ಗಾರ್ಮೆಂಟ್ಸ್ ಮಹಿಳಾ ನೌಕರರ ಕುಂದುಕೊರತೆ ವಿಚಾರಣೆ

| Published : Feb 04 2025, 12:30 AM IST

ಸಾರಾಂಶ

ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹಳಷ್ಟು ಮಹಿಳೆಯರು ಕೆಲಸಕ್ಕಾಗಿ ಗೂಡ್ಸ್ ಅಟೋಗಳಲ್ಲಿ ತೆರಳುತ್ತಿದ್ದು, ಇದು ನಿಯಮ ಬಾಹಿರವಾಗಿದೆ. ಯಾವುದಾದರೂ ಅಪಘಾತವಾದಲ್ಲಿ ವಿಮೆ ಹಣ ಕೂಡ ಸಿಗುವುದಿಲ್ಲ. ಇದರ ಬಗ್ಗೆ ನೌಕರರು ಜಾಗೃತಿ ವಹಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಮದ್ದೂರು ತಾಲೂಕಿನ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಹಿ ಎಕ್ಸ್‌ಪೋರ್ಟ್ ಸೇರಿದಂತೆ ಇನ್ನಿತರ ಗಾರ್ಮೆಂಟ್ಸ್‌ಗಳಿಗೆ ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಮತ್ತು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಭೇಟಿ ನೀಡಿ ನೌಕರರ ಕುಂದುಕೊರತೆ ವಿಚಾರಿಸಿದರು.

ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹಳಷ್ಟು ಮಹಿಳೆಯರು ಕೆಲಸಕ್ಕಾಗಿ ಗೂಡ್ಸ್ ಅಟೋಗಳಲ್ಲಿ ತೆರಳುತ್ತಿದ್ದು, ಇದು ನಿಯಮ ಬಾಹಿರವಾಗಿದೆ. ಯಾವುದಾದರೂ ಅಪಘಾತವಾದಲ್ಲಿ ವಿಮೆ ಹಣ ಕೂಡ ಸಿಗುವುದಿಲ್ಲ. ಇದರ ಬಗ್ಗೆ ನೌಕರರು ಜಾಗೃತಿ ವಹಿಸುವಂತೆ ತಿಳಿಸಿದರು.

ಮಂಡ್ಯ ಬಸ್ ನಿಲ್ದಾಣದಿಂದ ನೌಕರರು ತೆರಳಲು ಅನುಕೂಲವಾಗುವಂತೆ ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿದ್ದು, ಚಾಲನೆ ಸಹ ನೀಡಲಾಯಿತು. ವಿವಿಧ ಕೈಗಾರಿಕೆ ಹಾಗೂ ಗಾರ್ಮೆಂಟ್ಸ್ ನಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳೆಯರೊಂದಿಗೆ ಚರ್ಚಿಸಿ ಕೆಲಸ ನಿರ್ವಹಿಸುತ್ತಿರುವ ಸ್ಥಳದಲ್ಲಿ ಮಹಿಳೆಯರಿಗೆ ಭದ್ರತೆ, ಸರಿಯಾದ ಸಮಯಕ್ಮೆ ಸಂಬಳ ಮತ್ತು ಪಿಎಫ್ ದೊರೆಯುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡರು. ಕೆಲಸ ನಿರ್ವಹಿಸುತ್ತಿರುವ ಮಹಿಳೆಯರಿಗೆ ಹೆರಿಗೆ ರಜೆ, ಹಾಗೂ ಅವರಿಗೆ ಪುಟ್ಟ ಮಕ್ಕಳು ಇದ್ದಲ್ಲಿ ಅಂಗನವಾಡಿ ವ್ಯವಸ್ಥೆ ಇರುವ ಬಗ್ಗೆ ಮಾಹಿತಿ ಸಂಗ್ರಹಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಸಾರಿಗೆ ಸಂಸ್ಥೆ ಜಿಲ್ಲಾ ನಿಯಂತ್ರಕ ನಾಗರಾಜ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಜಾನಪದ ಮೇಳದಲ್ಲಿ ನಾಳೆ ನೂರಾರು ಕಲಾವಿದರಿಂದ ಕಲಾ ಪ್ರದರ್ಶನ

