ಸಾರಾಂಶ
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸುಂಟಿಕೊಪ್ಪ ಪಟ್ಟಣದ ಹೃದಯ ಭಾಗದಲ್ಲಿರುವ ಪೆಟ್ರೋಲ್ ಬಂಕ್ ನಿವೇಶನದಲ್ಲಿ ಕಾಮಗಾರಿ ವೇಳೆ ಅಸ್ಥಿಪಂಜರಗಳ ಅವಶೇಷಗಳು ಪತ್ತೆಯಾಗಿವೆ.ಇಲ್ಲಿ ಹೊಸ ಟ್ಯಾಂಕ್ ಅಳವಡಿಸಲೆಂದು ಜೇಸಿಬಿಯಿಂದ ಆಳವಾದ ಗುಂಡಿ ಕೊರೆಯಲಾಗುತ್ತಿತ್ತು, ಮಣ್ಣನ್ನು ತೆಗೆಯುತ್ತಿದ್ದಾಗ ಹಲವು ದಶಕಗಳ ಹಿಂದೆ ಹೂಳಲಾಗಿದ್ದ ಮೃತದೇಹ ತಲೆ ಬುರುಡೆ ಹಾಗೂ ತುಂಡು ತುಂಡಾಗಿದ್ದ ಅಸ್ಥಿಪಂಜರದ ಮೂಳೆಗಳು ದೊರೆತಿವೆ. ದಶಕಗಳ ಹಿಂದೆ ಅಂದರೆ ಬ್ರಿಟಿಷರ ಕಾಲದಲ್ಲಿ ಈ ಪ್ರದೇಶ ಸ್ಮಶಾನವಾಗಿತ್ತು ಎನ್ನಲಾಗಿದೆ. ಇಲ್ಲಿ ಕ್ರೈಸ್ತ ಸಮುದಾಯದ ಸ್ಮಶಾನ ಅಸ್ತಿತ್ವದಲ್ಲಿತ್ತು ಎಂದು ಕಂದಾಯ ದಾಖಲೆಗಳಿಂದ ತಿಳಿದುಬಂದಿದೆ. ಈ ಸ್ಮಶಾನ ಅಂದಿನ ಕಾಲಘಟ್ಟದಲ್ಲಿ ಮಡಿಕೇರಿಯ ಸಂತ ಮೈಕಲ್ ಚರ್ಚ್ ಅಧೀನಕ್ಕೊಳಪಟ್ಟಿತ್ತು.
ಸುಂಟಿಕೊಪ್ಪದಲ್ಲಿ ದೇವಾಲಯ ನಿರ್ಮಾಣಗೊಂಡ ನಂತರ ಮಾದಾಪುರ ರಸ್ತೆಯಲ್ಲಿ ನೂತನ ನಿವೇಶನ ಖರೀದಿಸಿ ಕ್ರೈಸ್ತ ಸಮಾಧಿಯನ್ನು ಸ್ಥಳಾಂತರಿಸಲಾಯಿತು. ಸುಂಟಿಕೊಪ್ಪ ಹೃದಯ ಭಾಗದಲ್ಲಿರುವ ಖಾಲಿ ಜಾಗದಲ್ಲಿ 1950ರಲ್ಲಿ ಪೆಟ್ರೋಲ್ ಬಂಕ್ ಆರಂಭಿಸಲಾಯಿತು. ಇಂದಿಗೂ ಪೆಟ್ರೋಲ್ ಬಂಕ್ ಕಾರ್ಯಚರಿಸುತ್ತಿದ್ದು ಹೊಸ ಟ್ಯಾಂಕ್ ಅಳವಡಿಸುವ ಸಲುವಾಗಿ ಜೇಸಿಬಿ ಯಂತ್ರದ ಮೂಲಕ ಅಳವಾದ ಗುಂಡಿ ಕೊರೆಯುತ್ತಿದ್ದ ಸಂದರ್ಭ ಹಳೆಯ ತಲೆ ಬರುಡೆ ಹಾಗೂ ಅಸ್ಥಿಪಂಜರದ ಮೂಳೆಗಳು ಗೊಚರಿಸಿದ ವೇಳೆ ಸಿಬ್ಬಂದಿ ಅಚ್ಚರಿಗೊಳಗಾಗಿದ್ದಾರೆ.ಕಾನೂನುಬಾಹಿರ ಖಾಸಗಿ ಕ್ಲಿನಿಕ್, ಜೌಷಧಿ ಅಂಗಡಿಗಳಿಗೆ ಬೀಗ:
