ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ:ದೇಶದ ಪ್ರಪ್ರಥಮ ಗ್ರಿನ್ ಕಾರಿಡಾರ್‌ಗೆ ಈಗ ಬೆಳಕಿನ ಕೊರತೆಯಾಗಿದೆ. ಉದ್ಘಾಟನೆಗೂ ಮುನ್ನವೇ ಬೆಳಕ್ಕಿಲ್ಲದಂತಾಗಿದೆ. ಹೀಗಾಗಿ ಮೊಬೈಲ್ ಟಾರ್ಚ್ ಹಿಡಿದುಕೊಂಡು ಜನ ವಾಕಿಂಗ್ ಮಾಡುತ್ತಿದ್ದಾರೆ.
ಇದು ಸ್ಮಾರ್ಟ್‌ಸಿಟಿ ಯೋಜನೆಯಡಿ ಕೈಗೊಂಡಿರುವ ಗ್ರೀನ್ ಕಾರಿಡಾರ್ ಪರಿಸ್ಥಿತಿ. ಗ್ರೀನ್ ಕಾರಿಡಾರ್ 2020ರಿಂದ ಪ್ರಾರಂಭವಾಗಿರುವ ಯೋಜನೆ ಇದು. ರಾಜಕಾಲುವೆಯನ್ನು ರಾಜನಂತೆ ಸಿಂಗರಿಸುವ ದೇಶದ ಮೊದಲು "ಗ್ರೀನ್ ಮೊಬಿಲಿಟಿ ಕಾರಿಡಾರ್ " ಇದು.ರಾಜಕಾಲುವೆ:
ರಾಜಕಾಲುವೆ ಎಂದರೆ ಗಬ್ಬುವಾಸನೆ, ಸಾಂಕ್ರಾಮಿಕ ರೋಗಗಳ ತಾಣ ಎಂಬುದು ಮಾಮೂಲು. ಇದರ ಸಮೀಪ ಹೋಗಲು ಜನತೆ ಹಿಂಜರಿಯುತ್ತಿದ್ದರು. ಉಣಕಲ್ ಕೆರೆಯಿಂದ ಗಬ್ಬೂರು ಕ್ರಾಸ್‌ವರೆಗೂ ಬರೋಬ್ಬರಿ 11 ಕಿಲೋ ಮೀಟರ್ ರಾಜಕಾಲುವೆ ಇದೆ. ಮಳೆ ಬಂದಾಗ ಬರೋಬ್ಬರಿ 18 ಕಡೆಗಳಲ್ಲಿ ಪ್ರವಾಹ ಉಂಟಾಗುತ್ತಿತ್ತು. ಸುತ್ತಮುತ್ತಲಿನ ನಾಗರಿಕರು ಪ್ರತಿವರ್ಷ ಮಳೆಗಾಲದಲ್ಲಿ ತೊಂದರೆ ಅನುಭವಿಸುತ್ತಿದ್ದರು. 2019ರಲ್ಲಂತೂ ಕೆಲ ಕಡೆಗಳಲ್ಲಿ ಅಕ್ಷರಶಃ ನಡುಗಡ್ಡೆಯಂತಾಗಿತ್ತು. ಮಳೆಗಾಲದಲ್ಲಿ ರಾಜಕಾಲುವೆಯಿಂದ ಪ್ರವಾಹ ಎದುರಾಗದಂತೆ ನೋಡಿಕೊಳ್ಳಬೇಕು. ಜತೆಗೆ ರಾಜಕಾಲುವೆಯನ್ನು ಸುಂದರ ತಾಣವನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ ಗ್ರೀನ್ ಕಾರಿಡಾರ್ ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು. ಇದರ ಪರಿಣಾಮವಾಗಿ ಸುಂದರ ತಾಣವೇನೋ ಆಗಿದೆ. ಹೊರಗಿನಿಂದ ನೋಡಿದರೆ ಪ್ರೇಕ್ಷಣೀಯ ಸ್ಥಳವೂ ಆದಂತಾಗಿದೆ. ಅಬ್ಬಾ ಎಷ್ಟೊಂದು ಚಂದ ಎಂದೆನಿಸದೇ ಇರದು.11 ಕಿಮೀ ಉದ್ದದ ರಾಜಕಾಲುವೆಯಲ್ಲಿ ಮೊದಲಿಗೆ 0.65 ಕಿಮೀ (650 ಮೀಟರ್) ಪ್ರಾಯೋಗಿಕವಾಗಿ ಕೈಗೆತ್ತಿಕೊಳ್ಳಲಾಗಿತ್ತು. ಎರಡನೆಯ ಹಂತದಲ್ಲಿ 4.9 ಕಿಮೀ ಉದ್ದದ ಕಾರಿಡಾರ್ ನಿರ್ಮಾಣ ನಡೆಯುತ್ತಿದೆ. ಮಾರ್ಚ್ ಅಂತ್ಯಕ್ಕೆ ಮುಗಿಯಲಿದೆ.ಇದರಿಂದ ಒಟ್ಟು 5.5 ಕಿಮೀ ಗ್ರೀನ್ ಕಾರಿಡಾರ್ ಆದಂತಾಗಿದೆ. ರಾಜಕಾಲುವೆಗೆ ಎತ್ತರದ ತಡೆಗೋಡೆ ನಿರ್ಮಿಸಲಾಗಿದೆ.
ಮಹಾನಗರ ಪಾಲಿಕೆಯ ಅಕ್ಕಪಕ್ಕದ ಜಾಗೆ ಬಳಸಿ ಎರಡು ಬದಿಗಳಲ್ಲಿ 2.5 ಮೀಟರ್ ಅಗಲದ ವಾಕಿಂಗ್ ಪಾಥ್, 2.5 ಮೀಟರ್ ಅಗಲದ ಸೈಕಲ್ ಪಾಥ್ ನಿರ್ಮಿಸಲಾಗಿದೆ. ಎರಡು ಭಾಗದ ಸಂಪರ್ಕಕ್ಕೆ ಪಾದಚಾರಿ ಸೇತುವೆ ನಿರ್ಮಿಸಲಾಗುತ್ತಿದೆ. ಕಾರಿಡಾರ್ ಮಧ್ಯದಲ್ಲಿ ಧ್ಯಾನ, ಓಪನ್ ಜಿಮ್, ಉದ್ಯಾನವನ ನಿರ್ಮಿಸಲಾಗುತ್ತಿದೆ. ಜತೆಗೆ ಒಂದೆರಡು ಕಡೆಗಳಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯ ಸೈಕಲ್ ಸವಾರಿ ಸ್ಟ್ಯಾಂಡ್ ಮಾಡಲಾಗಿದೆ.ಈಗ ಬೆಳಕು ಇಲ್ಲ:
ಇಲ್ಲಿನ ವ್ಯವಸ್ಥೆ ನೋಡಿದರೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಅಬ್ಬಾ ರಾಜಕಾಲುವೆ ಇದ್ದರೆ ಹುಬ್ಬಳ್ಳಿಯಲ್ಲಿನ ರಾಜಕಾಲುವೆಯಂತಿರಬೇಕು ಎಂದೆನಿಸುತ್ತಿತ್ತು. ವಾಕಿಂಗ್ ಪಾಥ್‌ಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ 20 ಮೀಟರ್‌ಗೊಂದು ಎಲ್‌ಇಡಿ ಬಲ್ಬ್ ಹಾಕಲಾಗಿದೆ. ಅವು ಬೆಳಗಿದ್ದು ಬರೀ ಒಂದೆರಡು ತಿಂಗಳು ಮಾತ್ರ. ಎಲ್ಲೋ ಒಂದೆರಡು ಕಡೆಗಳಲ್ಲಿ ಮಾತ್ರ ಬೆಳಗುತ್ತಿವೆ. ಇನ್ನುಳಿದಂತೆ ಎಲ್‌ಇಡಿ ಬಲ್ಬ್‌ಗಳೆಲ್ಲ ಬಂದ್ ಆಗಿವೆ.