ಸಾರಾಂಶ
ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಕೊಡಮಾಡುವ ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿಗೆ ತಾಲೂಕಿನ ಎಚ್.ಬ್ಯಾಡರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಭಾಜನವಾಗಿದೆ.
ಮಧುಸೂದನ ಸಾಯಿ ಅವರಿಂದ ಪ್ರಶಸ್ತಿ ಸ್ವೀಕರಿಸಿದ ಮುಖ್ಯಶಿಕ್ಷಕಿ ಪ್ರೇಮಾಕೃಷ್ಣ
ಚನ್ನಪಟ್ಟಣ: ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಕೊಡಮಾಡುವ ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿಗೆ ತಾಲೂಕಿನ ಎಚ್.ಬ್ಯಾಡರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಭಾಜನವಾಗಿದೆ.ಮುದ್ದೇನಹಳ್ಳಿಯಲ್ಲಿ ಇತ್ತೀಚೆಗೆ ಟ್ರಸ್ಟ್‌ನ ಸಂಸ್ಥಾಪಕ ಸದ್ಗುರು ಮಧುಸೂದನ ಸಾಯಿ ಅವರ ೪೫ನೇ ಜನ್ಮದಿನದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕಿ ಪ್ರೇಮಾಕೃಷ್ಣ ಅವರು ಸದ್ಗುರು ಮಧುಸೂದನ ಸಾಯಿ ಅವರಿಂದ ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿ ಸ್ವೀಕರಿಸಿದರು.
ಪ್ರಶಸ್ತಿ ಸ್ವೀಕರಿಸಿದ ಸಂತಸ ಹಂಚಿಕೊಂಡ ಮುಖ್ಯಶಿಕ್ಷಕಿ ಪ್ರೇಮಾಕೃಷ್ಣ ಅವರು, ನಮ್ಮ ಶಾಲೆಯ ಹಸಿರು ವಾತಾವರಣ, ಕಲಿಕಾ ಕ್ರಮ, ಸ್ವಚ್ಛ ಪರಿಸರ ಪರಿಶೀಲಿಸಿದ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ರಾಜ್ಯದ ೧೨೦ ಶಾಲೆಗಳ ಪೈಕಿ ನಮ್ಮ ಶಾಲೆಯನ್ನು ಗುರುತಿಸಿ ಹಸಿರು ನೈರ್ಮಲ್ಯ ಪ್ರಶಸ್ತಿ ನೀಡಿದೆ. ಈ ಹಸಿರಿನಂಗಳದಲ್ಲಿ ವಿದ್ಯಾರ್ಥಿಗಳು, ಅಡುಗೆ ಸಿಬ್ಬಂದಿ, ಸಹ ಶಿಕ್ಷಕರ ಪಾತ್ರವೂ ಪ್ರಮುಖವಾಗಿದ್ದು, ಇದು ಒಟ್ಟಾರೆ ನಮ್ಮ ಶಾಲೆಗೆ ಸಂದ ಗೌರವ. ಎಸ್‌ಡಿಎಂಸಿ ಸಮಿತಿ ನಮಗೆ ಒತ್ತಾಸೆಯಾಗಿ ನಿಂತಿದೆ ಎಂದು ಸಂಭ್ರಮ ವ್ಯಕ್ತಪಡಿಸಿದರು.ಬಿಇಒ ಅಭಿನಂದನೆ: ಬೆಟ್ಟದ ತಪ್ಪಲಿನಲ್ಲಿ ಗುರುಕುಲದಂತೆ ಕಾಣುವ ಎಚ್.ಬ್ಯಾಡರಹಳ್ಳಿ ಸರ್ಕಾರಿ ಶಾಲೆಯ ಸ್ವಚ್ಛ, ಸುಂದರ, ಹಸಿರು ವಾತಾವರಣ ಎಂತಹವರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಈ ನಿಟ್ಟಿನಲ್ಲಿ ಹಸಿರು ನೈರ್ಮಲ್ಯ ಪ್ರಶಸ್ತಿ ಪಡೆದ ತಾಲೂಕಿನ ಏಕೈಕ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಎಚ್.ಬ್ಯಾಡರಹಳ್ಳಿ ಶಾಲೆಯ ಮುಖ್ಯ ಶಿಕ್ಷಕಿ ಪ್ರೇಮಾ ಹಾಗೂ ಸಿಬ್ಬಂದಿ ಅಭಿನಂದನೆಗೆ ಅರ್ಹರಾಗಿದ್ದಾರೆ ಎಂದು ಬಿಇಒ ಬಿ.ಎನ್.ಮರೀಗೌಡ ಶ್ಲಾಘಿಸಿದ್ದಾರೆ.