ಕಾರಟಗಿ: ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುವಂತೆ ನೋಡಿಕೊಳ್ಳಬೇಕು. ಅನರ್ಹ ಫಲಾನುಭವಿಗಳನ್ನು ಗುರುತಿಸಿ, ಅವರ ಮಾಹಿತಿಯನ್ನು ಸಂಬಂಧಿಸಿದ ಇಲಾಖೆಗೆ ಕೂಡಲೇ ಸಲ್ಲಿಸುವಂತೆ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ದೇವಪ್ಪ ಬಾವಿಕಟ್ಟಿ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ ಯರಡೋಣ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ನಡೆದ ರಾಜ್ಯ ಸರ್ಕಾರದ ಪಂಚ ಗ್ಯಾರೆಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಭೆಯಲ್ಲಿ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಯುವನಿಧಿ, ಅನ್ನಭಾಗ್ಯ ಯೋಜನೆಗಳ ಅನುಷ್ಠಾನ, ಸಾರ್ವಜನಿಕರಿಗೆ ದೊರೆಯುತ್ತಿರುವ ಸೌಲಭ್ಯಗಳು ಹಾಗೂ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಸವಿಸ್ತಾರವಾಗಿ ಚರ್ಚಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಸಿದರು.

ಗ್ರಾಹಕರಿಗೆ ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ವಿದ್ಯುತ್ ಬಿಲ್ ವಿತರಣೆ ಆಗಬೇಕು. ಮೀಟರ್ ರೀಡಿಂಗ್ ಪ್ರಕ್ರಿಯೆಯಲ್ಲಿ ಯಾವುದೇ ಲೋಪದೋಷಗಳಾಗದಂತೆ ಕ್ರಮ ಕೈಗೊಂಡು, ಪ್ರತಿ ಮನೆಯ ನಿಖರ ಮೀಟರ್ ರೀಡಿಂಗ್ ಆಧರಿಸಿ ಬಿಲ್ ಮಾಡಬೇಕು.ಮಹಿಳಾ ಪ್ರಯಾಣಿಕರ ಅನುಕೂಲಕ್ಕಾಗಿ ಸಿದ್ದಾಪುರ – ಮಾರುತಿಕ್ಯಾಂಪ್ – ಕಿಂದಿಕ್ಯಾಂಪ್ – ಯರಡೋಣ – ಬೂದುಗುಂಪಾ ಮಾರ್ಗದಲ್ಲಿ ಹೊಸ ಬಸ್ ಸೇವೆ ಆರಂಭಿಸುವ ಕುರಿತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಜೊತೆಗೆ, ಬಸ್ ನಿರ್ವಾಹಕರು ಮಹಿಳಾ ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಿ, ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಸಹಕರಿಸಬೇಕು ಎಂದು ತಿಳಿಸಿದರು.

ಯುವನಿಧಿ ಯೋಜನೆಯ ಪ್ರಯೋಜನಗಳನ್ನು ಹೆಚ್ಚಿನ ನಿರುದ್ಯೋಗಿ ಯುವಕರಿಗೆ ತಲುಪಿಸುವ ಬಗ್ಗೆ ಚರ್ಚಿಸಿ ಯುವಕರಿಗೆ ಉದ್ಯೋಗಾಧಾರಿತ ಕೌಶಲ್ಯಾಭಿವೃದ್ಧಿ ತರಬೇತಿ ಒದಗಿಸುವ ನಿಟ್ಟಿನಲ್ಲಿ ತಾಲೂಕು ಮಟ್ಟದಲ್ಲಿ ತರಬೇತಿ ಕೇಂದ್ರಗಳನ್ನು ಆರಂಭಿಸುವ ಕುರಿತು ಚರ್ಚಿಸಿದರು.


ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ನಿಗದಿತ ಪ್ರಮಾಣದ ಅಕ್ಕಿಯನ್ನು ಸಮಯಕ್ಕೆ ಸರಿಯಾಗಿ ವಿತರಿಸಬೇಕು. ರೇಷನ್ ಅಂಗಡಿಗಳಲ್ಲಿ ತೂಕದ ವ್ಯತ್ಯಾಸ ಅಥವಾ ಯಾವುದೇ ರೀತಿಯ ಅಕ್ರಮ ನಡೆಯದಂತೆ ಕಟ್ಟುನಿಟ್ಟಿನ ಮೇಲ್ವಿಚಾರಣೆ ವಹಿಸಲು ಅಧಿಕಾರಿಗಳಿಗೆ ಖಡಕ್ಕಾಗಿ ಸೂಚಿಸಿದರು ಸಭೆಯಲ್ಲಿ ಸರ್ಕಾರದ ಪಂಚ ಗ್ಯಾರೆಂಟಿ ಯೋಜನೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕುರಿತು ಸಮಗ್ರ ಚರ್ಚೆ ನಡೆಸಿ ಸರ್ಕಾರದ ಜನಪರ ಯೋಜನೆಗಳು ಕಟ್ಟಕಡೆಯ ಅರ್ಹ ಫಲಾನುಭವಿಗೂ ತಲುಪುವ ನಿಟ್ಟಿನಲ್ಲಿ ಎಲ್ಲರೂ ಸಮನ್ವಯದಿಂದ ಕಾರ್ಯನಿರ್ವಹಿಸುವ ಸಂಕಲ್ಪವನ್ನು ಸಭೆಯಲ್ಲಿ ಎಲ್ಲರೂ ವ್ಯಕ್ತಪಡಿಸಿದರು.

ಈ ವೇಳೆ ತಾಪಂ ಇಒ ಲಕ್ಷ್ಮೀ ಯಾದವ್, ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ನಾಗರಾಜ ಅರಳಿ, ಸದಸ್ಯರಾದ ಸೋಮನಾಥ ದೊಡ್ಡಮನೆ, ಚಂದ್ರಶೇಖರ ಉಪ್ಪಾರ, ಶಿವಕುಮಾರ, ಯಮನೂರಪ್ಪ, ರೇಣುಕಮ್ಮ ಹಾಗೂ ಗ್ರಾಪಂ ಮಾಜಿ ಉಪಾಧ್ಯಕ್ಷ ದ್ಯಾವಣ್ಣ ಅಚ್ಚಳ್ಳಿ, ಶರಣಪ್ಪ ಸುಗ್ಗನಹಳ್ಳಿ, ಉದಯ ಭಾಸ್ಕರ್ ಕಿಂದಿಕ್ಯಾಂಪ್, ಮುರುಡಪ್ಪ ಹೊಸಕುರುಬೂರು, ಪಿಡಿಒಗಳು, ಅಂಗನವಾಡಿ ಶಿಕ್ಷಕಿಯರು ಇದ್ದರು.