ಸಾರಾಂಶ
ಮನುವಾದವನ್ನು ತಂದು ಸಂವಿಧಾನ ಮುಗಿಸುವ ಕುತಂತ್ರ ನಡೆಸುತ್ತಿರುವ ಬಿಜೆಪಿ, ಆರೆಸ್ಸೆಸ್‌ನ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸದೇ ಇದ್ದಲ್ಲಿ ದೇಶದಲ್ಲಿ ಪ್ರಜಾಪ್ರಭುತ್ವ ಇರಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಕನ್ನಡಪ್ರಭ ವಾರ್ತೆ ಬೀದರ್
ನಾನು ಪ್ರಚಾರಪ್ರಿಯ ಅಲ್ಲ. ಆದರೆ ಪ್ರಧಾನಿ ಮೋದಿ ಪ್ರಚಾರಕ್ಕಾಗಿ ಮುಗಿಬೀಳುತ್ತಾರೆ. ರೈಲಿನ ಹಸಿರು ಧ್ವಜ ತೋರಿಸಲೂ ಮುಂದೆ ನಿಲ್ಲುತ್ತಾರೆ. ಮನುವಾದವನ್ನು ತಂದು ಸಂವಿಧಾನ ಮುಗಿಸುವ ಕುತಂತ್ರ ನಡೆಸುತ್ತಿರುವ ಬಿಜೆಪಿ, ಆರೆಸ್ಸೆಸ್‌ನ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸದೇ ಇದ್ದಲ್ಲಿ ದೇಶದಲ್ಲಿ ಪ್ರಜಾಪ್ರಭುತ್ವ ಇರಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.ಮಂಗಳವಾರ ನಗರದ ನೆಹರು ಕ್ರೀಡಾಂಗಣದಲ್ಲಿ ಅಭಿಮಾನಿಗಳು ಆಯೋಜಿಸಿದ್ದ ಅಭಿನಂದನಾ ಸಮಾರಂಭಧಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ನಾಂದೇಡ್-ಬೆಂಗಳೂರು ರೈಲಿನ ಸಮಯ ಬದಲಾವಣೆ ಬದಲು ಹೊಸ ರೈಲು ಆರಂಭಿಸಿದೆ, ಬೀದರ್ ಕಲಬುರಗಿ ಮಾರ್ಗ ಪೂರ್ಣಗೊಳಿಸಿದೆ, ಹೈದರಾಬಾದ್‌ನಿಂದ ಹುಬ್ಬಳ್ಳಿ ರೈಲು ಆರಂಭಿಸಿದೆ. ಸೋಲಾಪುರದಿಂದ ಬೆಂಗಳೂರಿಗೆ ರೈಲು ನೀಡಿದೆ. ಹೀಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದರೂ ಪ್ರಚಾರಗಿಟ್ಟಿಸಿಕೊಳ್ಳುವ ತವಕಕ್ಕೆ ಬೀಳಲಿಲ್ಲ ಎಂದರು.
ಕಲಂ 371ಜೆ ಆಗಬಾರದೆಂಬ ನಿಲುವು ಮಾಜಿ ಉಪಪ್ರಧಾನಿ ಎಲ್.ಕೆ.ಆಡ್ವಾಣಿ ಅವರದ್ದಾಗಿತ್ತು. ಇದೇ ಸಂದರ್ಭದಲ್ಲಿ ಎದುರಾದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಸೋನಿಯಾ ಗಾಂಧಿ ನನಗೆ ಸೂಚಿಸಿದಾಗ ನಾನು ಕಲಂ 371ಜೆ ತಿದ್ದುಪಡಿ ಮಾಡಿಕೊಡುವ ಭರವಸೆ ನೀಡಿದರೆ ಮಾತ್ರ ಸ್ಪರ್ಧಿಸುವುದಾಗಿ ಹೇಳಿದ್ದೆ. ಕೊನೆಗೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಸಂಸತ್ತಿನಲ್ಲಿ ಎಲ್ಲರ ಸಹಕಾರದಿಂದ ತಿದ್ದುಪಡಿ ಅಂಗೀಕರಿಸಿದೆ ಎಂದು ಮಾಹಿತಿ ನೀಡಿದರು.ಇದೇ ವೇಳೆ ಕಾಂಗ್ರೆಸ್‌ನಿಂದ ಆಯ್ಕೆಯಾಗಿ ಹೋದವರು ಸಾಮಾಜಿಕ ಕಳಕಳಿಯ ತತ್ವ-ಸಿದ್ಧಾಂತ ಮರೆತು ದುಡ್ಡು, ಅಧಿಕಾರದ ಆಸೆ ಮತ್ತು ಅಸೂಯೆಯಿಂದ ಬಿಜೆಪಿ ಜೊತೆ ಸೇರಿ ನಮ್ಮ ಸರ್ಕಾರ ಬೀಳುವಂತಾಗಿವೆ. ಕರ್ನಾಟಕ, ಮಧ್ಯಪ್ರದೇಶ, ಮಣಿಪುರ, ಗೋವಾಗಳಲ್ಲಿ ಇಂಥ ಸನ್ನಿವೇಶ ಕಂಡಿದ್ದೇನೆ ಎಂದು ಆರೋಪಿಸಿದರು.