ಹೀಗಾಗಿ ಇಲ್ಲಿ ವಾಕಿಂಗ್ ಬರುವ ಜನರೆಲ್ಲರೂ ಮೊಬೈಲ್ ಟಾರ್ಚ್ ಹಿಡಿದು ವಾಕಿಂಗ್ ಮಾಡುತ್ತಿದ್ದಾರೆ.ಇನ್ನು ತಡೆಗೋಡೆ ಮೇಲೆ ಗಿಡ ಬಳ್ಳಿ ಬೆಳೆಸುವ ಮೂಲಕ ದುರ್ವಾಸನೆ ಬೀರದಂತೆ ನೋಡಿಕೊಳ್ಳುವ ಯೋಚನೆಯಿತ್ತು. ಅದು ಆರಂಭದಲ್ಲಿ ಆಗಿದೆ. ಆದರೆ ಅದು ಕೂಡ ಇದೀಗ ಹಾಳಾಗಿದೆ. ಬಳ್ಳಿಗಳೆಲ್ಲ ಕತ್ತರಿಸಿಕೊಂಡು ನೆಲಕ್ಕೆ ಬಿದ್ದಿವೆ. ಹೀಗಾಗಿ ಮತ್ತೆ ರಾಜಕಾಲುವೆ ಅಲ್ಲಲ್ಲಿ ದುರ್ವಾಸನೆ ಬೀರುವಂತಾಗಿದೆ.
ಮೊದಲ ಹಾಗೂ ಎರಡನೆಯ ಹಂತದ ಕಾಮಗಾರಿಗೆ ಬರೋಬ್ಬರಿ ₹130 ಕೋಟಿ ಖರ್ಚಾಗಿದೆ. 3ನೆಯ ಹಂತದ ಕಾಮಗಾರಿಗೆ ಮತ್ತೆ ₹30 ಕೋಟಿ ಬಿಡುಗಡೆಯಾಗಿದೆ. ಉದ್ಘಾಟನೆಗೂ ಮುನ್ನ ಹೋಗಲಿ, ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಎಲ್‌ಇಡಿ ಬಲ್ಬ್‌ಗಳೆಲ್ಲ ತಮ್ಮ ಕಾರ್ಯ ಮರೆತಂತಾಗಿದೆ.ಇನ್ನಾದರೂ ನಗರಕ್ಕೆ ಕಿರೀಟದಂತಿರುವ ಗ್ರೀನ್ ಮೊಬಿಲಿಟಿ ಕಾರಿಡಾರ್‌ನ್ನು ಸರಿಯಾಗಿ ನಿರ್ವಹಿಸಬೇಕು. ಎಲ್‌ಇಡಿ ಬಲ್ಬ್ ಅಥವಾ ಸೋಲಾರ್ ಲೈಟ್ ಸಮರ್ಪಕವಾಗಿ ಅಳವಡಿಸಿ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂಬುದು ನಾಗರಿಕರ ಒತ್ತಾಯ.
ಕಳೆದ ಎರಡ್ಮೂರು ತಿಂಗಳಿನಿಂದಲೂ ಗ್ರಿನ್ ಕಾರಿಡಾರ್‌ನಲ್ಲಿನ ಎಲ್‌ಇಡಿ ಲೈಟ್ಸ್‌ಗಳು ಬೆಳಗುತ್ತಿಲ್ಲ. ಅಲ್ಲೊಂದು ಇಲ್ಲೊಂದು ಅಷ್ಟೇ ಬೆಳಗುತ್ತಿವೆ. ಹೀಗಾಗಿ ಇದು ಅಕ್ಷರಶಃ ಕಗ್ಗತ್ತಲ್ಲೇ ಇದೆ. ನಾವು ಮೊಬೈಲ್‌ನ ಟಾರ್ಚ್ ಬಳಸಿಕೊಂಡು ವಾಕಿಂಗ್ ಮಾಡುತ್ತೇವೆ ನೋಡಿ ಎನ್ನುತ್ತಾರೆ ವಾಯುವಿಹಾರಿ ಮಂಜುನಾಥ ಪಾಟೀಲ.