ಸಾರಾಂಶ
ಯೋಜನೆಯಡಿ ಮನೆ ಮನೆಗೆ ತೆರಳಿ ಬಿಪಿ, ಶುಗರ್ ಹಾಗೂ ಮಾನೋವ್ಯಾಧಿಗಳ ಬಗ್ಗೆ ತಪಾಸಣೆ ನಡೆಸಿ ಔಷಧಿ ವಿತರಣೆ ಮಾಡಲಾಗುವುದು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಪುತ್ತೂರು
ಪ್ರತಿಯೊಬ್ಬರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಗೃಹ ಆರೋಗ್ಯ ಯೋಜನೆ’ಯನ್ನು ಕೋಲಾರದಲ್ಲಿ ಪ್ರಯೋಗಿಕವಾಗಿ ಅನುಷ್ಠಾನಗೊಳಿಸಿ ಯಶಸ್ವಿಯಾಗಿದೆ. ಮುಂದಿನ ಫೆಬ್ರವರಿ ತಿಂಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು. ಈ ಯೋಜನೆಯಡಿ ಮನೆ ಮನೆಗೆ ತೆರಳಿ ಬಿಪಿ, ಶುಗರ್ ಹಾಗೂ ಮಾನೋವ್ಯಾಧಿಗಳ ಬಗ್ಗೆ ತಪಾಸಣೆ ನಡೆಸಿ ಔಷಧಿ ವಿತರಣೆ ಮಾಡಲಾಗುವುದು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಅವರು ಪುತ್ತೂರು ಸರ್ಕಾರಿ ಆಸ್ಪತ್ರೆಯ ಬಿ.ಪಿ.ಎಚ್ ಲ್ಯಾಬ್ ಕಟ್ಟಡ ಹಾಗೂ ಇತರ ಕಾಮಗಾರಿಗಳಿಗೆ ಮತ್ತು ಪುತ್ತೂರು ತಾಲೂಕಿನ ಹಿರೇಬಂಡಾಡಿ, ಬಡಗನ್ನೂರು, ಕರ್ನೂರು, ಕೆಮ್ಮಿಂಜೆ ಆರೋಗ್ಯ ಉಪಕೇಂದ್ರಗಳ ಕಟ್ಟಡ ಕಾಮಗಾರಿಗಳಿಗೆ ಶನಿವಾರ ಶಿಲಾನ್ಯಾಸ ನೆರವೇರಿಸಿ ನಗರದ ಪುರಭವನದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಇಷ್ಟೊಂದು ದೊಡ್ಡ ಮೊತ್ತ ಬಂದಿರುವುದು ಇಲ್ಲಿನ ಇತಿಹಾಸದಲ್ಲೇ ಪ್ರಥಮ. ಪುತ್ತೂರಿನ ಅಭಿವೃದ್ಧಿ ಹಾಗೂ ಯುವಜನತೆಯ ಕೈಗೆ ಉದ್ಯೋಗ ನೀಡುವುದು ನಮ್ಮ ಕಲ್ಪನೆಯಾಗಿದೆ ಎಂದರು.ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್.ಗಟ್ಟಿ, ಮಂಗಳೂರು ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಜಿಲ್ಲಾ ಕುಷ್ಟರೋಗ ನಿಯಂತ್ರಣ ಅಧಿಕಾರಿ ಡಾ. ಸುದರ್ಶನ್ ಸಿ.ಎಂ., ಪುತ್ತೂರು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಆಶಾಜ್ಯೋತಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಬಿಂಧ್ಯಾ ನಾಯಕ್ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಆರ್. ತಿಮ್ಮಯ್ಯ ಸ್ವಾಗತಿಸಿದರು. ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ವಂದಿಸಿದರು. ಶಿಕ್ಷಕ ಆದಿತ್ಯ ಹೆಬ್ಬಾರ್ ನಿರೂಪಿಸಿದರು.