ಕುಷ್ಟಗಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಲ್ಲಿ ತಾಲೂಕಿನಲ್ಲಿ 1358 ಮೃತ ಫಲಾನುಭವಿಗಳು ಪತ್ತೆಯಾಗಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಡಿಪಿಒ ಕಚೇರಿ ನಿರ್ದೇಶನದಂತೆ ಅಂಗನವಾಡಿ ಕಾರ್ಯಕರ್ತೆಯರು ಗ್ರಾಮ ಮಟ್ಟದಲ್ಲಿ ಗೃಹಲಕ್ಷ್ಮಿ ಫಲಾನುಭವಿಗಳ ಮನೆ ಮನೆಗೆ ತೆರಳಿ ನಡೆಸಿದ ಪರಿಶೀಲನೆಯ ಸಂದರ್ಭದಲ್ಲಿ ಈ ಅಂಕಿ-ಅಂಶ ಬೆಳಕಿಗೆ ಬಂದಿದೆ.
ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮಗಳಲ್ಲಿ ಈಗಾಗಲೇ ಮೃತಪಟ್ಟಿರುವ ಮಹಿಳೆಯರ ಹೆಸರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ಮುಂದುವರಿದಿರುವುದು ಕಂಡುಬಂದಿರುವ ಬೆನ್ನಲ್ಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ವಿಶೇಷ ಸಮೀಕ್ಷೆ ನಡೆಸಿದ್ದು, ಮೃತ ಫಲಾನುಭವಿಗಳ ವಿವರ ಸಂಗ್ರಹಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.ಮೃತ ಫಲಾನುಭವಿಗಳ ಹೆಸರಿನಲ್ಲಿ ಗೃಹಲಕ್ಷ್ಮಿ ಯೋಜನೆ ಹಣ ಜಮೆಯಾಗುತ್ತಿದ್ದು, ಅವುಗಳನ್ನು ಪಡೆದುಕೊಂಡಿರುವ ಮೃತರ ಕುಟುಂಬಸ್ಥರಿಗೆ ಪಡೆದುಕೊಂಡಿರುವ ಹಣವನ್ನು ಮರಳಿಸುವ ಆತಂಕ ಎದುರಾಗಿದೆ. ಇನ್ನೊಂದೆಡೆ ಸರ್ಕಾರದ ಅನುದಾನ ದುರುಪಯೋಗವಾಗಿದೆಯೇ ಎಂಬ ಪ್ರಶ್ನೆಗಳು ಚರ್ಚೆಗೆ ಗ್ರಾಸವಾಗಿದೆ.
ದಾಖಲೆ ನವೀಕರಣದ ಕೊರತೆಫಲಾನುಭವಿಗಳು ಮೃತರಾದ ನಂತರ ಕುಟುಂಬಸ್ಥರು ಸಂಬಂಧಿತ ದಾಖಲೆಗಳನ್ನು ಸಮಯಕ್ಕೆ ಸರಿಯಾಗಿ ನವೀಕರಿಸದಿರುವುದು, ಇಲಾಖೆಗೆ ಮಾಹಿತಿ ನೀಡದಿರುವುದು ಇಂತಹ ಪ್ರಕರಣಗಳಿಗೆ ಪ್ರಮುಖ ಕಾರಣ ಎಂಬುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.
ಪಾರದರ್ಶಕತೆಗೆ ಒತ್ತಾಯ
ಸರ್ಕಾರದ ಯೋಜನೆ ಅನುಷ್ಠಾನದಲ್ಲಿ ಪಾರದರ್ಶಕತೆ ಕಾಪಾಡಲು ಫಲಾನುಭವಿಗಳ ಮಾಹಿತಿಯನ್ನು ಕಾಲಕಾಲಕ್ಕೆ ನವೀಕರಿಸುವ ವ್ಯವಸ್ಥೆ ಜಾರಿಗೆ ತರಬೇಕು. ಯೋಜನೆಗಳ ಪ್ರಯೋಜನ ಅರ್ಹರಿಗೆ ತಲುಪುವಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕುಷ್ಟಗಿ ತಾಲೂಕಿನಲ್ಲಿ ಒಟ್ಟು 66472 ಗೃಹಲಕ್ಷ್ಮಿ ಫಲಾನುಭವಿಗಳ ಪೈಕಿ 554 ಫಲಾನುಭವಿಗಳು ತೆರಿಗೆ ಪಾವತಿದಾರರು ಹಾಗೂ 1358 ಮೃತ ಫಲಾನುಭವಿಗಳು ಪತ್ತೆಯಾಗಿದ್ದು, ಸರ್ವೆ ಕಾರ್ಯ ನಡೆದಿದೆ ಎಂದು ಕುಷ್ಟಗಿ ಸಿಡಿಪಿಒ ಯಲ್ಲಮ್ಮ ಹಂಡಿ ಹೇಳಿದರು.ಅಂಗನವಾಡಿ ಕಾರ್ಯಕರ್ತೆಯರು ಸಮೀಕ್ಷೆ ಕಾರ್ಯ ನಡೆಸಿದ್ದು, ಮೃತ ಫಲಾನುಭವಿಗಳ ಪಟ್ಟಿ ಸಿದ್ಧಗೊಳ್ಳುತ್ತಿದೆ. ಇಲಾಖೆಯ ಸೂಚನೆ ಅನುಸಾರವಾಗಿ ಸೂಕ್ತ ಕ್ರಮಕ್ಕೆ ಮುಂದಾಗಲಿದ್ದೇವೆ ಎಂದು ಮೇಲ್ವಿಚಾರಕಿ ಹಾಗೂ ಗೃಹಲಕ್ಷ್ಮಿ ಯೋಜನೆ ವಿಭಾಗಾಧಿಕಾರಿ ಅನ್ನಪೂರ್ಣಾ ಪಾಟೀಲ ಹೇಳಿದ್ದಾರೆ.