ಮೇಲುಕೋಟೆ:

ಚೆಲುವನಾರಾಯಣಸ್ವಾಮಿ ಜಾನಪದ ಜಾತ್ರೆ, ರಥಸಪ್ತಮಿ ಮಹೋತ್ಸವ ಅಂಗವಾಗಿ ಫೆ.5 ರಂದು ಹಮ್ಮಿಕೊಂಡಿರುವ 26 ನೇ ವರ್ಷದ ರಾಜ್ಯ ಮಟ್ಟದ ಜಾನಪದ ಕಲಾಮೇಳದಲ್ಲಿ 800ಕ್ಕೂ ಹೆಚ್ಚುಕಲಾವಿದರು ವಿವಿಧ ಕಲಾ ಪ್ರದರ್ಶನಗಳನ್ನು ನೀಡಲಿದ್ದಾರೆ.

ಸ್ಥಾನೀಕಂ ನಾಗರಾಜ ಅಯ್ಯಂಗಾರ್ ಸಾಂಸ್ಕೃತಿಕ ವೇದಿಕೆ ವತಿಯಿಂದ ನಡೆಯುವ ಕಲಾ ಮೇಳದಲ್ಲಿ 60 ಜಾನಪದ ಕಲಾತಂಡಗಳ ಜೊತೆಗೆ 800 ಮಂದಿ ಕಲಾವಿದರು ಅಂದು ಮುಂಜಾನೆ ಚೆಲುವನಾರಾಯಣಸ್ವಾಮಿ ದೇವಾಲಯದ ಸುತ್ತ ಜಾನಪದ ಜಾತ್ರೆ ನಡೆಸಲಿದ್ದಾರೆ.

ಕಲಾ ಮೇಳದಲ್ಲಿ ತಮಟೆ, ನಗಾರಿ, ಚಂಡೆಗಳ ನೀನಾದ, ಗಾರುಡಿಗೊಂಬೆಗಳ ನರ್ತನ, ಕೇರಳದ ಚೆಂಡೆಮೇಳ, ಮಾರೇಹಳ್ಳಿಯ ಚಿಲಿಪಿಲಿಗೊಂಬೆ, ಕೊತ್ತತ್ತಿಯ ಮರಗಾಲು ಕುಣಿತ, ಚಿಕ್ಕಮಗಳೂರಿನ ಹುಲಿವೇಷ, ಕೀಲುಕುದುರೆ, ಕರಗದನೃತ್ಯ, ಮೈಸೂರುನಗಾರಿ, ಹುಬ್ಬಳ್ಳಿಯ ಜಗ್ಗಲಿಕೆಮೇಳ, ಸಾಂಬಾಳ್‌ನೃತ್ಯ, ಲಕ್ಷ್ಮೀಸಾಗರದ ನಾಸಿಕ್‌ಡೋಲ್, ಹಾಸನದ ಕರಡಿಮಜಲು, ಮಂಡ್ಯಜಿಲ್ಲೆಯ ನಂದಿಕಂಬ, ಪಟಾಕುಣಿತ, ಗಾರುಡಿಗೊಂಬೆ, ಹುಲಿವೇಷ, ವೀರಗಾಸೆ, ಕೋಲಾಟ, ಡೊಳ್ಳುಕುಣಿತ, ಜಾಂಜ್‌ಮೇಳ, ಸೋಮನಕುಣಿತ, ಚಕ್ರಾದಿಬಳೆ, ಖಡ್ಗ ಪವಾಡ, ವೀರಭದ್ರನ ಕುಣಿತ, ಗಾರುಡಿ ಗೊಂಬೆಗಳು, ಶಾಲಾ ಮಕ್ಕಳ 101 ಕಳಶ, ವೀರಮಕ್ಕಳಕುಣಿತ, ಕಂಸಾಳೆ, ನಾದಸ್ವರ, ಚಂಡೆನಗಾರಿ, ಜಡೆ ಕೋಲಾಟ, ಭಾಗವಂತಿಕೆ ಮೇಳ, ದಾಸಯ್ಯರ ದರ್ಶನ, ಮಹಿಳಾ ಡೊಳ್ಳು, ರಾಮನಗರದ ಯಕ್ಷಗಾನಗೊಂಬೆಗಳು, ಕೋಳಿನೃತ್ಯ, ಕರಡಿ ಕುಣಿತ ಸೇರಿದಂತೆ ಗ್ರಾಮೀಣ ಸಂಸ್ಕೃತಿ ಅನಾವರಣಗೊಳಿಸುವ ಕರ್ನಾಟಕದ ಪ್ರಮುಖ ಜಾನಪದ ಕಲಾಪ್ರಕಾರಗಳ ಬಹುತೇಕ ತಂಡಗಳು ಭಾಗವಹಿಸುತ್ತಿವೆ.

