ಬಿಜೆಪಿ ಸದಸ್ಯರ ಬಹಿಷ್ಕಾರದ ನಡುವೆ ‘ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ-2024 ಅಂಗೀಕಾರ

| N/A | Published : Mar 13 2025, 01:45 AM IST / Updated: Mar 13 2025, 08:19 AM IST

DK Shivakumar

ಸಾರಾಂಶ

ಬಿಜೆಪಿ ಸದಸ್ಯರ ಬಹಿಷ್ಕಾರದ ನಡುವೆ ‘ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ-2024’ಕ್ಕೆ ವಿಧಾನ ಪರಿಷತ್ತಿನಲ್ಲಿ ಬುಧವಾರ ಅಂಗೀಕಾರ ದೊರೆಯಿತು.

 ವಿಧಾನ ಪರಿಷತ್ :  ಬಿಜೆಪಿ ಸದಸ್ಯರ ಬಹಿಷ್ಕಾರದ ನಡುವೆ ‘ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ-2024’ಕ್ಕೆ ವಿಧಾನ ಪರಿಷತ್ತಿನಲ್ಲಿ ಬುಧವಾರ ಅಂಗೀಕಾರ ದೊರೆಯಿತು.

ವಿಧಾನಸಭೆಯಲ್ಲಿ ಮಂಡಿಸಿದಂತೆ ಮತ್ತು ತಿದ್ದುಪಡಿಗಳೊಂದಿಗೆ ವಿಧಾನಸಭೆಯಲ್ಲಿ ಅಂಗೀಕಾರವಾದ ರೂಪದಲ್ಲಿ ಹಾಗೂ ಜಂಟಿ ಪರಿಶೀಲನಾ ಸಮಿತಿ‌ಯ ಶಿಫಾರಸ್ಸಿನಂತೆ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಂಡಿಸಿದರು.

ಸುಮಾರು 3 ತಾಸುಗಳ ಕಾಲ ಮೂರು ಪಕ್ಷಗಳ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಮತಕ್ಕೆ ಹಾಕುವ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿ ಹೊರ ನಡೆದರು. ಸಭಾತ್ಯಾಗದ ನಡುವೆ ವಿಧೇಯಕ್ಕೆ ಅಂಗೀಕಾರ ದೊರೆಯಿತು.

ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಕೆಂಪೇಗೌಡರು ಕಟ್ಟಿದ ಬೆಂಗಳೂರು ವೇಗವಾಗಿ ವಿಸ್ತರಣೆಯಾಗುತ್ತಿರುವ ಕಾರಣ ಬೆಂಗಳೂರು ನಗರ ಸುತ್ತಲಿನ ಹಳ್ಳಿಗಳನ್ನು ಸೇರಿಸಿ ಬಿಬಿಎಂಪಿ ಮಾಡಲಾಗಿದೆ. ಆದರೆ, ಈಗ ಗ್ರೇಟರ್ ಬೆಂಗಳೂರು ಮೂಲಕ ಮತ್ತೆ ಛಿದ್ರಪಡಿಸುವ ಪ್ರಯತ್ನ ನಡೆದಿದೆ. ಈ ಪ್ರಯತ್ನಕ್ಕೆ ನಮ್ಮ ಸಮ್ಮತಿ ಇಲ್ಲ. ಇದನ್ನು ವಿರೋಧಿಸುತ್ತೇವೆ ಎಂದರು.

ಜೆಡಿಎಸ್ ಸದಸ್ಯ ಟಿ.ಎ.ಶರವಣ ಮಾತನಾಡಿ, ಗ್ರೇಟರ್ ಬೆಂಗಳೂರು ಮೂಲಕ 7 ಪಾಲಿಕೆಗಳನ್ನು ಮಾಡುವುದು ಒಂದು ರೀತಿಯಲ್ಲಿ ಒಡೆದಾಳುವ ನೀತಿಯಂತೆ. ಈಗಾಗಲೇ ನಗರದ ವಿವಿಧ ಇಲಾಖೆಗಳ ನಡುವೆ ಹೊಂದಾಣಿಕೆ ಇಲ್ಲ. ವಿಭಜನೆ ಮಾಡಿದರೆ ಇಲಾಖೆಗಳ ನಡುವೆ ಸಂಯೋಜನೆ ಇಲ್ಲದೇ ಆಡಳಿತ ಇನ್ನಷ್ಟು ದಾರಿತಪ್ಪುತ್ತದೆ ಎಂದು ಹೇಳಿದರು.

