ಮಹದೇವಪ್ಪ ಎಂ. ಸ್ವಾಮಿಶಿರಹಟ್ಟಿ: ತಾಲೂಕಿನ ಸುಕ್ಷೇತ್ರ ಖಾನಾಪುರ ಗ್ರಾಮದ ೩೦೦ಕ್ಕೂ ಹೆಚ್ಚು ಮಹಿಳೆಯರು ₹೪ ಲಕ್ಷ ಗೃಹಲಕ್ಷ್ಮಿ ಹಣವನ್ನು ಗ್ರಾಮದಲ್ಲಿ ನಡೆಯುತ್ತಿರುವ ಕಲಬುರಗಿ ಶರಣಬಸವೇಶ್ವರ ಪುರಾಣ ಪ್ರಯುಕ್ತ ಸಾಮೂಹಿಕ ವಿವಾಹ, ಅನ್ನಪ್ರಸಾದ ಹಾಗೂ ಧಾರ್ಮಿಕ ಕಾರ್ಯಕ್ಕಾಗಿ ಸ್ವಇಚ್ಛೆಯಿಂದ ದೇಣಿಗೆಯಾಗಿ ನೀಡಿದ್ದಾರೆ.ಖಾನಾಪುರ ಗ್ರಾಮದಲ್ಲಿ ೧೯೭೬ರಲ್ಲಿ ಆರಂಭವಾದ ಶರಣಬಸವೇಶ್ವರ ಪುರಾಣ ಕಾರ್ಯಕ್ರಮಕ್ಕೆ ೫೦ ವರ್ಷ ತುಂಬುತ್ತಿದೆ. ಈ ವರ್ಷ ೫೦ನೇ ವರ್ಷದ(ಸುವರ್ಣ ಮಹೋತ್ಸವ) ಪ್ರಯುಕ್ತ ಪುರಾಣ ಪ್ರವಚನವು ಫೆ. 22ರಿಂದ ಆರಂಭವಾಗಿದೆ. ಮಾ. 8ರಂದು ಪುರಾಣ ಮಹಾಮಂಗಲವಿದೆ. ಈ ಕಾರ್ಯಕ್ರಮ ಪ್ರಯುಕ್ತ ನಿತ್ಯ ಅನ್ನದಾಸೋಹ ಸೇವೆ ಇರುತ್ತದೆ. ಅಲ್ಲದೇ ಮಾ. 8ರಂದು ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಎಲ್ಲ ಕಾರ್ಯಕ್ರಮಗಳಿಗೆ ಅನುಕೂಲವಾಗಲೆಂದು ಗ್ರಾಮದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ತಮ್ಮ ಶಕ್ತ್ಯಾನುಸಾರ 300ಕ್ಕೂ ಅಧಿಕ ಮಹಿಳೆಯರು ₹4 ಲಕ್ಷ ಹಣವನ್ನು ದೇಣಿಗೆಯಾಗಿ ನೀಡಿ ಮಾದರಿಯಾಗಿದ್ದಾರೆ.

ಅಲ್ಲದೇ ದಾನಿಗಳು, ಭಕ್ತಾದಿಗಳು ಸ್ವಯಂಪ್ರೇರಿತವಾಗಿ ದವಸ ಧಾನ್ಯಗಳನ್ನು ನೀಡಿದ್ದಾರೆ. ಪ್ರತಿನಿತ್ಯವೂ ಒಂದೊಂದು ಬಗೆಯ ಅನ್ನಪ್ರಸಾದ ಸೇವೆ ನಡೆಯುತ್ತಿದೆ. ಈ ಕಾರ್ಯಕ್ರಮ ಯಶಸ್ವಿಯಾಗಲು ಗ್ರಾಮದ ಅಪಾರ ಸಂಖ್ಯೆಯ ಮಹಿಳೆಯರು ಗ್ರಾಮದ ಹಿರಿಯರೊಂದಿಗೆ ಟೊಂಕಕಟ್ಟಿ ನಿಂತು ಶ್ರಮಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಶ್ಲಾಘಿಸಿದ್ದಾರೆ.ಮಹಿಳೆಯರ ಪಾಲ್ಗೊಳ್ಳುವಿಕೆ: ಈಗಾಗಲೇ ಮಹಿಳೆಯರು ಗೃಹಲಕ್ಷ್ಮಿ ನೆರವಿನ ಹಣವನ್ನು ದೇಣಿಗೆಯಾಗಿ ಕಮಿಟಿಯವರ ಬಳಿ ನೀಡಿದ್ದಾರೆ. ತಾಯಂದಿರ ಗೃಹಲಕ್ಷ್ಮಿ ಹಣ ಧಾರ್ಮಿಕ ಕಾರ್ಯಕ್ರಮಕ್ಕೂ ವಿನಿಯೋಗ ಆಗುತ್ತಿರುವುದಕ್ಕೆ ಎಲ್ಲರೂ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಒಂದೆಡೆ ಗೃಹಲಕ್ಷ್ಮಿ ಹಣವನ್ನು ದೇಣಿಗೆ ನೀಡುವುದು ಮಹಿಳೆಯರ ಸಮಾಜದಲ್ಲಿ ಪಾಲ್ಗೊಳ್ಳುವಿಕೆಯನ್ನು ತೋರಿಸುತ್ತದೆ. ಪುರಾಣ, ಪೂಜೆ, ಯಜ್ಞಗಳು ಧಾರ್ಮಿಕ ಪರಂಪರೆಯನ್ನು ಉಳಿಸುತ್ತವೆ. ಮತ್ತೊಂದೆಡೆ ಅನ್ನಪ್ರಸಾದ ಮತ್ತು ಸಾಮೂಹಿಕ ವಿವಾಹಗಳ ಮೂಲಕ ಬಡವರಿಗೆ ನೆರವು ಆಗಲಿದೆ ಎಂದು ಗ್ರಾಮದ ಮುಖಂಡ ಸುರೇಶ ಅಕ್ಕಿ, ಬಸವರಾಜ ಹಲಸೂರ ತಿಳಿಸಿದ್ದಾರೆ.

ಧರ್ಮಕಾರ್ಯಕ್ಕೆ ದೇಣಿಗೆ: ಸಮಾಜ ಸೇವೆಯಲ್ಲಿ ಕೈಜೋಡಿಸುವುದು ನಮಗೆ ಹೆಮ್ಮೆ. ಧರ್ಮ ಉಳಿದರೆ ಸಂಸ್ಕೃತಿ ಉಳಿಯುತ್ತದೆ. ಸಂಸ್ಕೃತಿ ಉಳಿದರೆ ಸಮಾಜ ಬೆಳೆಯುತ್ತದೆ. ಆದ್ದರಿಂದ ಗ್ರಾಮದ ಗೃಹಲಕ್ಷ್ಮಿ ಫಲಾನುಭವಿ ಮಹಿಳೆಯರು ಸ್ವಇಚ್ಛೆಯಿಂದ ಧರ್ಮಕಾರ್ಯಕ್ಕೆ ದೇಣಿಗೆ ನೀಡಿರುವುದು ನಮಗೆಲ್ಲ ಸಂತಸ ತಂದಿದೆ ಎಂದು ಗೃಹಲಕ್ಷ್ಮಿ ಹಣ ನೀಡಿರುವ ಮಹಿಳೆಯರಾದ ಪಾರಮ್ಮ ಹಿರೇಮಠ, ಪಾರಮ್ಮ ಬೆಂತೂರ ತಿಳಿಸಿದರು.