ಪಾಂಡವಪುರ ಜಿಜೆಸಿ ಮಕ್ಕಳಬ್ಯಾಂಡ್ ಜಕ್ಕನಹಳ್ಳಿ ಸರ್ಕಾರಿ ಪ್ರೌಢಶಾಲೆ ಬಳಿಘಟ್ಟ, ಅಮೃತಿ, ಮೇಲುಕೋಟೆ ವಿವಿಧಶಾಲೆ ಮಕ್ಕಳು ಸಹ ಭಾಗವಹಿಸಿ ಪ್ರತಿಭೆ ಅನಾವರಣ ಮಾಡಲಿದ್ದಾರೆ ಎಂದು ಕಲಾಮೇಳದ ಸಂಘಟಕರಾದ ಸೌಮ್ಯಸಂತಾನಂ, ಕಲಾವಿದ ಕದಲಗೆರೆ ಶಿವಣ್ಣಗೌಡ ತಿಳಿಸಿದ್ದಾರೆ.

ಮಹಿಳಾ ಕಲಾತಂಡಗಳು:

ಈ ವರ್ಷ ಕಲಾಮೇಳದಲ್ಲಿ ಮಹಿಳಾ ಕಲಾತಂಡಗಳಿಂದ ಮಹಿಳಾಚಂಡೆ, ಕೋಲಾಟ, ಯಕ್ಷಗಾನ ವೈಭವ, ಮಹಿಳಾ ಡೊಳ್ಳುಕುಣಿತ, ಮಹಿಳಾ ವೀರಗಾಸೆ, ಮಹಿಳಾ ಕೋಲಾಟ ವಿದ್ಯಾರ್ಥಿನಿಯರ ಕಳಸ ತಂಡ ಹೀಗೆ 200 ಕ್ಕೂ ಹೆಚ್ಚು ಮಹಿಳಾಕಲಾವಿದರು ಉತ್ಸವದಲ್ಲಿ ಭಾಗವಹಿಸಲಿದ್ದಾರೆ.

ಇದರ ಜೊತೆಗೆ ಸ್ವರ್ಣಲೇಪಿತ ಸೂರ್ಯಮಂಡಲದಲ್ಲಿ ಸ್ವಾಮಿ ರಥಸಪ್ತಮಿ ಉತ್ಸವ, ವನಿತೆಯರಿಂದ ರಂಗವಲ್ಲಿ ಸೇವೆ,

ಬೀದಿಬದಿ ಕಲಾವಿದ ನಾಗರಾಜುರಿಂದ ದೇವರಚಿತ್ರ ರಚನೆ, ರಾಜಗೋಪುರ ಮತ್ತು ದೇಗುಲದ ಆವರಣಕ್ಕೆ ದೀಪಾಲಂಕಾರ,

ಉತ್ಸವ ಬೀದಿಗಳಿಗೆ ತಳಿರು ತೋರಣ ಮತ್ತು ರಂಗವಲ್ಲಿ ಚಿತ್ತಾರ, ವಿವಿಧ ಶಾಲಾಮಕ್ಕಳಿಂದಲೂ ಪ್ರತಿಭಾ ಪ್ರದರ್ಶನ ಜರುಗಲಿದೆ.