಿಲ್ಲಾ, ರಾಜ್ಯ, ದಕ್ಷಿಣ ವಲಯ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡಾಪಟುವಾಗಿ ಪದಕ ಪಡೆದಿದ್ದಾರೆ. ಅಲ್ಲದೆ ಮಿನಿ ಓಲಿಂಪಿಕ್ ಕ್ರೀಡಾಕೂಟ ಮತ್ತು ದಸರಾ ಕ್ರೀಡಾಕೂಟ, ದಸರಾ ಸಿಎಂ ಕ್ರೀಡಾಕೂಟ, ಎಸ್‌ಜಿಎಫ್‌ಐ ಕ್ರೀಡಾಕೂಟ, ವಿಶ್ವವಿದ್ಯಾಲಯದ ಕ್ರೀಡಾಕೂಟ, ಖೇಲೋ ಇಂಡಿಯಾ ಕ್ರೀಡಾಕೂಟ, ರಾಜ್ಯಮಟ್ಟದ ಕ್ರೀಡಾಕೂಟ, ದಕ್ಷಿಣ ವಲಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ತರಬೇತುದಾರ ಹಾಗೂ ನಿರ್ಣಾಯಕರಾಗಿಯೂ ಕಾರ್ಯನಿರ್ವಹಿಸಿದ ಅನುಭವ ಇವರದ್ದು.
ಕ್ರೀಡಾ ಸಂಸ್ಥೆಗಳ ಸ್ಥಾಪನೆ:ಬಸವರಾಜ ಬಾಗೇವಾಡಿ ಅವರು ಜಿಲ್ಲೆಗೆ ಮತ್ತು ರಾಜ್ಯಕ್ಕೆ ಅನೇಕ ದೇಶಿಯ ಮತ್ತು ವಿದೇಶಿ ಕ್ರೀಡಾ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಅಲ್ಲದೆ ರಾಜ್ಯ, ರಾಷ್ಟ್ರೀಯ ಪರಿಷತ್ತನ್ನು ಸ್ಥಾಪಿಸಿದ್ದಾರೆ. ಕಳೆದ 32 ವರ್ಷಗಳಿಂದ ವಿವಿಧ ಕ್ರೀಡಾ ತರಬೇತಿಯಲ್ಲಿ ನಿರಂತರ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಅತ್ಯುತ್ತಮ ಕ್ರೀಡಾಪಟು ಹಾಗೂ ತರಬೇತುದಾರರಾಗಿರುವ ಇವರು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ 4 ಪದಕ, ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ 10 ಪದಕ, ದಕ್ಷಿಣ ವಲಯ ಕ್ರೀಡಾಕೂಟದಲ್ಲಿ 3 ಪದಕ, ರಾಷ್ಟ್ರೀಯ ಕ್ರೀಡಾಕೂಟದಲ್ಲಿ 14 ಪದಕ ಪಡೆದಿದ್ದಾರೆ. ಇವರ ಶೈಕ್ಷಣಿಕ ಕ್ಷೇತ್ರದ ಸಾಧನೆಗೆ ಇಲ್ಲಿಯವರೆಗೆ ವಿವಿಧ ಸಂಘ ಸಂಸ್ಥೆಗಳು ಸೇರಿ 3 ಜಿಲ್ಲಾ ಪ್ರಶಸ್ತಿಗಳು,76 ರಾಜ್ಯ ಪ್ರಶಸ್ತಿಗಳು, 38 ರಾಷ್ಟ್ರೀಯ ಪ್ರಶಸ್ತಿಗಳು, 17 ಅಂತಾರಾಷ್ಟ್ರೀಯ ಪ್ರಶಸ್ತಿಗಳು, 12 ವಿಶೇಷ ಪ್ರಶಸ್ತಿಗಳು, 11 ಅಂತರ್ಜಾಲ ಗಿನ್ನೆಸ್ ಪ್ರಶಸ್ತಿಗಳು ಸೇರಿ ಒಟ್ಟು ಒಟ್ಟು 158 ಪ್ರಶಸ್ತಿ ಅರಸಿ ಬಂದಿವೆ.