ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಕಾಂಗ್ರೆಸ್ ಸರ್ಕಾರ ಜಿಲ್ಲಾ, ತಾಲೂಕು ಪಂಚಾಯ್ತಿ ಚುನಾವಣೆ ಬರುವವರೆಗೂ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಹಾಕಲ್ಲ ಎಂದುಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.
ಪಟ್ಟಣದ ಶಾಂತಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಜನರೊಂದಿಗೆ ಜನತಾದಳ ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಚುನಾವಣೆ ವೇಳೆ ಮಾತ್ರ ಗೃಹಲಕ್ಷ್ಮಿ ಹಣ ಹಾಕುತ್ತಾರೆ. ಈ ಹಿಂದೆ ಉಪಚುನಾವಣೆ, ಸಂಸತ್ ಚುನಾವಣೆ ವೇಳೆ ಹಾಕಿದ್ದರು. ಈಗ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಬರೋವರೆಗೂ ಹಣ ಹಾಕಲ್ಲ ಎಂದು ದೂರಿದರು.ಸರ್ಕಾರದ ಗ್ಯಾರಂಟಿಗಳನ್ನು ಜನ ಸಾಮಾನ್ಯರಿಗೆ ಸರಿಯಾಗಿ ತಲುಪಿಸುತ್ತಿಲ್ಲ. ತಿಂಗಳು ತಿಂಗಳು ಗ್ಯಾರಂಟಿ ಹಣ ಕೊಡ್ತೀನಿ ಅಂತ ಅವರ ಪ್ರಣಾಳಿಕೆಯಲ್ಲಿ ಮಾತು ಕೊಟ್ಟಿದ್ದರು. ಆದರೆ, ಈಗ ಮಾತು ತಪ್ಪಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮೂರು ಉಪ ಚುನಾವಣೆಗಳ ವೇಳೆ ಮೂರು ಕ್ಷೇತ್ರಗಳಿಗೆ ಮಾತ್ರ ಒಂದೇ ಸಲ ನಾಲ್ಕು ತಿಂಗಳು ಹಣ ಜಮೆ ಅಯ್ತು. ಈಗ ಮುಂದೆ ತಾಪಂ ಹಾಗೂ ಜಿಪಂ ಚುನಾವಣೆ ಬರೋವರೆಗೂ ಜನ ಕಾಯಬೇಕು. ಕಾಂಗ್ರೆಸ್ ಅವರಿಗೆ ನಾಲಿಗೆ ಮೇಲೆ ಬದ್ದರಿಲ್ಲ ಎಂದು ಕಿಡಿಕಾರಿದರು.ರಾಮನಗರದಲ್ಲಿ ಪೆನ್ನು ಪೇಪರ್ ನಾಯಕರು ಜಿಲ್ಲೆಯಲ್ಲಿ ಫಲಾನುಭವಿಗಳ ಸಭೆ ಮಾಡಿದರು. ಅಲ್ಲಿ ಕ್ಷೇತ್ರದ ಹೆಣ್ಣು ಮಕ್ಕಳಿಗೆ ನನ್ನ ತಮ್ಮನಿಗೆ ಮತ ಹಾಕಿಲ್ಲ ಅಂದರೆ ನಮ್ಮೆಲ್ಲ ಕಾರ್ಯಕ್ರಮ ನಿಲ್ಲುಸುತ್ತೇವೆ ಎಂದು ಧಮ್ಕಿ ಹಾಕುತ್ತಾರೆ. ಈಗ ಸೋತು ಮನೆಯಲ್ಲಿ ಕೂತಿದ್ದಾರೆ ಎಂದು ಡಿಸಿಎಂ ಹಾಗೂ ಡಿಕೆ ಸುರೇಶ್ ವಿರುದ್ಧ ವಾಗ್ದಾಳಿ ನಡೆಸಿದರು.ಬೈಕ್ ಜಾಥಾ, ಜೆಸಿಬಿ ಮೂಲಕ ನಿಖಿಲ್‌ಗೆ ಸೇಬಿನ ಹಾರ
ಮಳವಳ್ಳಿ:ಜನರೊಂದಿಗೆ ಜನತಾದಳ ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲು ಪಟ್ಟಣಕ್ಕೆ ಆಗಮಿಸಿದ
ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರಿಗೆ ಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು.ಪಟ್ಟಣದ ಹೊರವಲಯ ಶ್ರೀದಂಡಿ ಮಾರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ ನಿಖಿಲ್ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದರು. ನಂತರ ಬೈಕ್ ಜಾಥಾದಲ್ಲಿ ಜೆಡಿಎಸ್ ಕಾರ್ಯಕರ್ತನ ಬೈಕ್ ನಲ್ಲಿ ಮೆರವಣಿಗೆ ಮೂಲಕ ಪಟ್ಟಣಕ್ಕೆ ಆಗಮಿಸಿದರು.
ನಗರದ ಪ್ರಮುಖ ವೃತ್ತದಲ್ಲಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಜೆಸಿಬಿ ಮೂಲಕ ಸೇಬಿನ ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತಿಸಿದರು. ಬೈಕ್ ರ್ಯಾಲಿಯಲ್ಲಿ ಸಹಸ್ರಾರು ಜೆಡಿಎಸ್ ಕಾರ್ಯಕರ್ತರು ಪಾಲ್ಗೊಂಡು ಯುವ ನಾಯಕನಿಗೆ ಬೆಂಬಲ ಸೂಚಿಸಿದರು.