ಅನುದಾನ ತಾರತಮ್ಯ ಸಾಧ್ಯತೆ:

ಬಿಜೆಪಿ ಸದಸ್ಯ ಸಿ.ಟಿ.ರವಿ ಮಾತನಾಡಿ, ಒಂದು ಪಾಲಿಕೆಯಲ್ಲಿ ಬಿಜೆಪಿ, ಮತ್ತೊಂದರಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದರೆ ಸರ್ಕಾರದಿಂದ ಅನುದಾನ ನೀಡುವಲ್ಲಿ ತಾರತಮ್ಯ ಆಗಬಹುದು. ಒಬ್ಬ ಶಾಸಕರ ಟೀಕೆಯನ್ನು ಸಹಿಸದೆ ಅನುದಾನ ತಡೆ ಹಿಡಿದು ಹೆಮ್ಮೆಯಿಂದ ಹೇಳಿಕೊಂಡ ನೀವು, ಬೇರೆ ಪಕ್ಷದ ಮೇಯರ್ ಇರುವ ಪಾಲಿಕೆಯನ್ನು ಸಹಿಸಿಕೊಳ್ಳುತ್ತೀರಾ? ಒಂದೇ ನಗರದಲ್ಲಿ ಏಳು ಪಾಲಿಕೆಗಳ ರಚನೆಯು ರಾಜಕೀಯ ತಾರತಮ್ಯಕ್ಕೆ ಕಾರಣವಾಗುತ್ತದೆ. ಅಲ್ಲದೇ, ದೊಡ್ಡ ಯೋಜನೆಗಳ ಜಾರಿಗೆ ವಿಶೇಷ ಅಂಗಸಂಸ್ಥೆ (ಎಸ್‌ಪಿವಿ) ರಚಿಸುವುದರಿಂದ ಜನರಿಂದ ಆಯ್ಕೆಯಾದ ಪಾಲಿಕೆ ಸದಸ್ಯರ ಅಧಿಕಾರ ಮೊಟಕುಗೊಳ್ಳುತ್ತದೆ ಎಂದರು.

ಜೆಡಿಎಸ್ ಸದಸ್ಯ ಭೋಜೇಗೌಡ ಮಾತನಾಡಿ, ಬೆಂಗಳೂರಿಗೆ ಅತಿ ಗಣ್ಯರು, ಜಾಗತಿಕ ನಾಯಕರು ಬಂದಾಗ ಆಹ್ವಾನ ನೀಡಲು ಮೇಯರ್ ಹೋಗುತ್ತಾರೆ. ಆದರೆ, ಒಂದಕ್ಕಿಂತ ಹೆಚ್ಚು ಮೇಯರ್‌ಗಳು ಇದ್ದಾಗ ಯಾರನ್ನು ಕಳುಹಿಸುತ್ತಿರಾ? ಎಂದು ಪ್ರಶ್ನಿಸಿದರು.

ಬೆಂಗ್ಳರೂ ಛಿದ್ರ ಮಾಡಲ್ಲ,  ಒಂದಾಗಿರುತ್ತದೆ: ಡಿಕೆಶಿ

ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರದ ಭವಿಷ್ಯದ ಅಭಿವೃದ್ಧಿಯ ದೃಷ್ಟಿಯಿಂದ ಗ್ರೇಟರ್ ಬೆಂಗಳೂರು ರಚಿಸಲಾಗುತ್ತಿದೆ. ಛಿದ್ರಗೊಳಿಸುವ ಯಾವುದೇ ಉದ್ದೇಶವಿಲ್ಲ. ಅದಕ್ಕೆ ಅವಕಾಶವನ್ನು ನೀಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಬೆಂಗಳೂರನ್ನು ವ್ಯವಸ್ಥಿತವಾಗಿ ವಿಸ್ತರಣೆ ಮಾಡಬೇಕು. ಆಡಳಿತ ವಿಕೇಂದ್ರೀಕರಣದ ಮೂಲಕ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಆಡಳಿತದಲ್ಲಿ ಜನರ ಪಾಲ್ಗೊಳ್ಳುವಿಕೆ, ಪಾರದರ್ಶಕತೆ, ದಕ್ಷತೆ ತರಲಾಗುತ್ತದೆ. ಅಭಿವೃದ್ಧಿ ವಿಚಾರದಲ್ಲಿ ಪಾಲಿಕೆ ಸದಸ್ಯರ ಅಧಿಕಾರ ಮೊಟಕು ಆಗುವುದಿಲ್ಲ. ಆರ್ಥಿಕವಾಗಿ ದುರ್ಬಲವಾಗಿರುವ ಪಾಲಿಕೆಗಳಿಗೆ ಸರ್ಕಾರದಿಂದ ಅನುದಾನ ಒದಗಿಸಲಾಗುತ್ತದೆ ಎಂದು ಹೇಳಿದರು.