ಆಯುಕ್ತರಿಂದ ಪೊಲೀಸ್‌ ಸಿಬ್ಬಂದಿಗೆ ಶುಭಾಶಯ ಪತ್ರ

| Published : Jan 01 2025, 01:32 AM IST

ಆಯುಕ್ತರಿಂದ ಪೊಲೀಸ್‌ ಸಿಬ್ಬಂದಿಗೆ ಶುಭಾಶಯ ಪತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಹಳೆ ವರ್ಷದ ಸಾಧನೆಗಳನ್ನು ನೆನೆದು ಹೊಸ ವರ್ಷದಲ್ಲಿ ತಂತ್ರಜ್ಞಾನ, ಜನಪರ ಕಾಳಜಿ ಹಾಗೂ ಸಮಪರ್ತಿತ ಸೇವಾ ಮನೋಭಾವದೊಂದಿಗೆ ಹೆಜ್ಜೆ ಹಾಕೋಣ ಎಂದು ನಗರ ಪೊಲೀಸ್ ಆಯುಕ್ತರು ತಮ್ಮ ಸಿಬ್ಬಂದಿ ವರ್ಗಕ್ಕೆ ಶುಭ ಕೋರಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹಳೆ ವರ್ಷದ ಸಾಧನೆಗಳನ್ನು ನೆನೆದು ಹೊಸ ವರ್ಷದಲ್ಲಿ ತಂತ್ರಜ್ಞಾನ, ಜನಪರ ಕಾಳಜಿ ಹಾಗೂ ಸಮಪರ್ತಿತ ಸೇವಾ ಮನೋಭಾವದೊಂದಿಗೆ ಹೆಜ್ಜೆ ಹಾಕೋಣ ಎಂದು ನಗರ ಪೊಲೀಸ್ ಆಯುಕ್ತರು ತಮ್ಮ ಸಿಬ್ಬಂದಿ ವರ್ಗಕ್ಕೆ ಶುಭ ಕೋರಿದ್ದಾರೆ.

ನಗರದ ಪ್ರತಿ ಸಿಬ್ಬಂದಿಗೆ ಹೊಸ ವರ್ಷದ ಶುಭ ಕೋರಿ ಗ್ರೀಟಿಂಗ್ ಕಳುಹಿಸಿರುವ ಆಯುಕ್ತರು, ಈ ವರ್ಷವೂ ಸಹ ಅಬಲರಿಗೆ ನೆರವಾಗುವ ಮೂಲಕ ಹೊಸ ವರ್ಷವನ್ನು ಸ್ವಾಗತ ಕಾರ್ಯಕ್ರಮವನ್ನು ಸಾರ್ಥಕವಾಗಿಸಲು ಮುಂದಾಗಿದ್ದಾರೆ. ಕಳೆದ ಬಾರಿ ಆ್ಯಸಿಡ್ ದಾಳಿ ಸಂತ್ರಸ್ತೆಯರು, ಅನಾಥಾಶ್ರಮಗಳಲ್ಲಿ ವಯೋವೃದ್ಧರು ಹಾಗೂ ಬುದ್ಧಿಮಾಂಧ್ಯ ಮಕ್ಕಳ ಜತೆ ಹೊಸ ವರ್ಷವನ್ನು ಆಯುಕ್ತರು ಸೇರಿದಂತೆ ಬೆಂಗಳೂರು ಪೊಲೀಸರು ಆಚರಿಸಿದ್ದರು.

21 ಸಾವಿರ ಗ್ರೀಟಿಂಗ್ಸ್‌ಗಳು

ನಮ್ಮ ಬೆಂಗಳೂರಿನ ಶಾಂತಿ, ಸುರಕ್ಷತೆ ಮತ್ತು ಸಮಾನತೆಯನ್ನು ಕಾಪಾಡುವ ದೆಸೆಯಲ್ಲಿ ಶ್ರಮಿಸುತ್ತಿರುವ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗೆ ಹೊಸ ವರ್ಷದ ಶುಭಾಶಯಗಳು. ಹೊಸ ವರ್ಷವು ಹೊಸ ಆಶಯಗಳು, ಉತ್ಸಾಹ ಮತ್ತು ಅವಕಾಶಗಳನ್ನು ತರುತ್ತದೆ. ನಿಮ್ಮ ಶ್ರಮ, ತ್ಯಾಗ ಮತ್ತು ಧ್ಯೇಯವೇ ನಮ್ಮ ನಗರವನ್ನು ದೇಶದ ಅತಿ ಸುರಕ್ಷಿತ ನಗರಗಳಲ್ಲಿ ಒಂದಾಗಿಸಲು ಸಹಾಯಿಸಿದೆ ಎಂದು ಆಯುಕ್ತರು ನೆನೆದಿದ್ದಾರೆ.

ಮಹಿಳೆ ಮತ್ತು ಮಕ್ಕಳ ಸುರಕ್ಷತೆ, ಡ್ರಗ್ಸ್ ನಿಯಂತ್ರಣ, ಸೈಬರ್ ಅಪರಾಧ ತಡೆ, ಜನ ಸಂಪರ್ಕ, ಪೊಲೀಸ್ ಠಾಣೆಗಳ ನಿರ್ವಹಣೆ ಹಾಗೂ ಸಂಚಾರ ನಿರ್ವಹಣೆಯಲ್ಲಿ ಉತ್ತಮ ಸಾಧನೆ ಮಾಡಿದ್ದೇವೆ. ಹೊಸ ವರ್ಷದಲ್ಲಿ ತಂತ್ರಜ್ಞಾನ, ಜನಪರ ಕಾಳಜಿ ಮತ್ತು ಸಮರ್ಪಿತಾ ಮನೋಭಾವದೊಂದಿಗೆ ಹೊಸ ಸಾಧನೆಗಳೆಡೆಗೆ ಗಮನ ಹರಿಸೋಣ. ಬೆಂಗಳೂರಿನ ಪ್ರತಿಯೊಬ್ಬ ನಾಗರಿಕನಿಗೆ ನ್ಯಾಯ, ಶಾಂತಿ ಮತ್ತು ಸುರಕ್ಷತೆಯನ್ನು ಒದಗಿಸಲು ಪ್ರತಿಜ್ಞೆ ಮಾಡೋಣ ಎಂದು ಶುಭ ಕೋರಿದ್ದಾರೆ.