ಕ್ಷಯರೋಗ ಮುಕ್ತ ಜಿಲ್ಲೆಯನ್ನಾಗಿಸಲು ಕಾರ್ಯನಿರ್ವಹಿಸಿ

| Published : Feb 21 2024, 02:02 AM IST

ಕ್ಷಯರೋಗ ಮುಕ್ತ ಜಿಲ್ಲೆಯನ್ನಾಗಿಸಲು ಕಾರ್ಯನಿರ್ವಹಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯನ್ನು ಕ್ಷಯರೋಗ ಮುಕ್ತವನ್ನಾಗಿಸಲು ವಿವಿಧ ಕಾರ್ಯ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲೆಯನ್ನು ಕ್ಷಯರೋಗ ಮುಕ್ತವನ್ನಾಗಿಸಲು ವಿವಿಧ ಕಾರ್ಯ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಕ್ಷಯರೋಗ ಫೋರಂ, ಇನ್ನಿತರ ರೋಗಗಳ ಸಮನ್ವಯ ಸಮಿತಿ ಹಾಗೂ ಕ್ಷಯಮುಕ್ತ ಗ್ರಾಪಂ ಘೋಷಣೆ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈಗಾಗಲೇ ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡು ಕೆಲವು ಕ್ಷಯಮುಕ್ತ ಗ್ರಾಮಗಳನ್ನ ಗುರುತಿಸಲಾಗಿದೆ. ನಿಗದಿಪಡಿಸಿರುವ ಮಾನದಂಡಗಳನ್ನು ಅನುಸರಿಸಿ ೨೦೨೫ರ ವೇಳೆಗೆ ಜಿಲ್ಲೆಯ ೧೩೦ ಗ್ರಾಮ ಪಂಚಾಯಿತಿಗಳನ್ನು ಕ್ಷಯರೋಗ ಮುಕ್ತವನ್ನಾಗಿಸಲು ವ್ಯಾಪಕವಾಗಿ ಹಾಗೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಗ್ರಾಪಂ ಸದಸ್ಯರಿಗೆ, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಿಗೆ ಕ್ಷಯರೋಗ ನಿರ್ಮೂಲನೆ ಸಂಬಂಧ ತರಬೇತಿ ನೀಡಿ ಗುರಿ ಸಾಧಿಸಬೇಕೆಂದು ತಿಳಿಸಿದರು. ಆರೋಗ್ಯ ಇಲಾಖೆ ಮತ್ತು ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯ ತಜ್ಞ ವೈದ್ಯರು, ತಾಲೂಕು ಆರೋಗ್ಯ ಅಧಿಕಾರಿಗಳು, ಕ್ಷಯರೋಗ ಪತ್ತೆ ಚಿಕಿತ್ಸೆ ಮತ್ತು ಅನುಸರಣೆ ಸಮಾಲೋಚನೆಗಳನ್ನು ಆಗಿಂದಾಗೆ ಮಾಡಬೇಕು. ಮಾಸಿಕ ಸಭೆ ನಡೆಸಿ ರೋಗ ತಡೆಗೆ ಕೈಗೊಳ್ಳಲಾಗಿರುವ ಕ್ರಮಗಳನ್ನು ಪರಿಶೀಲಿಸಬೇಕು ಎಂದರು. ಕ್ಷಯರೋಗಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಚಿಕಿತ್ಸೆ ಪೂರ್ಣಗೊಳಿಸಿ ಗುಣಮುಖರನ್ನಾಗಿಸಬೇಕು. ತಾಲೂಕು ಮಟ್ಟದಲ್ಲಿ ನಿರಂತರ ತಪಾಸಣೆ, ಚಿಕಿತ್ಸೆ, ಔಷಧ ವಿಧಾನಗಳ ಮೂಲಕ ಗಮನಹರಿಸಬೇಕು. ಕ್ಷಯರೋಗಿಗಳಲ್ಲಿ ಇರುವ ಮಧುಮೇಹ, ಮದ್ಯಪಾನ, ಧೂಮಪಾನ, ತಂಬಾಕು ಸೇವನೆ ವ್ಯಸನಗಳನ್ನು ಗುರುತಿಸಿ ಇವರಿಗೆ ಆಪ್ತ ಸಮಾಲೋಚನೆ, ಚಿಕಿತ್ಸೆಗಳ ಮೂಲಕ ವ್ಯಸನದಿಂದ ಮುಕ್ತಗೊಳಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕ್ಷಯರೋಗಿಗಳಿಗೆ ಅಪೌಷ್ಠಿಕತೆ ನೀಗಿಸುವ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಬೇಕಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಬೆಂಬಲವನ್ನು ಪಡೆಯಬೇಕಿದೆ. ಕ್ಷಯರೋಗಿಗಳನ್ನು ದತ್ತು ತೆಗೆದುಕೊಂಡು ಅವರನ್ನು ಸಂಪೂರ್ಣ ಗುಣಮುಖರಾಗುವವರೆಗೆ ಅವಶ್ಯವಿರುವ ಚಿಕಿತ್ಸೆ, ಪೌಷ್ಠಿಕ ಆಹಾರ, ಇನ್ನಿತರ ಬೆಂಬಲ ನೆರವು ನೀಡಬೇಕಿದೆ. ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ವಿಸ್ತೃತವಾಗಿ ಚರ್ಚಿಸಿ ಕ್ರಿಯಾಯೋಜನೆ ರೂಪಿಸಬೇಕು. ಮುಂದಿನ ೩ ತಿಂಗಳೊಳಗೆ ಮತ್ತೆ ಕ್ಷಯರೋಗ ಫೋರಂ ಸಭೆಯನ್ನು ಕರೆದು ಪ್ರಗತಿ ಪರಿಶೀಲಿಸಲಾಗುವುದು ಎಂದು ಹೇಳಿದರು. ಇದೇ ವೇಳೆ ಖನಿಜ ಪ್ರತಿಷ್ಠಾನ ವತಿಯಿಂದ ಕ್ಷಯರೋಗ ಪತ್ತೆ ಹಚ್ಚುವ ಅತ್ಯಾಧುನಿಕ ತಪಾಸಣಾ, ಎಕ್ಸರೇ ಉಪಕರಣಗಳನ್ನುಡೀಸಿ ಶಿಲ್ಪಾನಾಗ್ ಜಿಲ್ಲಾ ಆರೋಗ್ಯ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಜಿಲ್ಲೆಯ ಗಣಿ, ಕ್ವಾರಿ, ಕ್ರಶರ್, ಗ್ರಾನೈಟ್ ಮಾಲೀಕರ ನೆರವಿನಿಂದ ೧೦೦ ಕ್ಷಯರೋಗಿಗಳಿಗೆ ಕಳೆದ ೪ ತಿಂಗಳಿಂದ ಪ್ರೋಟಿನ್ ಪೌಡರ್ ನೀಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರಿಗೆ ನಿಕ್ಷಯ ಮಿತ್ರ ಪ್ರಶಂಸನಾ ಪತ್ರವನ್ನು ಡೀಸಿ ನೀಡಿದರು. ಕೊಳ್ಳೇಗಾಲ ತಾಲೂಕು ಆರೋಗ್ಯ ಅಧಿಕಾರಿ ಡಾ. ಗೋಪಾಲ್, ಹನೂರು ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಕಾಶ್‌ ಕ್ಷಯರೋಗಿಗಳಿಗೆ ನೀಡುತ್ತಿರುವ ಬೆಂಬಲ ಹಿನ್ನೆಲೆಯಲ್ಲಿ ಪ್ರಶಂಸನಾ ಪತ್ರವನ್ನು ನೀಡಲಾಯಿತು. ಜಿಪಂ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಚಿದಂಬರ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ರವಿಕುಮಾರ್, ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಡಾ.ಮಂಜುನಾಥ್, ಜಿಲ್ಲಾ ಸರ್ಜನ್ ಡಾ. ಕೃಷ್ಣಪ್ರಸಾದ್, ಸ್ಥಾನಿಕ ವೈದ್ಯಾಧಿಕಾರಿ ಡಾ. ಮಹೇಶ್, ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರ ಡಾ. ಕಿರಣ್, ಸಂಗೀತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಪದ್ಮಜ, ವಕೀಲ ಪುಟ್ಟಸ್ವಾಮಿ, ಆರೋಗ್ಯ ಇಲಾಖೆಯ ಕಾರ್ಯಕ್ರಮ ಅಧಿಕಾರಿ ಡಾ. ಚಂದ್ರಶೇಖರ್, ಡಾ. ಗಿರಿಧರ್, ಡಾ. ರಾಜೇಶ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ಸ್ವಯಂ ಸೇವಾ ಸಂಸ್ಥೆಗಳಾದ ಚೈತನ್ಯ ನೆಟ್ ವರ್ಕ್ ಸ್ನೇಹ ಜ್ಯೋತಿ ಇನ್ನಿತರ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.