ಸುಂಟಿಕೊಪ್ಪ ಪಟ್ಟಣದ ಕಾನೂನು ಬಾಹಿರವಾಗಿ ನಡೆಸುತ್ತಿದ್ದ ಖಾಸಗಿ ಕ್ಲಿನಿಕ್ ಹಾಗೂ ಜೌಷಧಿ ಅಂಗಡಿಗಳಿಗೆ ಆರೋಗ್ಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರವಾನಗಿ ಹೊಂದಿಲ್ಲದ ಕಾರಣ ಮಳಿಗೆಯನ್ನು ಮುಚ್ಚಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.ಆಸ್ಪತ್ರೆ ರಸ್ತೆಯಲ್ಲಿ ಇತ್ತೀಚೆಗೆ ನೂತನವಾಗಿ ಆರಂಭಗೊಂಡಿದ್ದ ಖಾಸಗಿ ಮೆಡಿಕಲ್ ಸೆಂಟರ್ ಹಾಗೂ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಕಾಂಪ್ಲೆಕ್ಸ್‌ನಲ್ಲಿ ಕ್ಲಿನಿಕ್ ಹಾಗೂ ಮೆಡಿಕಲ್ ಕಾರ್ಯಾಚರಿಸುತ್ತಿವೆ. ಇವು ಸಂಬಂಧಿಸಿದ ಇಲಾಖೆಗಳಿಂದ ಪರವಾನಗಿ ಪಡೆಯದಿದ್ದ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್ ಹಾಗೂ ಸೋಮವಾರಪೇಟೆ ತಾಲೂಕು ಆರೋಗ್ಯ ಅಧಿಕಾರಿ ಹಿಂದೂದಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿದರು.ಪರಿಶೀಲನೆ ನಡೆಸಿದಾಗ ಅಧಿಕೃತ ದೊರೆಯದ ಹಿನ್ನಲೆ ಆ ಮಳಿಗೆಗಳಿಗೆ ಬೀಗ ಜಡಿದು ವಶಕ್ಕೆ ಪಡೆದುಕೊಂಡರು. ಈ ಸಂದರ್ಭ ಮಾತನಾಡಿದ ಡಾ.ಆನಂದ್ ಅವರು ಕರ್ನಾಟಕದ ಎಲ್ಲಾ ಖಾಸಗಿ ವೈಧಕೀಯ ಸಂಸ್ಥೆಗಳು ಆನ್‌ಲೈನ್ ಮೂಲಕ ಕೆಪಿಎಂಇ ಕಾಯ್ದೆ ಪ್ರಕಾರ ನೊಂದಣಿಗೊಳ್ಳಬೇಕು. ಅನಂತರ ಇಲಾಖೆಯಿಂದ ಪರಿಶೀಲನೆ ನಡೆಸಿ ಅವರಿಗೆ ಪರವಾನಗಿ ಅನುಮತಿ ಪತ್ರ ನೀಡಲಾಗುತ್ತದೆ. ಆದರೆ ಸುಂಟಿಕೊಪ್ಪದಲ್ಲಿ ಕಾರ್ಯಾಚರಿಸುತ್ತಿದ್ದ ಖಾಸಗಿ ಕ್ಲಿನಿಕ್ ಸರ್ಕಾರದ ಗಮನಕ್ಕೆ ತರದೆ ರೋಗಿಗಳಿಗೆ ಚಿಕಿತ್ಸೆ ನೀಡುವುದು ಜೌಷಧಿ ವಿತರಿಸುತ್ತಿರುವುದು ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ಈ ಖಾಸಗಿ ಮಳಿಗೆಗಳನ್ನು ವಶಕ್ಕೆ ಪಡೆಯಲಾಗಿದೆ. ಕೆಪಿಎಂಇ ಕಾಯ್ದೆ ಪ್ರಕಾರ ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಸಭೆ ನಡೆಸಿ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.